Advertisement

ಜನರಿಗೆ ಸೇವೆ ನೀಡುವುದರಲ್ಲಿ ಸರ್ಕಾರ ಸೋತಿದೆ : ಸ್ವಪಕ್ಷದ ವಿರುದ್ಧವೇ ಗುಡುಗಿದ ಹಳ್ಳಿಹಕ್ಕಿ

02:45 PM Apr 20, 2021 | Team Udayavani |

ಮೈಸೂರು : ರಾಜ್ಯದ ಎಲ್ಲ ತೀರ್ಮಾನವನ್ನೂ  ಮುಖ್ಯಮಂತ್ರಿ ಒಬ್ಬರೇ ತೆಗೆದುಕೊಳ್ಳುತ್ತಿದ್ದಾರೆ.  ಹಾಗಾದರೆ ಕ್ಯಾಬಿನೆಟ್ ಯಾಕೆ ಬೇಕು ?ಕ್ಯಾಬಿನೆಟ್ ಮಿನಿಸ್ಟರ್ ಗಳೇ ಸರ್ಕಾರ. ಆದರೆ ಇಲ್ಲಿ ಏನ್ ಆಗುತ್ತಿದೆ ಎಂದು ವಿಧಾನ ಪರಿಷತ್ತು ಸದಸ್ಯ ಅಡಗೂರು ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕೋವಿಡ್ ಬಗ್ಗೆ ರಾಜ್ಯಪಾಲರು ಮೀಟಿಂಗ್ ತೆಗೆದುಕೊಳ್ಳುತ್ತಾರೆ ಅಂದರೆ ಏನರ್ಥ ?  ಜನತಾ ಸರ್ಕಾರ ವಿಫಲವಾದಾಗ ರಾಜ್ಯಪಾಲರು ಮಧ್ಯಪ್ರವೇಶ ಮಾಡಬಹುದು.  ಸುಮ್ಮನೆ ಯಾಕೆ ರಾಜ್ಯಪಾಲರು ಮೀಟಿಂಗ್ ಮಾಡಬೇಕು ? ಹಾಗಾದರೆ ಕೋವಿಡ್ ಹಿಮ್ಮೆಟ್ಟಿಸಲು ಸರ್ಕಾರ ವಿಫಲವಾಗಿದ್ಯಾ? 2 ಸಾವಿರ ಹಾಸಿಗೆ, ಬೆಡ್, ಆಕ್ಸಿಜನ್ ತಂದ್ರಲ್ಲ ಅವು ಏನಾಯ್ತು? ಅದಕ್ಕೆ ಮಾಡಿದ ವ್ಯವಸ್ಥೆ ಏನಾಯ್ತು.? ಎಂದು ಪ್ರಶ್ನಿಸಿದರು.

ಮೊದಲ ಅಲೆ ಮುಗಿದ ಮೇಲೆ ಬಿಲ್ ಮಾಡುವುದರಲ್ಲಿ ಬ್ಯುಸಿ ಆಗಿಬಿಟ್ರಿ. ಎಲ್ಲವನ್ನೂ ಗೋಜಲು, ಗೊಂದಲ ಮಾಡಿಕೊಂಡಿದ್ದೀರಿ.  ಎರಡನೇ ಗಾಳಿ ಬೀಸುತ್ತೆ ಅಂತ ಡಬ್ಲ್ಯೂಎಚ್‌ಒ ಹೇಳಿತ್ತು.  ಕೇಂದ್ರ ಸರ್ಕಾರಕ್ಕೂ ಮಾಹಿತಿ ಇತ್ತು.  ನೀವ್ ಏನ್ ತಯಾರಿ ಮಾಡಿಕೊಂಡಿದ್ರಿ. ಜನರಿಗೆ ಸೇವೆ ನೀಡುವುದರಲ್ಲಿ ಸರ್ಕಾರ ಸೋತಿದೆ‌. ಬರೀ ಮೀಟಿಂಗ್ ಮಾಡ್ತೀರ,  ತೀರ್ಮಾನ ಏನಾಗಿದೆ ಹೇಳಿ ಎಂದು ಅಸಮಾಧಾನ ಹೊರ ಹಾಕಿದರು.

