Advertisement

ಸರಕಾರಿ ಆಸ್ತಿ ಸಂರಕ್ಷಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

11:37 AM Oct 19, 2021 | Team Udayavani |

ಹುಣಸೂರು : ಕೋಟ್ಯಾಂತರ ರೂ ಬೆಲೆಬಾಳುವ ಸರಕಾರಿ ಭೂಮಿ ಸಂರಕ್ಷಿಸದ ಅಧಿಕಾರಿಗಳು, ಬೇಕಾಬಿಟ್ಟಿ ಅನ್ಯಕ್ರಾಂತ ಮಾಡುತ್ತಿರುವ ಬಗ್ಗೆ ದೂರುಗಳಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದೆಂದು ಶಾಸಕ ಎಚ್.ಪಿ.ಮಂಜುನಾಥ್ ಅಧಿಕಾರಿಗಳಿಗೆ ಎಚ್ಚರಿಸಿದರು.

Advertisement

ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಾ.ಪಂ.ಪಿಡಿಓಗಳು, ಕಂದಾಯ ಹಾಗೂ ಸರ್ವೆ ಇಲಾಖಾಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಶಾಸಕರು, ತಾಲೂಕಿನಲ್ಲಿ ಆಶ್ರಯ ನಿವೇಶನಕ್ಕಾಗಿ ಸ್ಥಳ ಗುರುತಿಸಿದೆ. ಆದರೆ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಮೂರೂ ಇಲಾಖೆಗಳ ಅಧಿಕಾರಿಗಳು ಅಗತ್ಯ ಕ್ರಮವಹಿಸಿ, ಆಯಾ ಗ್ರಾ.ಪಂ.ಗಳಿಗೆ ಹಸ್ತಾಂತರಿಸಬೇಕು. ಎಲ್ಲ ಪ್ರಕ್ರಿಯೆಗಳಿಗೆ ಪತ್ರ ಬರೆಯುವ ಪ್ರವೃತ್ತಿ ಬಿಟ್ಟು, ಇ-ಮೇಲ್ ಮೂಲಕ ವ್ಯವಹರಿಸಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಿದರು. ತಹಸೀಲ್ದಾರ್ ಡಾ.ಅಶೋಕ್, ಇ.ಓ.ಗಿರೀಶ್ ಹಾಗೂ ಎಡಿಎಲ್‌ಆರ್ ಮಮತಾರವರ ನೇತೃತ್ವದಲ್ಲಿ ಈ ಎಲ್ಲ ಕೆಲಸಗಳು ಕಾಲಮಿತಿಯೊಳಗೆ ಆಗಬೇಕೆಂದು ಸೂಚಿಸಿದರು.

