Advertisement

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಚ್‌1ಎನ್‌1 ಸೋಂಕು ಪ್ರಕರಣ

11:14 PM Apr 26, 2019 | Lakshmi GovindaRaju |

ಬೆಂಗಳೂರು: ಎಚ್‌1ಎನ್‌1 ಸೋಂಕಿತರ ಪ್ರಮಾಣ ಕರ್ನಾಟಕ ಸೇರಿ ದೇಶದೆಲ್ಲೆಡೆ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಜನವರಿಯಿಂದ ಈವರೆಗೆ 1,428 ಪ್ರಕರಣಗಳು ದೃಢಪಟ್ಟಿದ್ದು, 39 ಮಂದಿ ಸಾವಿಗೀಡಾಗಿದ್ದಾರೆ.

Advertisement

ಕಳೆದ ವರ್ಷ ಸೆಪ್ಟೆಂಬರ್‌ ವೇಳೆ ರಾಜ್ಯದಲ್ಲಿ ತೀವ್ರತೆ ಪಡೆದಿದ್ದ ಎಚ್‌1ಎನ್‌1, ಡಿಸೆಂಬರ್‌ ವೇಳೆಗೆ ಒಂದಿಷ್ಟು ಹತೋಟಿಗೆ ಬಂದಿತ್ತು. ನಂತರ 2019ರಲ್ಲಿ ನಿರಂತರವಾಗಿ ವಾರಕ್ಕೆ 100ರಿಂದ 110 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಕರ್ನಾಟಕ-39, ಮಹಾರಾಷ್ಟ್ರ-120, ರಾಜಸ್ಥಾನ-196, ಗುಜರಾತ್‌-143, ಮಧ್ಯಪ್ರದೇಶ-134, ಮಂದಿ ಮೃತಪಟ್ಟಿದ್ದಾರೆ.

ತಂಪನೆ ವಾತಾವರಣಕ್ಕೆ ಹೆಚ್ಚಾಗುವ ಎಚ್‌1ಎನ್‌1 ವೈರಾಣುಗಳು ರಾಜ್ಯದ ಮಲೆನಾಡು ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚು ವ್ಯಾಪ್ತಿಸಿವೆ. ಬೇಸಿಗೆ ಹಿನ್ನೆಲೆ ಬಿಸಿಲು ಹೆಚ್ಚಿದ್ದ ಪ್ರದೇಶಗಳಲ್ಲಿ ಒಂದಿಷ್ಟು ಹತೋಟಿಗೆ ಬಂದಿದೆ. ಈಗ ರಾಜ್ಯದ ವಿವಿಧೆಡೆ ಮಳೆ ಬೀಳುತ್ತಿರುವ ಕುರಿತು ವರದಿ ಬರುತ್ತಿದ್ದು, ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ, ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಾವಿನ ಸಂಖ್ಯೆ ಹೆಚ್ಚು: ಕಳೆದ ವರ್ಷದ ಈ ವೇಳೆಗೆ ಕೇವಲ 16 ಮಂದಿಗೆ ರೋಗದ ಸೋಂಕಿತ್ತು, ಯಾರೂ ಮೃತಪಟ್ಟಿರಲಿಲ್ಲ. 2018ರ ವರ್ಷಾಂತ್ಯಕ್ಕೆ ಒಟ್ಟು 1,733 ಮಂದಿಗೆ ಸೋಂಕು ತಗುಲಿ, 87 ಮಂದಿ ಸಾವಿಗೀಡಾಗಿದ್ದರು. ಆದರೆ, ಈ ಬಾರಿ ವರ್ಷದ ಮೊದಲ ಮೂರೂವರೆ ತಿಂಗಳಲ್ಲಿಯೇ 1,427 ಮಂದಿಗೆ ಸೋಂಕಿದ್ದು, 39 ಮಂದಿ ಮೃತರಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ 5,518 ಮಂದಿ ಶಂಕಿತರ ಗಂಟಲು ದ್ರಾವಣದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಆ ಪೈಕಿ 1,427 ಮಂದಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ.