ಸಿಎಂ ಹಾಗೂ ಸಚಿವರು, ಡಿಸಿಎಂ ನಡುವೆ ಸಮನ್ವಯತೆ ಹೋಗಿದೆ. ಅದು ಹೋದ ಕಾರಣವೇ ಈ‌ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಐಎಸ್‌ಎಸ್ ಅಧಿಕಾರಿಗಳು ಯಾವ ಮಂತ್ರಿಯ ಮಾತನ್ನೂ ಕೇಳುತ್ತಿಲ್ಲ. ಇನ್ನಾದರೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪವರ್ ಕೊಡಬೇಕು. ನಿರ್ಧಾರ ತೆಗೆದುಕೊಳ್ಳುವ ಹಣಕಾಸು ವ್ಯವಸ್ಥೆ ಸರ್ಕಾರ ಮಾಡಿಕೊಡಬೇಕು. ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಇದನ್ನೂ ಓದಿ :ದೆಹಲಿ ಲಾಕ್ ಡೌನ್ ಹಿನ್ನೆಲೆ JNU ನಲ್ಲಿ ಬಿಗಿ ಕ್ರಮ ಜಾರಿ

Advertisement

ಕೋವಿಡ್ ಹೆಚ್ಚಾಗಲು ಜನರೇ ಕಾರಣವೆಂಬ ಸಚಿವ ಸುಧಾಕರ್ ಹೇಳಿಕೆ ಕುರಿತು ಪ್ರತಿಕ್ತಿಯೆ ನೀಡಿದ ಅವರು, ಜವಾಬ್ದಾರಿ ಸ್ಥಾನದಲ್ಲಿರುವ ಮಂತ್ರಿ ಬೇಜಬಾವ್ದಾರಿ ಹೇಳಿಕೆ ನೀಡಿದ್ದಾರೆ.ಕೋವಿಡ್  ಹೆಚ್ಚಾಗಲು ಜನರೇ ಕಾರಣ ಅಂತೀರಲ್ಲ. ಆಗಿದ್ರೆ ನೀವು ಏನ್ ಮಾಡುತ್ತಿದ್ದೀರಾ ಸಿಎಂ ಆಸ್ಪತ್ರೆಯಲ್ಲಿದ್ದಾರೆ ಸರಿ,  ಮೂರು ಜನ ಡಿಸಿಎಂ ಏನ್ ಮಾಡುತ್ತಿದ್ದಾರೆ. ಅವರನ್ನು ಸುಮ್ಮನೆ ಡಿಸಿಎಂ ಮಾಡಿರೋದಾ? ಜನರ ಮೇಲೆ ಹೊಣೆ ಹಾಕಬಾರದು. ಒಬ್ಬ ಮಂತ್ರಿ ಜನ ಕಾರಣ ಅಂತಾರೆ.  ಮತ್ತೊಬ್ಬ ಮಂತ್ರಿ ಬೇರೆ ರಾಜ್ಯದ ಪರಿಸ್ಥಿತಿ ನಮ್ಮಲ್ಲಿಲ್ಲ ಅಂತಾರೆ. ಜನ ಈಗಲೇ ಪಡಿಪಾಟಲು ಪಟ್ಟಿದ್ದಾರೆ ಎಂದು ಗುಡುಗಿದರು.

ಬೆಡ್, ಆಕ್ಸಿಜನ್ ಸಿಗದೆ ಜನರು ಪರದಾಡುತ್ತಿದ್ದಾರೆ. ಇದಕ್ಕಿಂತಲು ಬೇರೆ ಪರಿಸ್ಥಿತಿ ರಾಜ್ಯಕ್ಕೆ ಬರಬೇಕಾ? ನಾನು ಆಡಳಿತ ಪಕ್ಷದಲ್ಲಿ ಇದ್ದರೂ ಸರಿ. ಇದನ್ನು ನಾನು ಹೇಳದೆ ಇದ್ದರೆ ನನಗೆ ನಾನೇ ವಂಚನೆ ಮಾಡಿದಂತೆ ಆಗುತ್ತದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next