ಪ್ರಗತಿಪರ ಕೃಷಿಕ ವೆಂಕಟೇಶಪ್ಪ ಅವರು ಅನುಸರಿಸುತ್ತಿರುವ “ಗುಣಿರಾಗಿ ಪದ್ಧತಿ’ಯಲ್ಲಿ ಬಹಳಷ್ಟು ವಿಶೇಷತೆ ಇದೆ. ಇದು ಮಣ್ಣು- ನೀರು ಸೂಕ್ತ ನಿರ್ವಹಣೆಗೆ ಸಹಾಯಕ ಎಂಬ ಅಂಶ ಮನದಟ್ಟಾಗುತ್ತದೆ. ಸಾಮಾನ್ಯವಾಗಿ ರಾಗಿ ಬಿತ್ತನೆ ಒತ್ತೂತ್ತಾಗಿ ನಡೆಯುತ್ತದೆ. ಹೆಚ್ಚು ಸಸಿ, ಹೆಚ್ಚು ಇಳುವರಿ ಎಂಬ ಭಾವನೆ ಇರುವುದೇ ಇದಕ್ಕೆ ಕಾರಣ. ಆದರೆ ಗುಣಿರಾಗಿ ಪದ್ಧತಿಯಲ್ಲಿ ಎರಡು ಅಡಿಗೊಂದು ಸಸಿ, ಸಾಲಿನಿಂದ ಸಾಲಿಗೂ ಎರಡು ಅಡಿ ಅಂತರ ನೀಡಲಾಗಿದೆ. ಸಾಂಪ್ರದಾಯಿಕ ವಿಧಾನದಲ್ಲಿ ರಾಗಿ ಬೆಳೆಯುವವರು ಇಂಥ ಪದ್ಧತಿ ಕೇಳಿ ಇಷ್ಟೊಂದು ಅಂತರ ನೀಡುತ್ತಾರೆಯೇ ಎಂದು ಅಚ್ಚರಿ ಪಡಬಹುದು. ವೆಂಕಟೇಶಪ್ಪ ಅವರು ಅನುಸರಿಸುತ್ತಿರುವ ಗುಣಿರಾಗಿ ಪದ್ಧತಿ ನೋಡಿದವರು ಆರಂಭದಲ್ಲಿ ಇದೇ ರೀತಿ ಅಚ್ಚರಿ ವ್ಯಕ್ತಪಡಿಸಿದ್ದರು. ಪೈರು ಸಂಪೂರ್ಣ ಬೆಳೆದ ನಂತರವೂ ಅವರ ಅಚ್ಚರಿ ದುಪ್ಪಟ್ಟಾಗಿತ್ತು. ಇದಕ್ಕೆ ಕಾರಣ, ಪೈರು ಸಮೃದ್ಧವಾಗಿ ಬೆಳೆದು ಅತ್ಯಧಿಕ ಸಂಖ್ಯೆಯಲ್ಲಿ ತೆಂಡೆ ಮೂಡಿದ್ದು. ಬಳಿಕ ಈ ಪದ್ಧತಿ ಅನುಸರಿಸುವವರ ಸಂಖ್ಯೆ ಹೆಚ್ಚಳವಾಯಿತು.
ಜೈವಿಕ ಪೋಷಕಾಂಶ
ಸಸ್ಯದ ಬೇರು ವಿಸ್ತಾರವಾಗಿ ಬೆಳೆಯಲು ಹೆಚ್ಚು ಜಾಗ ಅವಶ್ಯಕ. ಇದರಿಂದ ಪೈರು ಉತ್ತಮ ಬೆಳವಣಿಗೆ ಹೊಂದುತ್ತದೆ. ಇಳುವರಿ ಕೂಡ ಸಮೃದ್ಧವಾಗಿರುತ್ತದೆ. ಒತ್ತೂತ್ತಾಗಿ ಬಿತ್ತನೆ/ನಾಟಿ ಮಾಡಿದರೆ ಸಸ್ಯದ ಬೇರುಗಳಲ್ಲಿಯೇ ಬೆಳವಣಿಗೆ ಹೊಂದಲು ಪೈಪೋಟಿ ಉಂಟಾಗುತ್ತದೆ. ವಾಯು, ಪೋಷಕಾಂಶ, ನೀರು ಸಮರ್ಪಕವಾಗಿ ದೊರೆಯುವುದಿಲ್ಲ. ಇದರಿಂದ ಇಳುವರಿ ಕುಂಠಿತವಾಗುತ್ತದೆ. ಗುಣಿರಾಗಿ ಪದ್ಧತಿಯಿಂದ, ಮಣ್ಣು ಹೆಚ್ಚು ಫಲವತ್ತಾಗುತ್ತದೆ. ಇದಕ್ಕೆ ಕಾರಣ, ಪೂರೈಕೆ ಆಗುವ ಸಾವಯವ/ ಜೈವಿಕ ಪೋಷಕಾಂಶ. ಇವೆಲ್ಲದರ ಜೊತೆಗೆ ಅತ್ಯಂತ ಕಡಿಮೆ ನೀರು ಪೂರೈಕೆ. ಕೊಯ್ಲು ಆದ ಬಳಿಕ ಪೈರಿನ ಬೇರು ಮಣ್ಣಿನಲ್ಲಿಯೇ ಕಳಿಯುವುದು ಸಹ ಫಲವತ್ತತೆ ಹೆಚ್ಚಲು ಸಹಾಯಕ. ನಿಸರ್ಗ, ಆರೋಗ್ಯಕರ ಬಿತ್ತನೆ ಬೀಜಕ್ಕೆ ಅತ್ಯಧಿಕ ಸಾಮರ್ಥ್ಯ ನೀಡಿರುತ್ತದೆ. ಇದರ ಫಲಿತಾಂಶ, ಅದು ಬೆಳೆಯುವ ಪರಿಸರದಲ್ಲಿ ದೊರಕುವ ಸ್ಥಳಾವಕಾಶ, ಪೋಷಕಾಂಶಗಳ ಮೇಲೆ ಅವಲಂಬಿತವಾಗಿರುತ್ತದೆ.
– ಕುಮಾರ್