ಮಲೆನಾಡು, ಕರಾವಳಿಯಲ್ಲಿಯೇ ಹೆಚ್ಚು: ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಎಚ್‌1ಎನ್‌1 ಸೋಂಕಿನ ಪ್ರಮಾಣ ಹೆಚ್ಚಿದೆ. ಇದಕ್ಕೆ ಮಲೆನಾಡಿನ ಭಾಗದ ತಂಪನೆ ವಾತಾವರಣ ಹಾಗೂ ಕರಾವಳಿಗೆ ಹೊರ ರಾಜ್ಯಗಳಿಂದ ಬಂದು ಹೋಗುವವರ ಸಂಖ್ಯೆ ಹೆಚ್ಚಿರುವುದೇ ಕಾರಣ ಎಂದು ವೈದ್ಯರು ಹೇಳುತ್ತಾರೆ.

Advertisement

ಶಿವಮೊಗ್ಗದಲ್ಲಿ ಈವರೆಗೆ 136 ಮಂದಿಗೆ ಸೋಂಕು ತಗುಲಿದ್ದು, 6 ಮಂದಿ ಮೃತಪಟ್ಟಿದ್ದಾರೆ. ಉತ್ತರ ಕನ್ನಡದಲ್ಲಿ 25 (5 ಸಾವು) ಮೈಸೂರಿನಲ್ಲಿ 120 (4 ಸಾವು)ಉಡುಪಿಯಲ್ಲಿ 196, ದಕ್ಷಿಣ ಕನ್ನಡದಲ್ಲಿ 146 ಮಂದಿಗೆ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 227, ಬೆಂಗಳೂರು ನಗರ ವ್ಯಾಪ್ತಿಯಲ್ಲಿ 77 (2 ಸಾವು), ಬೆಂಗಳೂರು ಗ್ರಾಮಾಂತರ 6 (1 ಸಾವು) ದೃಢಪಟ್ಟಿದೆ.

ಸೋಂಕಿನ ಲಕ್ಷಣಗಳೇನು?: ಶ್ವಾಸಕೋಶದ ಸೋಂಕು, ನೆಗಡಿ, ಕೆಮ್ಮು, ಜ್ವರದ ಜತೆಗೆ ಉಸಿರಾಟದ ತೊಂದರೆ, ತೀವ್ರ ಮೈ-ಕೈ ನೋವು ಕಾಣಿಸಿಕೊಳ್ಳುವುದು, ವಾಂತಿ, ಅತಿಸಾರ, ವಾಕರಿಕೆ ಮತ್ತು ಬಾಯಿ ಅಥವಾ ಗಂಟಲಿನಲ್ಲಿ ಗುಳ್ಳೆಗಳು ಏಳುತ್ತವೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳ ಸಭೆ ಕರೆದು ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಗ ಲಕ್ಷಣ ಪತ್ತೆಯಾಗುವ ವ್ಯಕ್ತಿಗಳಿಗೆ ರಕ್ತ ಪರೀಕ್ಷೆಯ ವರದಿ ಬರುವವರೆಗೆ ಕಾಯದೆ ನೇರವಾಗಿ ಟ್ಯಾಮಿ ಫೋ ಮಾತ್ರೆ ನೀಡಿ ಯಾವುದೇ ಕೊರತೆಯಾಗದಂತೆ ಆರೈಕೆ ಮಾಡಲು ತಿಳಿಸಿದ್ದೇವೆ. ಸಾರ್ವಜನಿಕರು ಮುಂಜಾಗೃತಿ ವಹಿಸಬೇಕು. ರೋಗ ಲಕ್ಷಣ ಕಂಡ ಕೂಡಲೇ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿಕೊಳ್ಳಬೇಕು.
-ಶಿವರಾಜ್‌ ಸಜ್ಜನ್‌ ಶೆಟ್ಟಿ, ಜಂಟಿ ನಿರ್ದೇಶಕರು, ಸಾಂಕ್ರಾಮಿಕ ರೋಗ ವಿಭಾಗ, ಆರೋಗ್ಯ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next