Advertisement

ಎಚ್‌1ಎನ್‌1 ಜ್ವರ: ಆತಂಕ ಬೇಡ, ಜಾಗರೂಕತೆ ಅಗತ್ಯ

08:38 AM Feb 14, 2017 | Harsha Rao |

ಉಡುಪಿ/ಮಂಗಳೂರು: ಮಳೆಗಾಲ ಮಾತ್ರವಲ್ಲ , ಚಳಿಗಾಲ, ಬೇಸಗೆ ಕಾಲದಲ್ಲೂ ಈಗ ಸಾಂಕ್ರಾಮಿಕ ರೋಗಗಳಾದ ಎಚ್‌1ಎನ್‌1, ಡೆಂಗ್ಯೂ, ಮಲೇರಿಯಾ, ನ್ಯುಮೋನಿಯಾ ಮೊದಲಾದ ರೋಗಗಳ ಬಗ್ಗೆ ಜಾಗೃತೆ ವಹಿಸಬೇಕಾದ ಅಗತ್ಯ ಬಂದಿದೆ. ಉಡುಪಿ ಜಿಲ್ಲೆಯಲ್ಲಿ ಈಗ ಮತ್ತೆರಡು ಹೊಸ ಎಚ್‌1ಎನ್‌1 ಪ್ರಕರಣಗಳು ಪತ್ತೆಯಾಗಿವೆ. ಈ ರೋಗದ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ. ಆದರೆ ಜಾಗ್ರತೆ ವಹಿಸುವುದು ಅತ್ಯಂತ ಆವಶ್ಯಕ.

Advertisement

ದ.ಕ. ಜಿಲ್ಲೆಯಲ್ಲಿ ಈ ವರ್ಷ 40 ಮಂದಿಯನ್ನು ಪರೀಕ್ಷೆಗೊಳಪಡಿಸಿದ್ದು, 5 ಮಂದಿಯಲ್ಲಿ ಈ ರೋಗ ದೃಢಪಟ್ಟಿದೆ. ಕಳೆದ ವರ್ಷ ಜನವರಿಯಿಂದ ಡಿಸೆಂಬರ್‌ವರೆಗೆ 7 ಪ್ರಕರಣ ದಾಖಲಾಗಿದ್ದು ಅದರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 8 ಪ್ರಕರಣ ಪತ್ತೆಯಾಗಿದ್ದು, ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಉಳಿದ ಆರು ಮಂದಿಯಲ್ಲಿ ಈ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ.  2016ರ ಜನವರಿಯಿಂದ ಡಿಸೆಂಬರ್‌ವರೆಗೆ ಒಟ್ಟು 8 ಮಂದಿಯಲ್ಲಿ ಈ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದು, ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ. ಈ ಬಾರಿ ಎಚ್‌1ಎನ್‌1 ರೋಗದಿಂದ ಜನವರಿಯಲ್ಲಿ ಗುಲ್ವಾಡಿಯ ಅಬೂಬಕ್ಕರ್‌ ಹಾಗೂ ಫೆ. 11ರಂದು ಹೆಜಮಾಡಿಯ ಲಕ್ಷ್ಮೀ ನಾರಾಯಣ ಸಾಲ್ಯಾನ್‌ ಸಾವನ್ನಪ್ಪಿದ್ದಾರೆ. ಈ ಇಬ್ಬರು ಕೂಡ ಅಸ್ತಮಾ ರೋಗದಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಚಳಿಗಾಲದಲ್ಲಿ ರೋಗ ಹೆಚ್ಚು
ರೋಗಾಣುಗಳು ಚಳಿಗಾಲದಲ್ಲಿ ಬೇಗನೆ ಹರಡುತ್ತವೆ. ಪರಿಸರ ತಣ್ಣಗೆ ಇರುವುದರಿಂದ ವೈರಸ್‌ಗಳು ಬೇಗ ಸಾಯುವುದಿಲ್ಲ. ಜತೆಗೆ ವೈರಾಣುಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಆದುದರಿಂದ ಚಳಿಗಾಲದಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ. ಡಿಸೆಂಬರ್‌ನಿಂದ ಎಪ್ರಿಲ್‌ವರೆಗೆ ಮದುವೆ, ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ಹೆಚ್ಚಾಗಿರುವುದರಿಂದ ಜನಸಂದಣಿಯು ಸೇರುತ್ತದೆ. ಇದು ಕೂಡ ರೋಗ ಹರಡಲು ಕಾರಣವಾಗುತ್ತದೆ. ಈ ಸಮಯದಲ್ಲಿ ಹೆಚ್ಚಿನವರು ಒಂದು ಕಡೆಯಿಂದ ಮತ್ತೂಂದು ಕಡೆಗೆ ವಲಸೆ ಹೋಗುವುದರಿಂದಲೂ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಒಂದೆಡೆಯಿಂದ ಮತ್ತೂಂದು ಕಡೆಗೆ ಪ್ರಸರಣಗೊಳ್ಳುತ್ತದೆ.