151.67 ಎಕರೆ ಸರಕಾರಿ ಭೂಮಿ ಲಭ್ಯ:
ತಾಲೂಕಿನ 26 ಗ್ರಾ.ಪಂ.ಗಳಲ್ಲಿ ಒಟ್ಟು 151.67 ಎಕರೆ ಭೂಮಿ ಆಶ್ರಯ ಯೋಜನೆಗಾಗಿ ಲಭ್ಯವಿದ್ದು, ಈ ಬಗ್ಗೆ ಆಯಾ ಪಂಚಾಯ್ತಿಯ ಅಭಿವೃದ್ದಿ ಅಧಿಕಾರಿಗಳು ಹಾಗೂ ಕಂದಾಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದ್ದು, ಅದರಂತೆ ಮೂಕನಹಳ್ಳಿ ಗ್ರಾ.ಪಂ.-34.01ಎಕರೆ, ಗೋವಿಂದನಹಳ್ಳಿ-13.30ಎ, ಉಯಿಗೊಂಡನಹಳ್ಳಿ-7.05ಎ, ಚಿಲ್ಕುಂದ-6.10ಎ, ನೇರಳಕುಪ್ಪೆ-9ಎ, ಬಿಳಿಕೆರೆ-8.35ಎ, ಕಟ್ಟೆಮಳಲವಾಡಿ-8.10ಎ, ಮನುಗನಹಳ್ಳಿ-7.25, ಬನ್ನಿಕುಪ್ಪೆ, ಹೆಗ್ಗಂದೂರು ಗ್ರಾ.ಪಂಗಳಲ್ಲಿ ತಲಾ-5ಎ, ಆಸ್ಪತ್ರೆಕಾವಲ್, ಉದ್ದೂರು, ಹಿರಿಕ್ಯಾತನಹಳ್ಳಿ, ಕರ್ಣಕುಪ್ಪೆ ಗ್ರಾ.ಪಂಗಳಲ್ಲಿ ತಲಾ-4ಎ, ಧರ್ಮಾಪುರ, ಮೋದೂರು ಗ್ರಾ.ಪಂಗಳಲ್ಲಿ ತಲಾ-3ಎ, ಕಿರಂಗೂರು-4.12ಎ, ಮರದೂರು-4.10ಎ, ಜಾಬಗೆರೆ-3.34ಎ, ಬೀಜಗನಹಳ್ಳಿ-3.10ಎ, ಉದ್ದೂರುಕಾವಲ್-3ಎ, ಉಮ್ಮತ್ತೂರು-2.17ಎ, ಹರವೆ-2.32ಎ, ದೊಡ್ಡಹೆಜ್ಜೂರು-2ಎ, ತಟ್ಟೆಕೆರೆ-1.30ಎ, ಮುಳ್ಳೂರು ಗ್ರಾ.ಪಂನಲ್ಲಿ-1.06ಎಕರೆ ಲಭ್ಯವಿದ್ದರೆ, ಕೆಲವೆಡೆ ಒತ್ತುವರಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸರಕಾರಿ ಭೂಮಿ ವಶಕ್ಕೆ ಆದೇಶ:
ತಾಲೂಕಿನ ಮೂಕನಹಳ್ಳಿ, ಗೋವಿಂದನಹಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಹಾಗೂ ನರಸಿಂಹಸ್ವಾಮಿತಿಟ್ಟು ವ್ಯಾಪ್ತಿಯಲ್ಲಿ ಸಾಕಷ್ಟು ಸರಕಾರಿ ಭೂಮಿ ಒತ್ತುವರಿಮಾಡಿಕೊಂಡು ಅಕ್ರಮವಾಗಿ ಸಾಗುವಳಿ ಮಾಡಲು ಮುಂದಾಗಿದ್ದರೂ ಆರ್.ಐ-ವಿ.ಎ.ಗಳು ಕಾನೂನು ರೀತ್ಯ ಭೂಮಿ ವಶಕ್ಕೆ ಕ್ರಮವಹಿಸುತ್ತಿಲ್ಲವೇಕೆಂದು ತೀವ್ರ ಆಕ್ರೋಶ ವ್ಯಕ್ತಪಡಿಸಿ. ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ, ಸರಕಾರಿ ಭೂಮಿ ವಶಕ್ಕೆ ಪಡೆಯಬೇಕೆಂದು ತಹಸೀಲ್ದಾರಿಗೆ ಶಾಸಕರು ಸೂಚಿಸಿದರು.

ಇದನ್ನೂ ಓದಿ :ಕುಮಾರಸ್ವಾಮಿ ಟೀಕಿಸಲು ಅನ್ಸಾರಿ-ಜಮೀರ್‌ಗಿಲ್ಲ ನೈತಿಕತೆ

Advertisement

ತಪ್ಪಿತಸ್ಥರವಿರುದ್ದ ಮೊಕದ್ದಮ್ಮೆ:
10 ಗುಂಟೆಯೊಳಗಿನ ಭೂಮಿ ನೊಂದಾಯಿಸುವಂತಿಲ್ಲಾ. ನಗರದ 8ಕಿ.ಮೀ.ವ್ಯಾಪ್ತಿಯಲ್ಲಿ ಕಾನೂನು ಉಲ್ಲಂಘಿಸಿ 1-2 ಗುಂಟೆ ಭೂಮಿಯನ್ನು ಅನ್ಯಕ್ರಾಂತ ಮಾಡದೆ ನೊಂದಾಯಿಸುತ್ತಿರುವ ಪರಿಣಾಮ ಅಭಿವೃದ್ದಿ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಈ ವಿಚಾರದಲ್ಲಿ ಸರ್ವೆ ಮತ್ತು ಕಂದಾಯ, ಗ್ರಾ.ಪಂ.ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ದೂರಿದೆ. ಸಂಬಂಧಿಸಿದ ಅಧಿಕಾರಿಗಳ ವಿರುದ್ದ ತಾವೇ ಕ್ರಿಮಿನಲ್ ಮೊಕದಮ್ಮೆ ಹೂಡುವುದಾಗಿ ಎಚ್ಚರಿಸಿದರು.

