Advertisement

ಎಚ್‌3ಎನ್‌2 ನಿಯಂತ್ರಣಕ್ಕೆ ಕಣ್ಗಾವಲು ಕಾರ್ಯಜಾಲ

02:32 AM Mar 11, 2023 | Team Udayavani |

ಹೊಸದಿಲ್ಲಿ: ಕೊರೊನಾ ಬಳಿಕ ಇದೀಗ ದೇಶದಲ್ಲಿ ಎಚ್‌3 ಎನ್‌2 ವೈರಾಣುವಿನ ಭೀತಿ ಹೆಚ್ಚಿದೆ. ಸೋಂಕು ಪ್ರಕರಣಗಳ ಪ್ರತಿಕ್ಷಣದ ಮೇಲ್ವಿಚಾರಣೆಗಾಗಿ ಕೇಂದ್ರ ಆರೋಗ್ಯ ಸಚಿವಾಲಯ ಸಮಗ್ರ ರೋಗ ನಿಯಂತ್ರಣ ಕಣ್ಗಾವಲು ಕಾರ್ಯಜಾಲ (ಐಡಿಎಸ್‌ಪಿ)ವನ್ನು ಸಿದ್ಧಪಡಿಸಿದೆ. ಕಾರ್ಯಕ್ರಮದ ಅನ್ವಯ, ಮಕ್ಕಳು, ವೃದ್ಧರು ಹಾಗೂ ಇತರ ರೋಗಗಳಿರುವ ಜನರಲ್ಲಿ ಎಚ್‌3ಎನ್‌2 ಸೋಂಕು ದೃಢಪಟ್ಟಿದ್ದರೆ, ಅಂಥವರಲ್ಲಿ ಸೋಂಕಿನ ತೀವ್ರತೆ, ಪರಿಣಾಮದ ಮೇಲೆ ಗಮನಹರಿಸಲಾಗುತ್ತಿದೆ. ಅಲ್ಲದೇ ಇಂಥ ಗುಂಪಿನ ಜನರ ಮೇಲೆ ಸೋಂಕಿನಿಂದಾಗುತ್ತಿರುವ ಮರಣ ಪ್ರಮಾಣದ ಮೇಲೂ ನಿಗಾ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸಾಮಾನ್ಯವಾಗಿ ಕಾಲೋಚಿತವಾಗಿ ಶೀತಜ್ವರ ಪ್ರಕರಣಗಳು ವರದಿಯಾಗುತ್ತವೆ. ಆದರೆ ಎಚ್‌3ಎನ್‌2 ನಿಂದ ಶುರುವಾಗಿರುವ ಶೀತಜ್ವರವು ಹೆಚ್ಚಿನ ಜನರಲ್ಲಿ ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡುತ್ತಿದ್ದು, ಈಗಾಗಲೇ ಪ್ರಪಂಚ ದಾದ್ಯಂತ ಪ್ರಕರಣಗಳು ಏರಿಕೆಯಾಗಿವೆ. ಈ ಹಿನ್ನೆಲೆ ದೇಶದಲ್ಲಿ ಈ ಸಮಸ್ಯೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಐಡಿಎಸ್‌ಪಿ ಸ್ಥಾಪಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

ಇನ್ನು ಎಚ್‌3ಎನ್‌2 ನಿಂದ ದೇಶದಲ್ಲಿ ಈವರೆಗೆ 2 ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಸರಕಾರ ತಿಳಿಸಿದೆ. ಆದರೆ ಅನ್ಯಮೂಲಗಳು ಒಟ್ಟು ಸಾವಿನ ಸಂಖ್ಯೆ 6 ಎಂದು ತಿಳಿಸಿದ್ದು, ಈ ಬಗ್ಗೆ ಇನ್ನೂ ಖಚಿತ ಮಾಹಿತಿ ದೊರೆತಿಲ್ಲ.

ಎಚ್‌1ಎನ್‌1 ಉಪತಳಿ
ಹಂದಿಜ್ವರಕ್ಕೆ ಕಾರಣವಾಗಿದ್ದ ಎಚ್‌1ಎನ್‌1 ವೈರಾಣುವಿನ ರೂಪಾಂತರಿಯೇ ಎಚ್‌3ಎನ್‌2 ವೈರಾಣು ಆಗಿದ್ದು, ನ್ಯುಮೋನಿಯ ಸೇರಿದಂತೆ ಉಸಿರಾಟದ ಸಮಸ್ಯೆಗಳನ್ನು ಹೊಂದಿರುವವರಲ್ಲಿ ಸೋಂಕು ಗಂಭೀರ ಪರಿಣಾಮವನ್ನು ಉಂಟು ಮಾಡುತ್ತಿದೆ. ಈ ಹಿನ್ನೆಲೆ ವೈರಾಣುವಿನ ಕುರಿತು ಹೆಚ್ಚಿನ ನಿಗಾ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಗಸೂಚಿ ಬಿಡುಗಡೆ
ಮಕ್ಕಳು, ವೃದ್ಧರು ಹಾಗೂ ಇತರೆ ಆರೋಗ್ಯ ಸಮಸ್ಯೆ ಹೊಂದಿರುವವರು ಸೋಂಕಿನ ಬಗ್ಗೆ ಹೆಚ್ಚಿನ ಗಮನಹರಿಸಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ಅಲ್ಲದೇ, ಕೊರೋನಾ ಸಂದರ್ಭದಲ್ಲಿನ ನಿಯಮ ಮಾರ್ಗಸೂಚಿಗಳನ್ನು ಮತ್ತೆ ಬಿಡುಗಡೆಗೊಳಿಸಿದೆ. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ, ಕೈ ಶುಚಿಗೊಳಿಸುವುದು ಸೇರಿದಂತೆ ಅಗತ್ಯಕ್ರಮಗಳನ್ನು ಪಾಲಿಸುವಂತೆಯೂ ಸೂಚನೆ ನೀಡಿದೆ. ಭಾರತೀಯ ವೈದ್ಯಕೀಯ ಆಯೋಗ ಕೇಂದ್ರ ಹಾಗೂ ರಾಜ್ಯಸರಕಾರಗಳಿಗೂ ಸೂಚನೆಗಳನ್ನು ರವಾನಿಸಿದೆ. ರೋಗಿಗಳ ಆರೋಗ್ಯ ಸ್ಥಿತಿಯನ್ನು ನೋಡಿ ಕ್ರಮ ತೆಗೆದುಕೊಳ್ಳಲು ಸಲಹೆ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next