ಎಚ್‌1ಎನ್‌1 ರೋಗಕ್ಕಿದೆ ಔಷಧಿ
ಎಚ್‌1ಎನ್‌1 ಗಾಳಿ, ಕೆಮ್ಮು ಮೂಲಕ ಒಬ್ಬರಿಂದ ಮತ್ತೂಬ್ಬರಿಗೆ ಹರಡುತ್ತದೆ.ಧಿ ಜನರು ಆತಂಕಪಡಬೇಕಾದ ಅಗತ್ಯವಿಲ್ಲ. ಈ ರೋಗವನ್ನು ಗುಣಪಡಿಸಬಲ್ಲ  ಔಷಧ ಲಭ್ಯವಿದೆ. ಜ್ವರ ಅಥವಾ ಈ ರೋಗದ ಲಕ್ಷಣ ಕಾಣಿಸಿಕೊಂಡ 36 ಗಂಟೆಯೊಳಗೆ ಚಿಕಿತ್ಸೆಗೊಳಪಡಬೇಕು. ಜಿಲ್ಲೆಯ ಎಲ್ಲ  ಸರಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ರೋಗದ ಪತ್ತೆ ಹಾಗೂ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಗೆ ಒಟ್ಟು  2,500 ಮಾತ್ರೆ ಹಾಗೂ 250 ಲಸಿಕೆಗಳು (ಒಂದರಲ್ಲಿ 10 ಇರುತ್ತವೆ) ಇದ್ದು, ಒಟ್ಟು 2500 ಲಸಿಕೆಗಳು ಸದ್ಯಕ್ಕೆ ಲಭ್ಯವಿವೆ. ಅದಲ್ಲದೆ ಈ ರೋಗದ ಚಿಕಿತ್ಸೆಗಾಗಿಯೇ ಹೆಚ್ಚುವರಿಯಾಗಿ ಸರಕಾರದಿಂದ ಜಿಲ್ಲೆಗೆ 50,000 ರೂ. ಹಣ ಬಿಡುಗಡೆಯಾಗಿದೆ. 

ಖಾಸಗಿ ಆಸ್ಪತ್ರೆಗಳಿಗೆ ನಿರ್ದೇಶನ
ಎಚ್‌1ಎನ್‌1 ರೋಗದ ಚಿಕಿತ್ಸೆ  ಕೇವಲ ಸರಕಾರಿ ಆಸ್ಪತ್ರೆ ಮಾತ್ರವಲ್ಲ, ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ಕೂಡ ಈ ರೋಗದ ಲಕ್ಷಣ ಕಾಣಿಸಿಕೊಂಡವರು ಬಂದರೆ ಯಾವುದೇ ನಿರ್ಲಕ್ಷ್ಯ ತೋರದೆ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾ ಆರೋಗ್ಯಧಿಕಾರಿ ರೋಹಿಣಿ ನಿರ್ದೇಶನ ನೀಡಿದ್ದಾರೆ. 

Advertisement

ಎಚ್‌1ಎನ್‌1 ಅಂದರೆ ಏನು
ಎಚ್‌1ಎನ್‌1 ಗಾಳಿಯಿಂದ ಹರಡುವ ಒಂದು ರೋಗ. ಉಸಿರಾಟದ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡಬಹುದು. ಜ್ವರ, ಶೀತ, ಕೆಮ್ಮು ಇದರ ಲಕ್ಷಣಗಳು. ಸೀನು, ಕೆಮ್ಮುವಿನ ಮೂಲಕ ರೋಗಾಣುಗಳು ವೇಗವಾಗಿ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಇರುತ್ತದೆ. 

