Advertisement

ಎಚ್‌3ಎನ್‌2: ಆರೋಗ್ಯದ ಬಗೆಗಿರಲಿ ವಿಶೇಷ ಕಾಳಜಿ

01:06 AM Mar 11, 2023 | Team Udayavani |

ದೇಶಾದ್ಯಂತ ಬಿಸಿಲಿನ ತೀವ್ರತೆ ಹೆಚ್ಚುತ್ತಿರುವಂತೆಯೇ ಎಚ್‌3ಎನ್‌2 ವೈರಸ್‌ ಕ್ಷಿಪ್ರಗತಿಯಲ್ಲಿ ಹರಡತೊಡಗಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಸಾಮಾನ್ಯವಾಗಿ ಬೇಸಗೆ ಋತುವಿನಲ್ಲಿ ಕಾಣುವ ಸಾಂಕ್ರಾಮಿಕ ಜ್ವರ ಇದಾಗಿದ್ದರೂ ಈ ಬಾರಿ ವೈರಸ್‌ ರೂಪಾಂತರ ಹೊಂದಿದ್ದು ದೇಶವ್ಯಾಪಿಯಾಗಿ ಜನರನ್ನು ಕಾಡತೊಡಗಿದೆ. ಈ ವೈರಸ್‌ ಮಾರಣಾಂತಿಕವಲ್ಲವಾದರೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರು, 15ಕ್ಕಿಂತ ಕೆಳ ಹರೆಯದ ಮಕ್ಕಳು, ಗರ್ಭಿಣಿ, ಬಾಣಂತಿಯರು ನಿರ್ಲಕ್ಷ್ಯ ವಹಿಸದೆ ತಜ್ಞ ವೈದ್ಯರಿಂದ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕಿದೆ. ಈ ಸಂಬಂಧ ಈಗಾಗಲೇ ಕೇಂದ್ರ ಸರಕಾರ ಎಲ್ಲ ರಾಜ್ಯ ಸರಕಾರಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆಯಲ್ಲದೆ ಕೆಲವೊಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

Advertisement

ಈವರೆಗೆ ದೇಶದಲ್ಲಿ ಎಚ್‌3ಎನ್‌2 ವೈರಸ್‌ಗೆ ಕರ್ನಾಟಕ ಮತ್ತು ಹರಿಯಾಣದ ತಲಾ ಒಬ್ಬರು ಸಾವನ್ನಪ್ಪಿರುವುದಾಗಿ ಅಧಿಕೃತವಾಗಿ ಕೇಂದ್ರದ ಆರೋಗ್ಯ ಇಲಾಖೆ ಶುಕ್ರವಾರ ತಿಳಿಸಿದೆ. ಈ ಎರಡೂ ಪ್ರಕರಣಗಳಲ್ಲಿ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಹಿರಿಯ ನಾಗರಿಕರಿಗೆ ಸೋಂಕು ತಗಲಿದ್ದರಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಇಲಾಖೆ ಇದೇ ವೇಳೆ ಸ್ಪಷ್ಟಪಡಿಸಿದೆ.

ಕಳೆದ ಕೆಲವು ವಾರಗಳಿಂದೀಚೆಗೆ ದೇಶದ ಹಲವು ರಾಜ್ಯಗಳಲ್ಲಿ ತಾಪಮಾನ ಒಂದೇ ಸಮನೆ ಹೆಚ್ಚಾಗುತ್ತಿರುವುದರ ಜತೆಯಲ್ಲಿ ಬಿಸಿ ಗಾಳಿಯೂ ಬೀಸುತ್ತಿದೆ. ಇದರಿಂದಾಗಿ ಸೋಂಕಿನ ಹರಡುವಿಕೆ ತೀವ್ರತೆ ಕೊಂಚ ಹೆಚ್ಚಾಗಿದೆ. ಇತರ ವೈರಲ್‌ ಜ್ವರಗಳ ಮಾದರಿಯಲ್ಲಿಯೇ ಎಚ್‌3ಎನ್‌2 ಸೋಂಕಿತರನ್ನೂ ಜ್ವರ ಕಾಡುತ್ತದೆ. ಇದರ ಜತೆಯಲ್ಲಿ ಶೀತ, ನೆಗಡಿ, ತಲೆನೋವು, ಮೈಕೈ ನೋವು, ಕಫ‌ ಸೋಂಕಿತರನ್ನು ಬಾಧಿಸುತ್ತದೆ. ಕೊರೊನಾ ಸೋಂಕಿತರಲ್ಲೂ ಇದೇ ತೆರನಾದ ಲಕ್ಷಣಗಳು ಕಂಡುಬರುವುದರಿಂದ ಜನರು ಸಹಜವಾಗಿಯೇ ಒಂದಿಷ್ಟು ಹೆಚ್ಚು ಆತಂಕಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಥ ಯಾವುದೇ ಲಕ್ಷಣಗಳು ಕಂಡುಬಂದರೆ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಸೋಂಕನ್ನು ಖಚಿತಪಡಿಸಿಕೊಂಡು ಬಳಿಕ ಚಿಕಿತ್ಸೆ ಪಡೆದುಕೊಳ್ಳುವಂತೆ ಆರೋಗ್ಯ ಇಲಾಖೆ ಜನರಿಗೆ ಸಲಹೆ ನೀಡಿದೆ.

