Advertisement

ಸರ್ಕಾರದ ಮೇಲೆ ಪರಿಣಾಮ ಬೀರಲ್ಲ

12:30 PM May 26, 2019 | Sriram |

ಬೆಂಗಳೂರು: ‘ಲೋಕಸಭೆ ಚುನಾವಣೆಯಲ್ಲಿ ಈ ಪರಿಯ ಸೋಲು ನಿರೀಕ್ಷಿಸಿರಲಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಯಶಸ್ವಿಯಾಗಬೇಕಿತ್ತು. ವ್ಯತ್ಯಾಸವಾಗಿರುವುದು ನಿಜ, ಆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ’

Advertisement

ಇದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್‌ ಅವರ ಮಾತುಗಳಿವು. ಲೋಕಸಭೆ ಫ‌ಲಿತಾಂಶ ಕುರಿತು ‘ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಸೋಲಾಯ್ತು ಎಂದು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಪಕ್ಷವನ್ನು ತಳಮಟ್ಟದಿಂದ ಕಟ್ಟುವುದು ನಮ್ಮ ಗುರಿ ಎಂದು ಹೇಳಿದರು.
ಸಂದರ್ಶನ ಸಾರಾಂಶ:

ಜೆಡಿಎಸ್‌ಗೆ ಒಂದು ಸ್ಥಾನ ಎಂಬ ನಿರೀಕ್ಷೆ ಇತ್ತಾ?
ಇಲ್ಲ. ಕನಿಷ್ಠ ಮೂರರಿಂದ ನಾಲ್ಕು ಸ್ಥಾನ ಗೆಲ್ಲುವ ನಿರೀಕ್ಷೆಯಿತ್ತು. ತುಮಕೂರು, ಮಂಡ್ಯ, ಶಿವಮೊಗ್ಗ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವೂ ಇತ್ತು.

ಜೆಡಿಎಸ್‌ ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತೇನೆ ಅಂತ ಹೇಳಿದಿರಿ?
ಹೌದು. ಅದು ನನ್ನ ನಿರ್ಧಾರ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರಿಗೂ ಆ ಬಗ್ಗೆ ಹೇಳಿದ್ದೇನೆ. ಅವರ ತೀರ್ಮಾನಕ್ಕೆ ನಾನು ಬದ್ಧ

ಲೋಕಸಭೆ ಚುನಾವಣೆ ಫ‌ಲಿತಾಂಶ ಜೆಡಿಎಸ್‌ ಭವಿಷ್ಯದ ಮೇಲೆ ಪರಿಣಾಮ ಬೀರುವುದಿಲ್ಲವಾ?
ಏನೂ ಇಲ್ಲ. ಇದು ಲೋಕಸಭೆ ಚುನಾವಣೆ ಮ್ಯಾಂಡೇಟ್. ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತ ಬಂದಿದೆ. ವಿಧಾನ ಸಭೆಯಲ್ಲಿ ಬಿಜೆಪಿಗೆ ಬಹುಮತ ಬಂದಿಲ್ಲ. ಹೀಗಾಗಿ, ನಾವು ಕಾಂಗ್ರೆಸ್‌ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದೇವೆ.

Advertisement

ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲವಾ?
ಯಾವುದೇ ರೀತಿಯಲ್ಲೂ ಬೀರುವುದಿಲ್ಲ. ಸಮ್ಮಿಶ್ರ ಸರ್ಕಾರ ಸುಗಮವಾಗಿ ನಡೆಯಲಿದೆ.

ಸಮ್ಮಿಶ್ರ ಸರ್ಕಾರದ ಸಾಧನೆಗೆ ಜನ ನೀಡಿದ ತೀರ್ಪು ಎಂದು ಪ್ರತಿಪಕ್ಷಗಳು ಹೇಳುತ್ತಿವೆಯಲ್ಲಾ?
ರಾಷ್ಟ್ರ ರಾಜಕಾರಣ ಬೇರೆ, ರಾಜ್ಯ ರಾಜಕಾರಣ ಬೇರೆ. ಮತದಾರರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತ ನೀಡುವಾಗ ಯೋಚನೆ ಮಾಡುವುದು ಬೇರೆ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಮತ ನೀಡುವಾಗ ಯೋಚಿಸುವುದು ಬೇರೆ. ಅದೇ ರೀತಿ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗೂ ಬೇರೆ ಬೇರೆ ದೃಷ್ಟಿಕೋನದಲ್ಲಿ ಮತ ನೀಡುತ್ತಾರೆ. ಹೀಗಾಗಿ, ಇದು ಸಮ್ಮಿಶ್ರ ಸರ್ಕಾರದ ವಿರುದ್ಧದ ಜನಾಭಿಪ್ರಾಯ ಎಂದು ಹೇಳುವುದರಲ್ಲಿ ಯಾವ ಅರ್ಥವೂ ಇಲ್ಲ.

