ವಾಷಿಂಗ್ಟನ್: 2020ರ ಎಚ್1-ಬಿ ವೀಸಾಕ್ಕಾಗಿ ಅಮೆರಿಕದ ನಾಗರಿಕ ಮತ್ತು ವಲಸೆ ಸೇವೆಗಳ ಇಲಾಖೆ (ಯುಎಸ್‌ಸಿಐಎಸ್) ಏ. 1ರಿಂದ ಅರ್ಜಿಗಳನ್ನು ಆಹ್ವಾನಿಸಲಿದೆ ಎಂದು “ಅಮೆರಿಕನ್ ಬಜಾರ್ ಡೈಲಿ’ ವರದಿ ಮಾಡಿದೆ. ಹಿಂದಿನ ನಿಯಮಗಳಂತೆ ಈ ವರ್ಷವೂ ವೀಸಾಗಳ ಮಿತಿಯನ್ನು 65 ಸಾವಿರಕ್ಕೆ ನಿಗದಿಪಡಿಸಲಾಗಿದೆ. ಇದರ ಜತೆಗೆ, ಅಮೆರಿಕದ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಅಥವಾ ಮತ್ಯಾವುದೇ ಉನ್ನತ ವ್ಯಾಸಂಗದ ಪದವಿ ಪಡೆದವರಿಗೆ ಹೆಚ್ಚುವರಿಯಾಗಿ 20,000 ವೀಸಾಗಳನ್ನು ನೀಡಲು ತೀರ್ಮಾನಿಸಲಾಗಿದೆ. ಅರ್ಜಿ ಸಲ್ಲಿಕೆಯಲ್ಲಿ ಈ ಬಾರಿ ಶೇ. 16ರಷ್ಟು ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಅಮೆರಿಕದಲ್ಲಿ ಉದ್ಯೋಗಕ್ಕಾಗಿ ಆಗಮಿಸಲು ಅರ್ಜಿ ಹಾಕಿದವರನ್ನು ಹಾಗೂ ಅಮೆರಿಕದಲ್ಲಿ ಉನ್ನತ ವ್ಯಾಸಂಗದ ಪದವಿ ಪಡೆದವರನ್ನೂ 65 ಸಾವಿರ ಮಿತಿಯಲ್ಲಿ ಪರಿಗಣಿಸಲು ಇತ್ತೀಚೆಗೆ ತೀರ್ಮಾನಿಸಲಾಗಿದೆ. ಆನಂತರ, 2ನೇ ಸುತ್ತಿನಲ್ಲಿ ಉಳಿಕೆ ಅರ್ಜಿಗಳನ್ನು ಪರಿಗಣಿಸಲು ನಿರ್ಧರಿಸಲಾಗಿದೆ.