ಮೈಸೂರು: ಎಸ್ಟಿ ಮೀಸಲಿಗಾಗಿ ಕುರುಬ ಸಮಾಜದ ಸ್ವಾಮೀಜಿಗಳು ಹಣ ಪಡೆದು ಹೋರಾಟ ನಡೆಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳುವ ಮೂಲಕ ಕೇವಲ ಸ್ವಾಮೀಜಿಗಷ್ಟೇ ಅಲ್ಲ, ಇಡೀ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಿಡಿಕಾರಿದರು.
ನಗರದ ವಿದ್ಯಾರಣ್ಯಪುರಂನಲ್ಲಿರುವ ಖಾಸಗಿ ಕಲ್ಯಾಣಮಂಟಪದಲ್ಲಿ ಬುಧವಾರ ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲು ಹೋರಾಟ ಸಮಿತಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಬ ಸಮಾಜವನ್ನು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಹೋರಾಟದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಿನೊಬ್ಬನೇ ಬುದ್ಧಿವಂತ ಅಲ್ಲ
ಕುಲಶಾಸ್ತ್ರ ಅಧ್ಯಯನ ಮಾಡಬೇಕು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಕಿಡಿಕಾರಿದ ವಿಶ್ವನಾಥ್, ಸಿದ್ದರಾಮಯ್ಯ ನಿನೊಬ್ಬನೇ ಬುದ್ಧಿವಂತ ಅಲ್ಲ. ನಮಗೂ ಅದು ಗೊತ್ತಿದೆ. ನೀನು ಹೋರಾಟಕ್ಕೆ ಬರುವುದಾದರೆ ಬಾ, ಇಲ್ಲ ಬಿಡು. ಈ ರೀತಿ ದಾರಿ ತಪ್ಪಿಸುವ ಕೆಲಸ ಮಾಡಬೇಡ ಎಂದು ಗುಡುಗಿದರು. ಎಲ್ಲಾ ಪಕ್ಷದ ಶಾಸಕಾಂಗ ಸಭೆಯ ನಾಯಕರ ನಡವಳಿಕೆ ಸರಿ ಇಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿ ಎಲ್ಲರೂ ಅದೇ ರೀತಿ ಇದ್ದಾರೆ. ಇದರಿಂದಲೇ ಪಕ್ಷಗಳು ಹಾಳಾಗುತ್ತಿವೆ. ನಾನು, ನಾನು, ನಾನು ಅನ್ನೋದು ಎಲ್ಲರಿಗೂ ಬಂದಿದೆ ಎಂದು ಪ್ರಸಕ್ತ ರಾಜಕಾರಣದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಶ್ರೀಗಳು ಆರೆಸ್ಸೆಸ್ ಮೂಲದವರು:ಕುರುಬ ಸಮಾಜದ ಎಸ್ಟಿ ಮೀಸಲು ಹೋರಾಟಕ್ಕೆ ಆರ್‌ಎಸ್ ಎಸ್ ಪ್ರಚೋದನೆ ನೀಡುತ್ತಿದೆ ಎಂದು ಹೇಳುತ್ತಿದ್ದಿರಾ, ನಮ್ಮ ಮಠದ ಸ್ವಾಮೀಜಿ ಕೂಡ ಆರ್‌ಎಸ್‌ಎಸ್ ಮೂಲದವರು ಎಂಬುದು ತಮಗೆ ತಿಳಿದಿಲ್ಲವೇ, ಆರ್‌ಎಸ್‌ಎಸ್ ಕುಮ್ಮಕ್ಕಿನಿಂದ ಹೊರಾಟ ನಡೆಯುತ್ತಿದೆ ಎನ್ನುವ ಮೂಲಕ ಇಡೀ ಸಮಾಜವನ್ನು ಅವಮಾನ ಮಾಡುತ್ತಿದ್ದಿರಾ, ಕುರುಬ ಸಮಾಜದ ಅಭಿವೃದ್ಧಿಗಾಗಿ ನಡೆಸುತ್ತಿರುವ ಎಸ್ಟಿ ಮೀಸಲಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಸಾಧ್ಯವಾದರೆ ಬನ್ನಿ ಇಲ್ಲವಾದರೆ ಸುಮ್ಮನಿರಿ ಎಂದು ಹೇಳಿದರು.
ಸಮಾಜದ ಜನರು ಎಸ್ಟಿ ಮೀಸಲು ಹೋರಾಟ ಸಂಬಂಧ ಯಾವುದೇ ವದಂತಿಗಳಿಗೆ ಕಿವಿಗೊಡದೇ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಕರ್ನಾಟಕ ರಾಜ್ಯ ಎಸ್ಟಿ ಹೋರಾಟ ಸಮಿತಿಯ ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಸಂಸದ ವಿರೂಪಾಕ್ಷಪ್ಪ, ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಮುಕುಡಪ್ಪ, ಅಣ್ಣೇಗೌಡ, ಬಿ.ಎಂ.ರಘು, ಸಂಘಟನಾ ಕಾರ್ಯದರ್ಶಿ ಜೋಗಿ ಮಂಜು, ಹರೀಶ್, ಮುಡಾ ಸದಸ್ಯ ನವೀನ್, ಪಿರಿಯಾಪಟ್ಟಣ ಗಣೇಶ್, ಹುಣಸೂರು ಗಣೇಶ್, ಗುಂಡ್ಲುಪೇಟೆ ಹುಚ್ಚೇಗೌಡ, ಬೀರೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು