Advertisement

ಪುನರ್ವಸತಿಗೆ ಅರಣ್ಯ ತೊರೆದ ಹಾಡಿಗಳ ಗೋಳು

10:12 PM Jul 10, 2019 | Team Udayavani |

ಹುಣಸೂರು: ಕೇಂದ್ರ ಸರ್ಕಾರದ ತಲಾ 10 ಲಕ್ಷ ರೂ. ಪರಿಹಾರ ಪ್ಯಾಕೇಜ್‌ ಯೋಜನೆಯಡಿ ಅರಣ್ಯ ತೊರೆದು ಸ್ವಂತ ಸೂರು, ಜಮೀನು ಪಡೆಯುವ ಮೂಲಕ ನೆಮ್ಮದಿ ಜೀವನ ನಡೆಸುವ ಕನಸು ಹೊಂದಿದ್ದ ಗಿರಿಜನರಿಗೆ ಇದೀಗ ದಿಕ್ಕು ತೋಚದಂತಾಗಿದೆ.

Advertisement

ನಾಗರಹೊಳೆ ಉದ್ಯಾನವನದಿಂದ ತಾಲೂಕಿನ ಹೆಬ್ಬಳ್ಳ ಗಿರಿಜನ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡ ಆದಿವಾಸಿಗಳ ಬದುಕು ಅತಂತ್ರವಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೀಡಿದ್ದ ಭರವಸೆಗಳು ಹುಸಿಯಾಗಿವೆ.

ಕೂಲಿ ಜೀವನ: ನಾಗರಹೊಳೆ ಉದ್ಯಾನವನದೊಳಗಿನ ಗೋಣಿಗದ್ದೆ, ಜಂಗಲ್‌ಹಾಡಿ, ಚೇಣಿಹಡ್ಲುಹಾಡಿ, ಗದ್ದೆಹಾಡಿ, ಕೊಳಂಗೇರಿಹಾಡಿ, ಕೇರಳದಂಚಿನ ಮಚ್ಚಾರು ಹಾಡಿಗಳಿಂದ 2014ರಲ್ಲಿ ಕೇಂದ್ರ ಸರ್ಕಾರದ 10 ಲಕ್ಷ ರೂ. ಪ್ಯಾಕೇಜ್‌ ಯೋಜನೆಯಡಿ 130 ಕುಟುಂಬಗಳು ಸ್ಥಳಾಂತರಗೊಂಡಿದ್ದವು. ಪುನರ್ವಸತಿ ಕೇಂದ್ರದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ, ಕೌಶಲ್ಯ ತರಬೇತಿ ಹಾಗೂ ಕೃಷಿ ಕೆಲಸಗಳಿಗೆ ಪ್ರೋತ್ಸಾಹವಿಲ್ಲದೇ ಇಂದಿಗೂ ಕೊಡಗಿನ ಕೂಲಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ.

ಭೂಮಿಯಿದ್ದರೂ ಕೃಷಿ ಇಲ್ಲ: ಪ್ರತಿ ಕುಟುಂಬಕ್ಕೆ ತಲಾ ಮೂರು ಎಕರೆ ಭೂಮಿ ನೀಡಿದ್ದು, ಇದುವರೆಗೂ ಜಮೀನಿನ ಗಡಿ ಗುರುತಿಸಿಲ್ಲ. ಅಕ್ಕಪಕ್ಕದ ಹಳ್ಳಿಗಳ ರೈತರು ತಮ್ಮ ಜಾನುವಾರುಗಳನ್ನು ಗಿರಿಜನರ ಭೂಮಿಗೆ ಮೇಯಲು ಬಿಡುತ್ತಿದ್ದಾರೆ. ಸುತ್ತಮತ್ತ ಒತ್ತುವರಿಯೂ ಆಗಿದೆ. ಜಮೀನಿಗೆ ತೆರಳಲು ಸಮರ್ಪಕ ರಸ್ತೆ ಇಲ್ಲ, ಹೊಲ ಉಳಲು ಎತ್ತುಗಳಿಲ್ಲ.

ಒಬ್ಬರಿಗೂ ಗಂಗಾಕಲ್ಯಾಣ ಯೋಜನೆಯಡಿ ನೀರಾವರಿ ಸೌಲಭ್ಯ ಕಲ್ಪಿಸಿಲ್ಲ. ಹೀಗಾಗಿ ಮಳೆಯನ್ನೇ ಆಶ್ರಯಿಸಿದ್ದಾರೆ. ಕೃಷಿ ಹಾಗೂ ತೋಟಗಾರಿಕೆಗಾಗಿ ಯಾವುದೇ ಇಲಾಖೆಯಿಂದ ಪ್ರೋತ್ಸಾಹವಿಲ್ಲ. ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇಷ್ಟೆಲ್ಲಾ ಸಮಸ್ಯೆ ಎದುರಿಸುತ್ತಿದ್ದರೂ ಯಾವೊಬ್ಬ ಜನಪ್ರತಿನಿಧಿಗಳು ಇತ್ತ ತಿರುಗಿ ನೋಡಿಲ್ಲ.