ವಿಧಾನಸಭೆ ವಿಸರ್ಜನೆ ಮಾತುಗಳು ಕೇಳಿ ಬರುತ್ತಿವೆಯಲ್ಲಾ?
ಆ ರೀತಿಯ ಯೋಚನೆ ಯಾರಲ್ಲೂ ಇಲ್ಲ. ಅದರ ಅಗತ್ಯವೂ ಇಲ್ಲ, ಅದು ಅಂದುಕೊಂಡಷ್ಟು ಸುಲಭವೂ ಅಲ್ಲ, ಜೆಡಿಎಸ್‌ ಏಕಾಂಗಿಯಾಗಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ.

ಕಾಂಗ್ರೆಸ್‌-ಜೆಡಿಎಸ್‌ ಯಶಸ್ವಿಯಾಗಲಿಲ್ಲವಾ?
ಕೆಲವೊಂದು ವ್ಯತ್ಯಾಸಗಳಿಂದ ಆಗಲಿಲ್ಲ. ನಮ್ಮ ಲೆಕ್ಕಾಚಾರದ ಪ್ರಕಾರ ಕನಿಷ! 16 ಸ್ಥಾನ ಗೆಲ್ಲುವ ಗುರಿ ಹೊಂದಿದ್ದೆವು. ಆದರೆ, ಒಂದೊಂದು ಕ್ಷೇತ್ರದಲ್ಲೂ ಒಂದೊಂದು ರೀತಿಯ ಮಾಹಿತಿಗಳು ಇವೆ. ಆಗಿ ಹೋಗಿದ್ದು ಚಿಂತಿಸಿ ಫ‌ಲವಿಲ್ಲ.

ಜೆಡಿಎಸ್‌ನ ಮುಂದಿನ ಹಾದಿ?
ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡುವುದು. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಇದೇ ಕೊನೆಯ ಚುನಾವಣೆಯೂ ಆಲ್ಲ. ನಾವೆಲ್ಲರೂ ಗೆಲುವು-ಸೋಲು ಎಲ್ಲವನ್ನೂ ನೋಡಿದ್ದೇವೆ. ಸಮಾನವಾಗಿಯೇ ಸ್ವೀಕರಿಸಿದ್ದೇವೆ. ಆದರೂ ಮಾಜಿ ಪ್ರಧಾನಿ ದೇವೇಗೌಡರ ಸೋಲು ನನಗೆ ಅತೀವ ನೋವು ತಂದಿದೆ.

ಫ‌ಲಿತಾಂಶ ಕುಟುಂಬ ರಾಜಕಾರಣದ ವಿರುದ್ಧದ ಆಕ್ರೋಶವಾ? ಬಿಜೆಪಿಯಲ್ಲಿ ಗೆದ್ದಿರುವವರು ಕುಟುಂಬ ರಾಜಕಾರಣ ಮಾಡಿಲ್ಲವಾ. ಯಡಿಯೂರಪ್ಪ ಪುತ್ರ, ಶಶಿಕಲಾ ಜೊಲ್ಲೆ ಅವರ ಪತಿ, ಸಿ.ಎಂ.ಉದಾಸಿ ಪುತ್ರ ಸ್ಪರ್ಧಿಸಿ ಗೆದ್ದಿಲ್ಲವಾ? ದೇವೇ ಗೌಡರ ಕುಟುಂಬದ ಮೇಲೆ ಟಾರ್ಗೆಟ್ ಮಾಡಿ ಆರೋಪ ಮಾಡುವುದು ಯಾಕೆ ಎಂಬುದೇ ಅರ್ಥ ಆಗು ವುದಿಲ್ಲ.

– ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next