Advertisement

ಎಚ್‌1ಎನ್‌1 ಭೀತಿ: ಪಾಲಿಕೆಯಿಂದ ಹಂದಿಗಳಿಗೆ ಬಲೆ

01:40 PM Oct 25, 2018 | Team Udayavani |

ಕಲಬುರಗಿ: ನಗರದಲ್ಲಿ ಎಚ್‌1ಎನ್‌1 ಭೀತಿ ಎದುರಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಮಹಾನಗರ ಪಾಲಿಕೆ ಹಂದಿ ಹಿಡಿಯುವ ಕಾರ್ಯಾಚರಣೆ ಶುರು ಮಾಡಿದೆ. ಹೊರರಾಜ್ಯದ ಎರಡು ತಂಡಗಳಿಂದ ನಗರದ ವಿವಿಧೆಡೆ ಹಂದಿ ಹಿಡಿಯುವ ಕಾರ್ಯ ನಡೆಯುತ್ತಿದೆ. 

Advertisement

ಜಿಲ್ಲೆಯಾದ್ಯಂತ ಕಳೆದ ಮೂರು ತಿಂಗಳಿಂದ ಎಚ್‌ 1ಎನ್‌1 ಭೀತಿ ಹರಡಿದೆ. ಎಚ್‌1ಎನ್‌1 ಶಂಕೆ ಮೇರೆಗೆ ರಕ್ತ ತಪಾಸಣೆ ಮಾಡಲಾದ 75 ಜನರಲ್ಲಿ 24 ಜನರಿಗೆ ಜ್ವರ ಇರುವುದು ದೃಢಪಟ್ಟಿದೆ. ಆಗಸ್ಟ್‌ ನಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿದ್ದರೆ, ಸೆಪ್ಟೆಂಬರ್‌ 12 ಮತ್ತು ಅಕ್ಟೋಬರ್‌ ತಿಂಗಳ 23ರ ವರೆಗೆ ಉಳಿದ 11 ಪ್ರಕರಣಗಳು ಎಚ್‌1ಎನ್‌1 ಎಂದು ದೃಢಪಟ್ಟಿದೆ. ಇದರಲ್ಲಿ ಐದು ಪ್ರಕರಣಗಳು ಹೊರ ಜಿಲ್ಲೆಗಳಿಗೆ ಸಂಬಂಧಿಸಿದ್ದಾಗಿವೆ. 

ಇದರಿಂದಾಗಿ ನಗರ ಮಾತ್ರವಲ್ಲದೇ ಇಡೀ ಜಿಲ್ಲೆಯ ಜನತೆ ಕಂಗೆಟ್ಟಿದ್ದು, ಈಗಾಗಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜ್ವರದ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಮನವಿ ಮಾಡಿದೆ. ಇದೀಗ ಮಹಾನಗರ ಪಾಲಿಕೆ ಎಚ್ಚೆತ್ತು ಹಂದಿಗಳನ್ನು ಹಿಡಿಯುವ ಕಾರ್ಯಾಚರಣೆ ಆರಂಭಿಸಿದೆ. ನಗರದಲ್ಲಿ ಅಂದಾಜು 3,500 ಹಂದಿಗಳು ಇರುವ ಸಾಧ್ಯತೆ ಇದ್ದು, ಮಂಗಳವಾರದಿಂದ ಮೊದಲ ಬಾರಿ ಹಂದಿಗಳ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ. 