ನರೇಗಾ: ಪಿಡಿಓಗಳಿಗೆ ಎಚ್ಚರಿಕೆ:
ನರೇಗಾ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆಯಲ್ಲೇ ತಾಲೂಕು ಪ್ರಥಮ ಸ್ಥಾನದಲ್ಲಿರುವುದು ಹೆಮ್ಮೆ, 41 ಗ್ರಾ.ಪಂ.ಗಳ ಪೈಕಿ ಉಯಿಗೊಂಡನಹಳ್ಳಿ ಗ್ರಾ.ಪಂ.ಶೇ. 145ರಷ್ಟು ಸಾಧನೆ ಮಾಡಿದೆ. ಅದೇ ರೀತಿ ಕೆಲವು ಪಂಚಾಯ್ತಿಗಳು ಅತ್ಯುತ್ತಮ ಸಾಧನೆಗೈದಿವೆ. ಆದರೆ ಅರ್ಧಕ್ಕೂ ಹೆಚ್ಚು ಗ್ರಾ.ಪಂ.ಗಳು ಶೇ. 20-30ರಷ್ಟು ಕಾಮಗಾರಿ ನಡೆಸಿ ಕಳೆಪೆ ಸಾಧನೆಗೈದಿರುವುದು ತಾಲೂಕಿನ ಜನತೆಗೆ ದ್ರೋಹ ಮಾಡಿದಂತೆ. ಮುಂದೆ ಇದನ್ನು ಸಹಿಸುವುದಿಲ್ಲ. ಪಿಡಿಓಗಳು ಸಬೂಬು ಹೇಳದೆ ಬದ್ದತೆಯಿಂದ ಕೆಲಸ ಮಾಡಿ. ತಾಲೂಕಿನ ಜನತೆಗೆ ಕೆಲಸ ನೀಡಿರೆಂದು ತಾಕೀತು ಮಾಡಿದರು. ಗಾಗೇನಹಳ್ಳಿ ಪಂಚಾಯ್ತಿಯಲ್ಲಿ ಕಾರ್ಮಿಕರು ಕೆಲಸ ಮಾಡಿದ್ದರೂ ವ್ಯಕ್ತಿಯೊಬ್ಬ ಜಿದ್ದಿಗಾಗಿ ಜೆಸಿಬಿ ನಿಲ್ಲಿಸಿ ಪೋಟೋ ತೆಗೆದು ತೊಂದರೆ ನೀಡಿರುವ ಬಗ್ಗೆ ದೂರು ದಾಖಲಿಸಿರೆಂದು ಇಓ ಹಾಗೂ ಪಿಡಿಓರಿಗೆ ಶಾಸಕರು ನಿರ್ದೇಶಿಸಿದರು.

ಲಸಿಕೆ ಹಾಕಿಸುವ ಕಾರ್ಯದಲ್ಲಿ ಗ್ರಾ.ಪಂ.ಪಿಡಿಓಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಆದರೆ ಆರ್.ಐ-ವಿ.ಎ.ಗಳು ಸ್ಪಂದಿಸದಿರುವ ಬಗ್ಗೆ ದೂರಿದ್ದು, ಎರಡೂ ಇಲಾಖೆಗಳು ಸಮನ್ವಯತೆಯೊಂದಿಗೆ ಲಸಿಕೆ ಹಾಕಿಸಲು ಮುಂದಾಗಬೇಕೆAದು ಶಾಸಕರು ಸೂಚನೆ ನೀಡಿದರು.ಸಭೆಯಲ್ಲಿ ಇಓ ಗಿರೀಶ್, ತಹಸೀಲ್ದಾರ್ ಡಾ.ಅಶೋಕ್, ಎಡಿಎಲ್‌ಆರ್.ಮಮತಾ, ಪೌರಾಯುಕ್ತ ರಮೇಶ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next