Advertisement

ಅವಸರದ ತೀರ್ಮಾನ

08:51 AM Jul 30, 2019 | Sriram |

ಬೆಂಗಳೂರು: ಶಾಸಕರನ್ನು ಅನರ್ಹಗೊಳಿಸಿದ್ದು ಸ್ಪೀಕರ್‌ ಅವರ ‘ಅವಸರದ ತೀರ್ಮಾನ’ ಎಂದು ಅನರ್ಹಗೊಂಡ ಜೆಡಿಎಸ್‌ ಶಾಸಕ ಎಚ್. ವಿಶ್ವನಾಥ್‌ ಹೇಳಿದ್ದಾರೆ.

Advertisement

ಈ ಕುರಿತು ದೂರವಾಣಿ ಮೂಲಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ನಮ್ಮ ರಾಜೀನಾಮೆ ವಿಚಾರವನ್ನು ಸ್ಪೀಕರ್‌ ಗಮನಿಸಿಲ್ಲ. ಕೇವಲ ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ದೂರನ್ನು ಮಾತ್ರ ಪರಿಗಣಿಸಿದ್ದಾರೆ. ದೂರುದಾರರ ಮನವಿ ಪರಿಗಣಿಸಿಲ್ಲ. ಹಾಗಾಗಿ ಇದೊಂದು ಅವಸರದ ತೀರ್ಮಾನ. ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದಿದ್ದಾರೆ.

ಯಾವ ಸಂದರ್ಭದಲ್ಲಿ ಏನಾಯಿತು, ಮೈತ್ರಿ ಸರ್ಕಾರ ಹೇಗೆ ನಡೆದುಕೊಂಡಿತ್ತು ಅನ್ನುವುದನ್ನು ರಾಜ್ಯದ ಜನ ಗಮನಿಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಸರ್ಕಾರದ ರೀತಿ ನೋಡಿ ರಾಜೀನಾಮೆ ನೀಡಿದ್ದೆವು. ಮೂವರು ಸಚಿವರು ರಾಜೀನಾಮೆ ನೀಡಿರುವುದು ಹುಡುಗಾಟದ ವಿಷಯವಲ್ಲ ಎಂದು ವಿಶ್ವನಾಥ್‌ ಹೇಳಿದ್ದಾರೆ.

ಎಚ್.ಕೆ. ಪಾಟೀಲ್ ಅವರು ಜಿಂದಾಲ್ ವಿಚಾರದಲ್ಲಿ ಸರ್ಕಾರದ ವಿರುದ್ಧ ಬಹಿರಂಗ ಪತ್ರ ಬರೆದಿದ್ದರು. ಆದರೆ, ಅವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ವಿಶ್ವನಾಥ್‌ ಪ್ರಶ್ನಿಸಿದ್ದಾರೆ. ಜೆಡಿಎಸ್‌ನ ಇನ್ನುಳಿದ ಇಬ್ಬರು ಅನರ್ಹ ಶಾಸಕರಾದ ಕೆ. ಗೋಪಾಲಯ್ಯ, ನಾರಾಯಣಗೌಡ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮತದಾರರಲ್ಲಿ ಮನವಿ
ಇತ್ತೀಚಿಗೆ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ತಮಗೆ ತಿಳಿದೇ ಇದೆ. ಆದರೆ, ಇವುಗಳಿಗೆ ಸಕಾರಣಗಳನ್ನು ನಿಮಗೆ ತಿಳಿಸಲು ನಾನು ಜವಾಬ್ದಾರನಾಗಿದ್ದೇನೆ. ನನ್ನ ರಾಜಕೀಯ ವಿರೋಧಿಗಳು ಪ್ರಚಾರ ಮಾಡುತ್ತಿರುವಂತೆ ‘ನನ್ನನ್ನು ನಾನು ಮಾರಿಕೊಂಡಿಲ್ಲ’ ನೀವು ನನ್ನ ಮೇಲೆ ವಿಶ್ವಾಸವಿಟ್ಟು ದಯಪಾಲಿಸಿದ ಮತಗಳಿಗೂ ಅಪಚಾರ ಮಾಡಿಲ್ಲ. ನಿಮ್ಮ ಪ್ರತಿ ಮತಕ್ಕಾಗಿ ನಿಮಗೆ ಸದಾ ಋಣಿಯಾಗಿದ್ದೇನೆ, ತಲೆ ಬಾಗಿದ್ದೇನೆ. ನಿಮ್ಮ ಮತದ ಬಲದಿಂದ ಶಾಸಕನಾದ ನನ್ನನ್ನು ಈ ವ್ಯವಸ್ಥೆ ಶೋಷಿಸಿತು, ಅವಮಾನಿಸಿತು ಮತ್ತು ಕಡೆಗಣಿಸಿತು ಎಂದಿದ್ದಾರೆ. ನಿಮ್ಮನ್ನು ಸದ್ಯದಲ್ಲೇ ಹುಣಸೂರಿನಲ್ಲಿ ಭೇಟಿಯಾಗಿ ಅನೇಕ ವಿಚಾರಗಳನ್ನು ಹಂಚಿಕೊಳ್ಳಲಿದ್ದೇನೆ. ವಾಸ್ತವ ಸಂಗತಿಗಳನ್ನು ತಿಳಿಸಲಿದ್ದೇನೆ. ದಯವಿಟ್ಟು ತಾವು ನನ್ನನ್ನು, ನನ್ನ ಜೀವನವನ್ನು ಬಲ್ಲವರಾಗಿದ್ದರಿಂದ ವದಂತಿಗಳಿಗೆ ಕಿವಿಗೊಡಬೇಡಿ. ನಿಮ್ಮ ಬೆಂಬಲ. ಆಶೀರ್ವಾದ ಸದಾ ನನ್ನ ಮೇಲಿರಲಿ ಎಂದು ವಿಶ್ವನಾಥ್‌ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next