ಬೀದರ: ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಮಾರಂಣಾಂತಿಕ ಕಾಯಿಲೆ ಎಚ್1ಎನ್1 ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೀದರನಲ್ಲಿ ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಕಟ್ಟೆಚ್ಚರದಿಂದ ಇರಲು ಘೋಷಿಸಿದ್ದಾರೆ.
ಭಾಲ್ಕಿ ತಾಲೂಕಿನ ಹಲ್ಸಿ ತೂಗಾಂವ್ ಹಾಗೂ ಪಾಂಡ್ರಿ ಗ್ರಾಮದ ಇಬ್ಬರು ಮಹಾರಾಷ್ಟ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಮೃತಪಟ್ಟಿದ್ದು, ಈ ಇಬ್ಬರಿಗೂ ಎಚ್1ಎನ್1 ರೋಗ ತಗುಲಿದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹಾಗೇ, ಜಿಲ್ಲೆಯ ಬಹುತೇಕ ಜನರು ಪ್ರತಿನಿತ್ಯ ನೆರೆಯ ಮಹಾರಾಷ್ಟ್ರಕ್ಕೆ ತೆರಳುತ್ತಾರೆ. ಅಲ್ಲಿನ ಜನರು ಇಲ್ಲಿಗೆ ಬರುವುದು ಸಾಮಾನ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಟ್ಟೆಚ್ಚರಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಸದ್ಯ ಎಚ್1ಎನ್1 ಶಂಕೆ ವ್ಯಕ್ತವಾಗಿರುವ ಮೃತರ ಎರಡೂ ಕುಟುಂಬದಲ್ಲಿ ಯಾರಿಗೂ ಅನಾರೋಗ್ಯ ಇಲ್ಲ ಎಂಬುವುದನ್ನು ಆರೋಗ್ಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಲ್ಲದೆ, ಗ್ರಾಮಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಮೃತ ಕುಟುಂಬಸ್ಥರ ಗಂಟಲು ಸ್ರಾವದ ಮಾದರಿ ಪಡೆದು ಮಣಿಪಾಲ ಪ್ರಯೋಗಾಲಯಕ್ಕೆ ಕಳುಹಿಸಿದೆ. ಅಲ್ಲದೆ, ಎರಡು ಗ್ರಾಮಗಳಲ್ಲಿ ಆರೋಗ್ಯ ಹಾಗೂ ಆಶಾ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಜ್ವರ ಸೇರಿದಂತೆ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳನ್ನು ಗುರುತಿಸುವ ಕಾರ್ಯ ಆರಂಭಿಸಿದ್ದಾರೆ. ಈವರೆಗೆ ಹತ್ತಕ್ಕೂ ಅಧಿಕ ಜನರಿಗೆ ಸಾಮಾನ್ಯ ಜ್ವರ ಇರುವುದನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಶಂಕೆ ಪ್ರಕರಣ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಆ ಎರಡು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದನ್ನು ಗಮನಿಸುತ್ತಿರುವ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಎಚ್1ಎನ್1 ವೈರಸ್ ಬಂದರೆ ಮರಣ ಖಚಿತವೇ ಎಂಬ ಬಗ್ಗೆ ಜನರಲ್ಲಿ ಆತಂಕ ಶುರುವಾಗಿವೆ.
ಸದ್ಯ ಭಾಲ್ಕಿ ತಾಲೂಕಿನ ಆ ಎರಡು ಗ್ರಾಮಗಳಲ್ಲಿ ಅಧಿಕಾರಿಗಳ ತಂಡ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು, ಸುತ್ತಲಿನ ಅನೇಕ ಗ್ರಾಮಗಳ ಜನರು ಕೂಡ ಭಯದಲ್ಲಿದ್ದಾರೆ. ಹಾಗಾಗಿ, ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಜನರಲ್ಲಿನ ತಪ್ಪು ಕಲ್ಪನೆಗಳು, ವಿವಿಧ ವದಂತಿಗಳನ್ನು ಕೊನೆಗಾಣಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕಾಗಿದೆ. ಜ್ವರದಿಂದ ಬಳಲುತ್ತಿರುವ ವ್ಯಕ್ತಿಗಳು ತಕ್ಷಣ ಚಿಕಿತ್ಸೆ ಪಡೆದರೆ ಯಾವುದೇ ಸಮಸ್ಯೆ ಉಲ್ಬಣಗೊಳ್ಳುವುದಿಲ್ಲ ಎಂಬುದನ್ನು ಮನವರಿಕೆ ಮಾಡಬೇಕಾಗಿದೆ. ಅಲ್ಲದೆ, ಮುನ್ನೆಚ್ಚರಿಕೆ ಕ್ರಮಗಳ ಕುರಿತು ಕೂಡ ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಿದೆ.
ಪ್ರತಿನಿತ್ಯ ಮಹಾರಾಷ್ಟ್ರದಿಂದ ಕರ್ನಾಟಕ್ಕೆ ಸಾವಿರಾರು ಜನರು ಬರುತ್ತಾರೆ. ಎಚ್1ಎನ್1 ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಇನ್ನೊಬ್ಬರಿಗೆ ಬಹುಬೇಗ ಹರಡುತ್ತದೆ. ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಬಸ್, ರೈಲ್ವೆ ಪ್ರಯಾಣಿಕರು ಹೆಚ್ಚು ಮುಂಜಾಗ್ರತೆ ವಹಿಸುವುದು ಮುಖ್ಯ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ಬೀದರ ಜಿಲ್ಲೆಯಲ್ಲಿ ಸದ್ಯ ಎಚ್1ಎನ್1 ಪ್ರಕರಣಗಳು ಪತ್ತೆಯಾಗಿಲ್ಲ. ನೆರೆ ರಾಜ್ಯದಲ್ಲಿ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಜರಿದ್ದು, ರೋಗಿಗಳ ಚಿಕಿತ್ಸೆಗೆ ಮುಂದಾಗಬೇಕು. ಔಷಧಗಳ ಕೊರತೆ ಆಗದಂತೆ, ಜಿಲ್ಲೆಯ ಎಲ್ಲ ಶಾಲೆ, ಅಂಗನವಾಡಿ ಹಾಗೂ ಎಲ್ಲೆಡೆಯೂ ರೋಗದ ಮುನ್ನೆಚರಿಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಕೂಡ ತಿಳಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಸಹಾಯವಾಣಿ ತೆರೆದು ಪ್ರಕಣಗಳ ಪತ್ತೆಗೆ ಸೂಚಿಸಿದ್ದು, ಪ್ರಕರಣಗಳು ಪತ್ತೆಯಾದ ಕೂಡಲೇ ಜಿಲ್ಲಾಸ್ಪತ್ರೆಯಲ್ಲಿನ ವಿಶೇಷ ಘಟಕದಲ್ಲಿ ಚಿಕಿತ್ಸೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಡಾ| ಎಚ್.ಆರ್. ಮಹಾದೇವ, ಜಿಲ್ಲಾಧಿಕಾರಿಗಳು
ದುಯೋಧನ ಹೂಗಾರ