ರೋಗದ ಲಕ್ಷಣಗಳು 
ಶೀತ, ಕೆಮ್ಮು, ಅಸ್ತಮಾ, ಹೃದ್ರೋಗ, ಜ್ವರ ಈ ರೋಗದ ಲಕ್ಷಣಗಳಾಗಿವೆ. ನ್ಯುಮೋನಿಯಾ ಕಾಣಿಸಿಕೊಂಡ ತತ್‌ಕ್ಷಣ ಚಿಕಿತ್ಸೆ ಕೊಡಿಸುವುದು ಅತ್ಯಗತ್ಯ. ಕೆಮ್ಮು ಅಥವಾ ಗಂಟಲು ನೋವು ಇದ್ದಾಗಲೂ ಈ ರೋಗದ ಲಕ್ಷಣ ಕಾಣಿಸಬಹುದು. ಹೃದಯ ಸಂಬಂಧಿ ಕಾಯಿಲೆ ಅಥವಾ ಉಸಿರಾಟದ ತೊಂದರೆ ಇರುವವರೂ ಈ ಬಗ್ಗೆ ಜಾಗ್ರತೆ ವಹಿಸುವುದು ಉತ್ತಮ. ಡಯಾಬಿಟಿಸ್‌, ಹೆಪಟೈಟಿಸ್‌ ಬಿ. ರೋಗವಿದ್ದವರಿಗೆ ಸುಲಭವಾಗಿ ಈ ರೋಗ ಹರಡುವ ಸಾಧ್ಯತೆ ಇದೆ. ಏಡ್ಸ್‌, ಕ್ಯಾನ್ಸರ್‌ನಂತಹ ಮಾರಕ ರೋಗದಿಂದ ಬಳಲುತ್ತಿರುವವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದು, ಅವರಲ್ಲಿಯೂ ಎಚ್‌1ಎನ್‌1 ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಜಾಗರೂಕತೆ ವಹಿಸಿ
ಈ ರೋಗದ ಬಗ್ಗೆ ಆತಂಕ ಬೇಡ. ಆದರೆ ಜನರು ಜಾಗರೂಕರಾಗಿರಬೇಕು. ನಾವಿರುವ ಮನೆ, ಪರಿಸರದ ಶುಚಿತ್ವ ಕಾಪಾಡಿಕೊಳ್ಳುವುದು ಅವಶ್ಯ. ಆಹಾಧಿರ ಸೇವಿಸುವ ಮೊದಲು ಕೈ ತೊಳೆದುಕೊಳ್ಳಬೇಕು. ಆದಷ್ಟು ಕುದಿಸಿದ ನೀರನ್ನೇ ಬಳಸಬೇಕು. ಹಳಸಿದ ಆಹಾರ, ರಸ್ತೆ ಬದಿ, ಕೊಳಚೆ ಪ್ರದೇಶಗಳಲ್ಲಿ ಮಾರಾಟಕ್ಕೆ ಇಟ್ಟಿರುವ ಹಣ್ಣುಗಳ ಬಗ್ಗೆಯೂ ಜಾಗೃತಿ ಅಗತ್ಯ. ಜ್ವರ, ಶೀತವಿರುವ ಎಲ್ಲರಲ್ಲಿಯೂ ಈ ರೋಗ ಕಾಣಿಸಿಕೊಳ್ಳುವುದಿಲ್ಲ. ಈ ಸೋಂಕು ಕಾಣಿಸಿಕೊಂಡ ಪರಿಸರದಲ್ಲಿ ತಪಾಸಣೆಗಳನ್ನು ನಡೆಸಲಾಗಿದೆ. ಎಲ್ಲ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.                                                                             
 – ಡಾ| ರೋಹಿಣಿ, ಜಿಲ್ಲಾ ಆರೋಧಿಗ್ಯಾಕಾರಿ

– ಪ್ರಶಾಂತ್ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next