Advertisement

ಶೆಡ್‌ನ‌ಲ್ಲೇ ಅಂಗನವಾಡಿ: ಐದು ವರ್ಷಗಳಿಂದ ಸಮುದಾಯ ಭವನ ನಿರ್ಮಿಸುತ್ತಲೇ ಇದ್ದಾರೆ. 20 ಮಕ್ಕಳಿರುವ ಅಂಗನವಾಡಿಗೆ ಸ್ವಂತ ಕಟ್ಟಡವಿಲ್ಲದೆ ಶೆಡ್‌ನ‌ಲ್ಲೇ ನಡೆಯುತ್ತಿದ್ದು, ಬಾಣಂತಿಯರ ಅಡುಗೆ ತಯಾರಿ, ಮಕ್ಕಳಿಗೆ ಪಾಠ ಸಹ ಈ ಶೆಡ್‌ನ‌ಲ್ಲೇ ನಡೆಯಲಿದೆ. ಇನ್ನು ಸಮರ್ಪಕ ಆರೋಗ್ಯ ಸೇವೆ, ಶಿಕ್ಷಣಕ್ಕೆ ಯಾವುದೇ ಪ್ರೋತ್ಸಾಹವಿಲ್ಲ.

ಮದ್ಯ ಮಾರಾಟ: ಇಷ್ಟೆಲ್ಲಾ ಸಮಸ್ಯೆಗಳ ರಾಡಿಯ ನಡುವೆಯೂ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಒಂದೇ ತಿಂಗಳಲ್ಲಿ ಇಬ್ಬರು ಮಹಿಳೆಯರೂ ಸೇರಿದಂತೆ 9 ಮಂದಿ ಕುಡಿತದಿಂದ ಸಾವನ್ನಪ್ಪಿದ್ದರು. ಆದರೂ ಮದ್ಯ ಮಾರಾಟ ಮಾತ್ರ ನಿಂತಿಲ್ಲ. ನಿತ್ಯ ಕೂಲಿ ಮಾಡಿ ಬರುವ ಮಂದಿ ಕುಡಿತಕ್ಕೆ ದಾಸರಾಗಿದ್ದಾರೆ.

ಬಾಕಿ ಹಣ ವಿತರಿಸಿಲ್ಲ: ಪ್ರತಿ ಕುಟುಂಬದ ಹತ್ತು ಲಕ್ಷ ರೂ. ಪ್ಯಾಕೇಜ್‌ನಲ್ಲಿ 3 ಎಕರೆ ಭೂಮಿ, ಮನೆ, ಮೂಲಭೂತ ಸೌಕರ್ಯ ಹಾಗೂ ಕುಟುಂಬ ನಿರ್ವಹಣೆಗಾಗಿ 1 ಲಕ್ಷ ರೂ.ಠೇವಣಿ ಇಡಲಾಗಿದ್ದು, ಕೇಂದ್ರದ ಉಳಿಕೆಯ 73 ಲಕ್ಷ ರೂ. ವಿತರಿಸಿಲ್ಲ.

ಅರಣ್ಯಇಲಾಖೆ ನಿರ್ಲಕ್ಷ್ಯ: ಉದ್ಯಾನವನದಿಂದ ಇಲ್ಲಿಗೆ ಕರೆತಂದು ಸಮರ್ಪಕ ಪುನರ್ವಸತಿ ಕಲ್ಪಿಸುವ ಜವಾಬ್ದಾರಿ ಹೊತ್ತಿರುವ ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರಿದ್ದು, ಆದಿವಾಸಿಗಳ ಬದುಕನ್ನು ಅತಂತ್ರಗೊಳಿಸಿದೆ. ಪುನರ್ವಸತಿ ಕೇಂದ್ರದ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಯಾಗಿದ್ದ ಶಿಖಾ ಹೊರತು ಪಡಿಸಿದರೆ, ಇನ್ಯಾವ ಅರಣ್ಯಾಧಿಕಾರಿಗಳಾಗಲಿ, ಜಿಲ್ಲಾಧಿಕಾರಿ ಕೂಡ ಇತ್ತ ತಿರುಗಿ ನೋಡಿಲ್ಲ. ಈ ಸಂಬಂಧ ಸಭೆಯನ್ನೂ ನಡೆಸಿಲ್ಲ.