ಹೊರ ರಾಜ್ಯಗಳ ತಲಾ ಹತ್ತು ಜನರ ಎರಡು ತಂಡಗಳು ಪೊಲೀಸ್‌ ಭದ್ರತೆಯಲ್ಲಿ ಹಂದಿಗಳನ್ನು ಹಿಡಿಯುತ್ತಿವೆ. ಮೊದಲ ಹಂತವಾಗಿ ಎಂಎಸ್‌ಕೆ ಮಿಲ್‌, ಜಿಲಾನಾಬಾದ್‌, ಖದೀರ ಚೌಕ್‌, ರಾಮಜಿ ನಗರ, ಹೀರಾಪುರ ಬಡಾವಣೆಗಳಲ್ಲಿ ಕಾರ್ಯಾಚರಣೆ ನಡೆದಿದ್ದು, 200ಕ್ಕೂ ಹೆಚ್ಚು ಹಂದಿಗಳನ್ನು
ಹಿಡಿಯಲಾಗಿದೆ. ನಗರದಲ್ಲಿ ಹಂದಿಗಳನ್ನು ಅಕ್ರಮವಾಗಿ ಸಾಕಾಣೆ ಮಾಡುವರ ಸಂಖ್ಯೆ ಹೆಚ್ಚಾಗಿದೆ ಎನ್ನಲಾಗುತ್ತಿದ್ದು, ಹಂದಿಗಳ ಮಾಲೀಕರಿಗೆ ಹಂದಿಗಳನ್ನು ಹಿಡಿದು ಬೇರೆಡೆ ಸಾಗಿಸುವಂತೆ ಸೂಚಿಸಲಾಗಿದೆ, ಇದರಿಂದಾಗಿ ಸ್ವತಃ ಸಾಕಾಣಿಕೆದಾರರೆ ಸುಮಾರು 400 ಹಂದಿಗಳನ್ನು ಹಿಡಿದು ಸ್ಥಳಾಂತರಿಸಿದ್ದಾರೆ ಎಂದು ಗೊತ್ತಾಗಿದೆ. ಜತೆಗೆ ಹಂದಿಗಳನ್ನು ಜನವಸತಿ ಪ್ರದೇಶದಲ್ಲಿ ಬಿಡದಂತೆ ಎಚ್ಚರಿಕೆಯನ್ನೂ ಹಂದಿಗಳ ಮಾಲೀಕರಿಗೆ ಪಾಲಿಕೆ ಅಧಿಕಾರಿಗಳು ನೀಡಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್‌: ನಗರದ ಜಿಲ್ಲಾಸ್ಪತ್ರೆಯಲ್ಲಿ ಎಚ್‌1ಎನ್‌1 ಜ್ವರ ಸೋಂಕು ಇರುವವರಿಗೆಂದೇ ಚಿಕಿತ್ಸೆ ನೀಡಲು ಐದು ಬೆಡ್‌ಗಳ ವಿಶೇಷ ವಾರ್ಡ್‌ ಆರಂಭಿಸಲಾಗಿದೆ. ಅಲ್ಲದೇ, ಎಲ್ಲ ತಾಲೂಕು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದ್ದು, ಮಾತ್ರೆಗಳು ಲಭ್ಯ ಇರುವಂತೆ ಆರೋಗ್ಯ ಇಲಾಖೆ ಕ್ರಮ ವಹಿಸಿದೆ.

Advertisement

ಆಗಸ್ಟ್‌ ತಿಂಗಳಿಂದ ಇದುವರೆಗೆ ಒಟ್ಟು 24 ಜನರಿಗೆ ಎಚ್‌1ಎನ್‌1 ಇರುವುದು ದೃಢಪಟ್ಟಿದೆ. ಇದರಲ್ಲಿ ಬೇರೆ ಜಿಲ್ಲೆಗಳಿಂದ ಚಿಕಿತ್ಸೆ ಪಡೆಯಲು ಬಂದ ಐವರು ಸೇರಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ ಆರಂಭಿಸಲಾಗಿದ್ದು, ತಾಲೂಕು ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ಹಾಗೂ ಖಾಸಗಿ ಆಸ್ಪತ್ರೆಗಳಿಗೂ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
 ಡಾ| ಎಂ.ಕೆ.ಪಾಟೀಲ, ಜಿಲ್ಲಾ ಆರೋಗ್ಯಾಧಿಕಾರಿ

ನಗರದಲ್ಲಿ ಹಂದಿಗಳ ಕಾಟದಿಂದ ಜನತೆ ತೊಂದರೆ ಅನುಭವಿಸಿದ್ದರೂ, ಈಗ ಎಚ್‌1ಎನ್‌1 ಭೀತಿ ಎದುರಾಗಿದ್ದರಿಂದ ಹಂದಿ ಹಿಡಿಯುವ ಕಾರ್ಯಾಚರಣೆ ನಡೆಸಲಾಗಿದೆ. ಈಗಾಗಲೇ ಹಲವು ಬಡಾವಣೆಗಳಲ್ಲಿ ಹಂದಿಗಳನ್ನು ಹಿಡಿಯಲಾಗಿದೆ. ಕಾರ್ಯಾಚರಣೆ ಮುಂದುವರಿಯಲಿದೆ. 
ಮುನ್ನಾಪ್‌ ಪಟೇಲ್‌, ಪಾಲಿಕೆಯ ಪರಿಸರ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next