ಮೈಸೂರು: ಅನರ್ಹ ಶಾಸಕ ಎಚ್. ವಿಶ್ವನಾಥ್ ಮತ್ತು ಸಾ.ರಾ. ಮಹೇಶ್ ನಡುವಿನ 25 ಕೋಟಿ ವಿವಾದ ಈಗ ಚಾಮುಂಡೇಶ್ವರಿ ಸನ್ನಿಧಾನಕ್ಕೆ ತಲುಪಿದೆ. ಉಭಯ ನಾಯಕರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದು, ಆದರೆ ಪರಸ್ಪರ ಭೇಟಿಯಾಗಲಿಲ್ಲ.
ಗುರುವಾರ ಬೆಳಿಗ್ಗೆ ಚಾಮುಮಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಅನರ್ಹ ಶಾಸಕ ವಿಶ್ವನಾಥ್, ತಾನು ಯಾವುದೇ ಆಣೆ ಪ್ರಮಾಣ ಮಾಡುವುದಿಲ್ಲ. ನನ್ನನ್ನು ಕೊಂಡುಕೊಂಡ ಭೂಪನನ್ನು ನೋಡಲು ತಾನು ಬಂದಿರುವುದು ಎಂದು ಹೇಳಿಕೆ ನೀಡಿದರು.
ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿದ ಎಚ್. ವಿಶ್ವನಾಥ್ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಯಾವುದೇ ಆಣೆ ಪ್ರಮಾಣ ಮಾಡುವುದಿಲ್ಲ. ಆರೋಪ ಮಾಡಿ ಓಡಿಹೋಗುವವರಿಗೆ ಒಳ್ಳೆಯ ಬುದ್ದಿ ಕೊಡಲೆಂದು ದೇವರ ಬಳಿ ಪ್ರಾರ್ಥನೆ ಮಾಡಿಕೊಂಡಿದ್ದೇನೆ. ನಾನಿಲ್ಲಿ ಬಂದಿರುವುದು ನನ್ನನ್ನು ಖರೀದಿಸಿದವರನ್ನು ನೋಡಲು. ಸಾ.ರಾ ಮಹೇಶ್ ಹೇಳಿದಂತೆ 25 ಕೋಟಿ ಕೊಟ್ಟು ನನ್ನನ್ನು ಖರೀದಿ ಮಾಡಲು ಬಂದವರನ್ನು ನೋಡಲು ಬಂದಿದ್ದೇನೆ ಎಂದರು.
ನಂತರ ಬೆಟ್ಟಕ್ಕೆ ಆಗಮಿಸಿದ ಸಾ.ರಾ.ಮಹೇಶ್, ವಿಶ್ವನಾಥ್ ನನ್ನ ಮೇಲೆ ವೈಯಕ್ತಿಕ ಆರೋಪ ಮಾಡಿದ್ದಾರೆ. ಅವರ ಆರೋಪ ಸಾಬೀತಾದರೆ ನಾನು ಕ್ಷಮೆಯಾಚಿಸುವೆ. ನಾನು ಯಾರನ್ನೂ ಕರೆದುಕೊಂಡು ಬರುತ್ತೇನೆಂದು ಎಲ್ಲೂ ಹೇಳಿಲ್ಲ. ಮುಂದಿನ ದಿನಗಳಲ್ಲಿ ಜನರಿಗೆ ಎಲ್ಲಾ ತಿಳಿಯಲಿದೆ ಎಂದರು.
ಹುಣಸೂರು ಕ್ಷೇತ್ರದ ಶಾಸಕ ಸ್ಥಾನಕ್ಕೆ ವಿಶ್ವನಾಥ್ ರಾಜೀನಾಮೆ ನೀಡಿದ ಸಂದರ್ಭ ಸಾ.ರಾ. ಮಹೇಶ್ ಅವರು ವಿಧಾನಸಭೆಯಲ್ಲಿ ಮಾಡಿದ್ದ ಆರೋಪವೊಂದು ಈ ಪ್ರಕರಣದ ಮೂಲ. ವಿಶ್ವನಾಥ್ ಅವರು 25 ಕೋಟಿ ಹಣ ಪಡೆದು ರಾಜೀನಾಮೆ ನೀಡಿದ್ದರು ಎಂದು ಸಾ ರಾ ಮಹೇಶ್ ಆರೋಪ ಮಾಡಿದ್ದರು. ಈ ಪ್ರಕರಣ ಆಣೆ ಪ್ರಮಾಣದವರೆಗೂ ತಲುಪಿತ್ತು .