ಏತನ್ಮಧ್ಯೆ ಕಳೆದೆರಡು ತಿಂಗಳುಗಳಿಂದೀಚೆಗೆ ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ತುಸು ಹೆಚ್ಚಳ ಕಂಡುಬಂದಿದೆ. ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಅಧಿಕ ಸಂಖ್ಯೆಯ ಪ್ರಕರಣಗಳು ಪತ್ತೆಯಾಗಿವೆ. ಶುಕ್ರವಾರ ಬೆಳಗ್ಗೆವರೆಗಿನ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಸದ್ಯ ಕೊರೊನಾದ 3,294 ಸಕ್ರಿಯ ಪ್ರಕರಣಗಳಿವೆ. ಕಳೆದೊಂದು ದಿನದಲ್ಲಿ ಹೊಸದಾಗಿ 440 ಪ್ರಕರಣಗಳು ವರದಿಯಾಗಿವೆ. ಕಳೆದೊಂದು ವಾರದಿಂದೀಚೆಗೆ ದೇಶದಲ್ಲಿ ಹೋಳಿ ಹಬ್ಬದ ಸಂಭ್ರಮವಿದ್ದುದರಿಂದ ಜನರು ನಿರ್ಲಕ್ಷ್ಯ ವಹಿಸಿದ್ದರಿಂದಾಗಿ ಮತ್ತು ಎಚ್‌3ಎನ್‌2 ವೈರಸ್‌ನ ಕಾಟದಿಂದಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವುದರಿಂದಾಗಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿರಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಪ್ರಸಕ್ತ ವರ್ಷ ದೇಶ ವಿಚಿತ್ರ ಹವಾಮಾನ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದ್ದು ದೇಶದ ಬಹುತೇಕ ಎಲ್ಲೆಡೆ ಬೇಸಗೆ ಆರಂಭದಲ್ಲಿಯೇ ಬಿಸಿಲಿನ ಝಳ ಹೆಚ್ಚಾಗಿದೆ. ಋತುಮಾನದ ಪ್ರಕಾರ ಮಳೆಗಾಲ ಆರಂಭಕ್ಕೆ ಇನ್ನೂ ಎರಡೂವರೆ ತಿಂಗಳುಗಳಿರುವಂತೆಯೇ ಇಡೀ ದಕ್ಷಿಣ ಭಾರತ ಅದರಲ್ಲೂ ಕರಾವಳಿ ಬಿಸಿಲಿನ ಬೇಗೆಯಿಂದ ಬೇಯತೊಡಗಿದೆ. ಇದರ ನಡುವೆಯೇ ಕೊರೊನಾ, ಎಚ್‌3ಎನ್‌2 ಸೋಂಕು ಕಾಡತೊಡಗಿದೆ. ಈ ಎಲ್ಲ ಬೆಳವಣಿಗೆಗಳು ದೇಶದ ಜನರಲ್ಲಿ ಮತ್ತೂಮ್ಮೆ ಆರೋಗ್ಯದ ಬಗೆಗೆ ಎಚ್ಚರಿಕೆ ವಹಿಸುವಂತೆ ಮಾಡಿದೆ.

Advertisement

ಎಚ್‌3ಎನ್‌2 ಸೋಂಕಿನ ಲಕ್ಷಣ ಕಂಡುಬಂದಲ್ಲಿ ಅದರಲ್ಲೂ ಮುಖ್ಯವಾಗಿ ಅನಾರೋಗ್ಯ ಪೀಡಿತರು, ಮಕ್ಕಳು ತತ್‌ಕ್ಷಣ ಸೋಂಕು ಪತ್ತೆ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಂಡಲ್ಲಿ ಯಾವುದೇ ಅಪಾಯವಿಲ್ಲ. ಶುಚಿತ್ವ, ಗುಂಪು ಗೂಡದಿರುವುದು ಮತ್ತಿತರ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದರಿಂದ ಈ ಸೋಂಕಿನಿಂದ ಪಾರಾಗಬಹುದಾಗಿದೆ. ಆರೋಗ್ಯ ಇಲಾಖೆಯ ಪ್ರಕಾರ ಈ ಮಾಸಾಂತ್ಯದವರೆಗೆ ಸೋಂಕಿನ ತೀವ್ರತೆ ಇರುವ ಸಾಧ್ಯತೆ ಇದ್ದು ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಗತ್ಯ. ರಾಜ್ಯ ಸರಕಾರ ಕೂಡ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಸೋಂಕು ಪರೀಕ್ಷೆ, ಚಿಕಿತ್ಸೆಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿಕೊಡುವ ಮೂಲಕ ಜನರಲ್ಲಿ ಧೈರ್ಯ ತುಂಬಬೇಕು.

Advertisement

Udayavani is now on Telegram. Click here to join our channel and stay updated with the latest news.

Next