ಜಾಗ ಕೊಡಿ ಅಂಗನವಾಡಿ ನಿರ್ಮಾಣ: ಪುನರ್ವಸತಿ ಕೇಂದ್ರದ ಕುಟುಂಬದ ಎಲ್ಲರೂ ಕೂಡ ಕೂಲಿಗೆ ಹೋಗುತ್ತಾರೆ. ಇಲ್ಲಿನ ಮಕ್ಕಳ ಪರಿಸ್ಥಿತಿಕಂಡು ಸಂಜೆವರೆಗೆ ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದೆಂದು ಅಂಗನವಾಡಿ ಕೇಂದ್ರ ನೀಡಿದ್ದೇವೆ. ಜಾಗ ನೀಡಿದಲ್ಲಿ ಇಲಾಖೆ ಹಾಗೂ ಎನ್‌ಆರ್‌ಇಜಿ ಯೋಜನೆಯಡಿ 8 ಲಕ್ಷ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುವುದು ಎಂದು ಸಿಡಿಪಿಒ ನವೀನ್‌ಕುಮಾರ್‌ ತಿಳಿಸಿದ್ದಾರೆ.

ಅರಣ್ಯಾಧಿಕಾರಿಗಳು ಏನಂತಾರೆ?: ಈಗಾಗಲೆ ಹೆಬ್ಬಳ್ಳ ಕೇಂದ್ರದ ಗಿರಿಜನರಿಗೆ ಪಹಣಿ ನೀಡಲಾಗಿದೆ. ಅವರೇ ಭೂಮಿ ಅಭಿವೃದ್ಧಿಪಡಿಸಿಕೊಳ್ಳಬೇಕು. ಕೃಷಿ ಸೇರಿದಂತೆ ಮೂಲಭೂತ ಸೌಕರ್ಯಕ್ಕಾಗಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆ ಮೂಲಕ ಪಡೆದುಕೊಳ್ಳಬೇಕು. ಸಮುದಾಯದ ಪ್ಯಾಕೇಜ್‌ ಹಣವನ್ನು ನೇರವಾಗಿ ನೀಡಿ ಎಂದು ಕೇಳುತ್ತಿದ್ದಾರೆ. ಆದರೆ, ಹಿಂದಿನ ಸಭೆಯಲ್ಲಿ ಸಮುದಾಯ ಆಧಾರಿತ ಕಾರ್ಯಕ್ರಮಗಳಿಗೆ ಮಾತ್ರ ಬಳಸಬೇಕೆಂದು ನಿರ್ಧರಿಸಿರುವುದರಿಂದ ನೇರ ಹಣ ಪಾವತಿಗೆ ಅವಕಾಶವಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಕಾಡಿನೊಳಗಿದ್ದ ನಮ್ಮನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಲವು ಆಸೆ ಆಮಿಷಗಳನ್ನೊಡ್ಡಿ ಮುಖ್ಯವಾಹಿನಿಗೆ ಕರೆತರುತ್ತೇವೆಂದು ಹೇಳಿದ್ದರು. ಆದರೆ, ಇದೀಗ ಯಾವುದೇ ಸೌಲಭ್ಯವಿಲ್ಲದೇ ಅತಂತ್ರವಾಗಿದ್ದೇವೆ. ಇಲ್ಲಿನ ಡಬ್ಲೂéಸಿಎಸ್‌ ಸ್ವಯಂಸೇವಾ ಸಂಸ್ಥೆಯು ಕುಟುಂಬದ ಆರೋಗ್ಯ, ಶಿಕ್ಷಣ, ಕೃಷಿ ಚಟುವಟಿಕೆಗೆ ಪ್ರೋತ್ಸಾಹಿಸುತ್ತಿರುವುದರಿಂದ ನಮ್ಮ ಜೀವನ ಸ್ಪಲ್ಪಮಟ್ಟಿಗೆ ಸುಧಾರಿಸಿದೆ.
-ಪುಟ್ಟಸ್ವಾಮಿ, ಆದಿವಾಸಿ ಮುಖ್ಯಸ್ಥ

ಕುಟುಂಬಗಳಿಗೆ ನೀಡಿರುವ ಜಮೀನಿಗೆ ಗಂಗಾಕಲ್ಯಾಣ ಯೋಜನೆ ಕಲ್ಪಿಸಿಲ್ಲ. ಇದರಿಂದ ಕೃಷಿ ಮಾಡಲಾಗುತ್ತಿಲ್ಲ. ಶೆಟ್ಟಳ್ಳಿ ಕೇಂದ್ರದವರಂತೆ ಕೇರಳದವರಿಗೆ ಶುಂಠಿ ಬೆಳೆಗೆ ಜಮೀನು ನೀಡಿದಲ್ಲಿ ಪಂಪ್‌ಸೆಟ್‌ ಹಾಕಿಸಿಕೊಡುತ್ತಾರಂತೆ. ಇನ್ನೇನು ವರ್ಷಕಾಲ ಗುತ್ತಿಗೆ ನೀಡುವ ಚಿಂತನೆಯಲ್ಲಿದ್ದೇವೆ.
-ರಮೇಶ, ಹೆಬ್ಬಳ್ಳ

* ಸಂತಪ್‌ಕುಮಾರ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next