Advertisement
ಕಲಿಯುವ ಹಸಿವು ಮತ್ತು ಹೊಟ್ಟೆ ಹಸಿವಿನೊಂದಿಗೆ 80 ಕಿ.ಮೀ. ಚಪ್ಪಲಿಯೂ ಇಲ್ಲದೆ ಕಾಲ್ನಡಿಗೆಯಲ್ಲಿ ಹೊಸೂರು ಸನಿಹದ ಹುಟ್ಟೂರಿನಿಂದ ಬೆಂಗಳೂರಿಗೆ ಬಂದ ಬಾಲಕ, ಮುಂದೆ ಕೆಲವೇ ದಶಕಗಳಲ್ಲಿ ಶಿಕ್ಷಣವೆಂದರೆ ಇಷ್ಟೇನಾ ಎಂದು ಕೇಳುವ ಮಟ್ಟಕ್ಕೇರಿದ್ದು ಮಾತ್ರವಲ್ಲ, ಶಿಕ್ಷಣವೆಂದರೆ ಅದಲ್ಲ, ಇದು ಎಂದು ಸಾಧಿಸಿ ತೋರಿಸಿದರು.
Related Articles
Advertisement
ಪ್ರತಿಭೆ ಎನ್ನುವುದು ಯಾರ ಸ್ವತ್ತೂ ಅಲ್ಲ, ಉಳ್ಳವರು ಮತ್ತು ಮೇಲು ಜಾತಿಯವರಿಗಷ್ಟೇ ಸೇರಿದ ಸಂಪತ್ತೂ ಅಲ್ಲ, ಸ್ವಯಂ ಸಾಮರ್ಥ್ಯದಲ್ಲಿ ಯಾರೂ ಯಾವುದನ್ನೂ ಕೈವಶ ಮಾಡಿ ಕೊಳ್ಳಲು ಸಾಧ್ಯ. ಪ್ರಕೃತಿದತ್ತ ವರವನ್ನು ನಾವೆಲ್ಲರೂ ಪಡೆದಿದ್ದೇವೆ ಆದರೆ ಅದನ್ನೆ ಮರೆತಿದ್ದೇವೆ ಎಂಬ ವಾದಕ್ಕೆ ಮನಸ್ಸುಕೊಟ್ಟಿದ್ದ ಎಚ್ಚೆನ್, ತಾವೇ ಹಾಕಿಕೊಂಡ ಏಣಿಯನ್ನು ತಾವು ಬಯಸಿದ ಎತ್ತರದವರೆಗೂ ಏರಿದರು. ಓದು, ಶಿಕ್ಷಣ, ಅಧ್ಯಯನ, ಅಧ್ಯಾಪನ… ಸೂತ್ರಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ಎಚ್ಚೆನ್, ಬಹಿ ರಂಗ ಶುದ್ಧಿಯೊಂದಿಗೆ ಅಂತರಂಗದ ಶುದ್ಧಿಯನ್ನೂ ಜೀವಿತಾ ವಧಿಯ ಉದ್ದಕ್ಕೂ ಕಾಪಾಡಿಕೊಂಡು ಬಂದರು. ಒಳಗೊಂದು ಹೊರಗೊಂದೆಂಬ ತಟವಟ ಅವರಿಗೆ ಕಂಡರಾಗದ ಗುಣ. ಮೋಸ ವಂಚನೆ ಆಷಾಢಭೂತಿತನ ಅವರ ಪಾಲಿನ ಅಸಹ್ಯ. ಎಳವೆಯಲ್ಲೇ ದೊರೆತ ಮಹಾತ್ಮಾ ಗಾಂಧೀಜಿ ಸಾಮೀಪ್ಯದ ಪ್ರಭಾವ ಎಚ್ಚೆನ್‌ರ ಭವಿಷ್ಯದ ಬದುಕಿನುದ್ದಕ್ಕೂ ಪ್ರಭಾವಳಿಯಾ ಯಿತು. ತಮ್ಮ ಹೆಗಲ ಮೇಲೆ ಗಾಂಧೀ ತಾತ ಕೈಯಿಟ್ಟ ಚಿತ್ರ ಎಚ್ಚೆನ್ ಪಾಲಿಗೆ ಪದ್ಮಭೂಷಣ ಕ್ಕಿಂತ ಮಿಗಿಲಾಗಿ ದ್ದರಲ್ಲಿ ಅಚ್ಚರಿ ಇರಲಿಲ್ಲ. ಚಿತ್ರವೊಂದು ಚಿತ್ತ ಕೆತ್ತಿದ ರೂಪಕ ಅದು. ತಾವು ಸಾಗಬೇಕಾದ ದಾರಿ ಗಾಂಧಿ ಮಾರ್ಗ ಎನ್ನುವುದನ್ನು ತಮ್ಮಷ್ಟಕ್ಕೇ ಖಚಿತಪಡಿಸಿಕೊಂಡರು. ತಾವು ಧರಿಸುತ್ತಿದ್ದ ಖಾದಿ ವಸ್ತ್ರದ ವಿಚಾರದಲ್ಲಿ ಹೆಮ್ಮೆಯೂ ಗೌರವವೂ ಅವರಲ್ಲಿತ್ತು. ಖಾದಿ ಧರಿಸಿದ ಮಾತ್ರಕ್ಕೆ ರಾಜಕಾರಣಿಗಳು ಪವಿತ್ರರಾಗುವರೆಂಬ ವಾದ, ಗಂಗೆಯಲ್ಲಿ ಮುಳುಗೆದ್ದ ಮಾತ್ರಕ್ಕೆ ಸಕಲ ಪಾಪ ಪರಿ ಹಾರವಾಗುತ್ತದೆಂಬಷ್ಟೇ ಮುರ್ಖತನದ್ದು ಎಂದು ಹೇಳುವಲ್ಲಿ ಯಾವ ಹಿಂಜರಿಕೆಯನ್ನೂ ತೋರಿದವರಲ್ಲ. ವಿಜ್ಞಾನದ ವಿಚಾರದಲ್ಲಿ ಅವರು ಹೊಂದಿದ್ದ ನಂಬಿಕೆ ಪವಾಡಗಳನ್ನೂ, ಪವಾಡ ಪುರುಷರನ್ನೂ ಮೈಮೇಲೆ ಎಳೆದು ಕೊಳ್ಳುವಂತೆ ಮಾಡಿತು. ಆದರೆ ಎಚ್ಚೆನ್ ಅಂಜಲಿಲ್ಲ ಅಳುಕಲಿಲ್ಲ. ಈ ಹೋರಾಟ ತೀವ್ರಗೊಂಡಾಗ, ತಾವು ಕುಲಪತಿಯಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅನಿಯಂತ್ರಿತ ಗಲಭೆ ಭುಗಿಲೆದ್ದ ಸಮಯದಲ್ಲಿ ಎಲ್ಲವನ್ನೂ ರಾಜಿ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಇದ್ದ ಅವಕಾಶವನ್ನು ಎಚ್ಚೆನ್, ಖಂಡತುಂಡವಾಗಿ ನಿರಾಕರಿಸಿದರು. ತಾವು ನಂಬಿದ ಮೌಲ್ಯಗಳ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದ ಅವರು ತಾವು ಹೊಂದಿದ್ದ ಹುದ್ದೆಗೆ ರಾಜೀನಾಮೆ ಬಿಸುಟಿ ಹೊರಬಂದರು. ಭಾನಾಮತಿ ಎಂಬ ಹೆಸರಿನಲ್ಲಿ ನಡೆಯುತ್ತಿದ್ದ ಮೂಢ ನಂಬಿಕೆ ಮತ್ತು ಆ ಹೆಸರಿನಲ್ಲಿ ನಡೆಯುತ್ತಿದ್ದ ಘಟನಾವಳಿಗಳ ಪರಿಶೀಲ ನೆಗೆ ಎಚ್ಚೆನ್ ಅಧ್ಯಕ್ಷತೆಯಲ್ಲಿ ಸರಕಾರ ವಿಧಾನ ಮಂಡಲದ ಸಮಿತಿಯನ್ನು ರಚಿಸಿತ್ತೆನ್ನುವುದು ಅವರು ಹೊಂದಿದ್ದ ವೈಜ್ಞಾನಿಕ ಮನೋಭಾವದ ತಾಜಾತನಕ್ಕೆ ಒಂದು ನಿದರ್ಶನ. ಕೇಂದ್ರ ಸರ್ಕಾರದ ರಬ್ಬರ್ ಸ್ಟಾಂಪ್ ಆಗಲಾರೆ!
ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಮುನ್ನ ವಿ.ವಿ. ಗಿರಿ ಕರ್ನಾಟಕದ ರಾಜ್ಯಪಾಲರಾಗಿದ್ದರು. ಎಚ್ಚೆನ್‌ರೊಂದಿಗೆ ಅವರದು ನಿಕಟ ಸ್ನೇಹ. ಅಂದಿನ ಪ್ರಧಾನಿ ಇಂದಿರಾಗಾಂಧಿ ಯವರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವಿದ್ದ ಗಿರಿಯವರಲ್ಲಿ ಯಾವುದಾದರೊಂದು ರಾಜಭವನದಲ್ಲಿ ಎಚ್ಚೆನ್ ರನ್ನು ಪ್ರತಿಷ್ಟಾಪಿಸುವ ಆಸೆ ಹುಟ್ಟಿಕೊಂಡಿತು. ಬಯ ಸಿದ ರಾಜ್ಯಕ್ಕೆ ರಾಜ್ಯಪಾಲರಾಗಿ ನೇಮಕಗೊಳ್ಳುವ ಅವಕಾಶ ವನ್ನು ಅವರು ಎಚ್ಚೆನ್ ಮುಂದೆ ಇಟ್ಟರು. ಎಷ್ಟೆಂದರೂ ರಾಷ್ಟ್ರ ಪತಿ, ಸ್ನೇಹ ಬೇರೆ, ಅತ್ಯುನ್ನತ ಸಂವೈಧಾನಿಕ ಹುದ್ದೆ ಬೇರೆ. ಆದರೆ ಎಚ್ಚೆನ್ ಮನಸ್ಸು ಗೊಂದಲಕ್ಕೆ ಒಳಗಾಗಲಿಲ್ಲ. ಅತ್ಯಂತ ನಯವಾಗಿಯೇ ಹುದ್ದೆಯನ್ನು ನಿರಾಕರಿಸಿದ ಎಚ್ಚೆನ್, ಕೇಂದ್ರ ಸರಕಾರದ ರಬ್ಬರ್ ಸ್ಟಾಂಪ್ ತಾನಾಗಲಾರೆ ಎಂಬ ಖಡಕ್ ಸಂದೇಶವನ್ನು ರವಾನಿ ಸಿದ್ದರು. ಹಾಗಂತ ಅವರು ರಾಜಕೀಯ ದಿಂದ ದೂರವಿದ್ದರು ಎಂದೇನೂ ಅಲ್ಲ. ಶಿಕ್ಷಣ, ಸಾಹಿತ್ಯ, ಸಿನಿಮಾ, ರಂಗಭೂಮಿ, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡವರನ್ನು ಆಯ್ದು ವಿಧಾನ ಪರಿಷತ್‌ಗೆ ನಾಮ ಕರಣ ಮಾಡುವ ಪರಿಪಾಠ ಕರ್ನಾಟ ಕದಲ್ಲಿ ಜೀವಂತವಿದ್ದ ಕಾಲದಲ್ಲಿ ಎಂಎಲ್‌ಸಿ ಆದವರು ಎಚ್ಚೆನ್. ಸರಕಾರದಿಂದ ನಾಮಕರಣಗೊಂಡವರು ಸರಕಾರದ ಋಣ ತೀರಿಸುವುದನ್ನೇ ತಮ್ಮ ಶಾಸಕ ಸ್ಥಾನದ ಕರ್ತವ್ಯ ಎಂದು ಭಾವಿಸುವ ಪರಂಪರೆ ಚಾಲ್ತಿಗೆ ಬಂದಿದೆ. ಸರಕಾರಕ್ಕೆ, ಆಡಳಿತ ಪಕ್ಷಕ್ಕೆ ಅದಕ್ಕಿಂತಲೂ ಮಿಗಿಲಾಗಿ ಮುಖ್ಯಮಂತ್ರಿಗೆ ಉಘೇ ಉಘೇ ಎನ್ನಬೇಕಾದ ಅಸಹಾಯಕ ವಾತಾವರಣ ರಾಜಕೀಯ ವರ್ತುಲದಲ್ಲಿ ನಿರ್ಮಾಣವಾಗಿದೆ. ಮುಖ್ಯ ಮಂತ್ರಿಯಾಗಿದ್ದ ಆರ್. ಗುಂಡೂರಾವ್ ಸರಕಾರ, ಎಚ್ಚೆನ್‌ರನ್ನು ಪರಿಷತ್‌ಗೆ ನಾಮಕರಣದ ಮೂಲಕ ಕರೆತಂದಾಗ ಅಂದಿನ ಆಡಳಿತ ಪಕ್ಷದ ರಾಜಕಾರಣ ಬೆಚ್ಚಿ ಬಿದ್ದಿತ್ತು. ಹೇಳಿ ಕೇಳಿ ಎಚ್ಚೆನ್‌ರನ್ನು ವಿಧಾನ ಪರಿಷತ್‌ಗೆ ತರುವುದೇ, ಕೆಂಡವನ್ನು ಸೆರಗಿಗೆ ಕಟ್ಟಿಕೊಂಡಂತಾ ಗದೇ ಎಂದು ಕಾಂಗ್ರೆಸ್ ಮುಖಂಡರನೇಕರು ಮುಖ್ಯಮಂತ್ರಿ ಯಲ್ಲಿ ತಕರಾರು ಮಂಡಿಸಿದ್ದರು. ವಿಧಾನ ಪರಿಷತ್‌ನಲ್ಲಿದ್ದ ಆರೂ ವರ್ಷ ಕಾಲ, ವಿರೋಧ ಪಕ್ಷದ ಶಾಸಕರಂತೆ ಕಾರ್ಯ ನಿರ್ವಹಿಸಿದ ಎಚ್ಚೆನ್ ತಮ್ಮ ಸ್ವಂತಿಕೆಗೆ ಮೈಲಿಗೆ ತಾಗದಂತೆ ನೋಡಿಕೊಂಡರು. ತಾವು ಸದನದ ಸದಸ್ಯ, ಕಾಂಗ್ರೆಸ್ ಶಾಸಕ ಅಲ್ಲ ಎಂದೊಮ್ಮೆ ಅವರು ಹೇಳಿದ್ದು ಸದನದ ಇತಿಹಾಸದ ಭಾಗ. ಅದು ಮ್ಯಾಜಿಕ್, ಮಿರೆ ಕಲ್ ಅಲ್ಲ!
ಸತ್ಯ ಸಾಯಿ ಬಾಬಾ, ಬಾಬಾನ ಅಪರಾವತಾರ ತಾನೆಂದು ಕರೆದುಕೊಂಡಿದ್ದ ಸಾಯಿಕೃಷ್ಣ, ಶಿವಬಾಲಯೋಗಿ ಮುಂತಾದ ವರು ಸೃಷ್ಟಿಸಿದ್ದ ಪವಾಡ, ದೇವ ಮಾನವ ಮಿಥ್ಯೆಯನ್ನು ಒಡೆಯುವುದಕ್ಕೆ ಎಚ್ಚೆನ್ ಬಳಸಿಕೊಂಡಿದ್ದು ವಿಜ್ಞಾನ ಎಂಬ ಅಸ್ತ್ರವನ್ನು. ಬಾಬಾ ಮಾಡುತ್ತಿರುವುದು ಮ್ಯಾಜಿಕ್ ಹೊರತೂ ಮಿರೆಕಲ್ ಅಲ್ಲ ಎನ್ನುವುದನ್ನು ಅವರು ಸಾಧಿಸಿ ತೋರಿದರು. ಬೆಂಗಳೂರಿಗೆ ನೀರು ಪೂರೈಕೆ ಮೂಲಗಳಲ್ಲಿ ಒಂದಾಗಿದ್ದ ತಿಪ್ಪಗೊಂಡನಹಳ್ಳಿ ಜಲಾಶಯ ಭಾರೀ ಬರಗಾಲದ ಕಾರಣವಾಗಿ ಬತ್ತಿ ಬೆಂಗಳೂರು ನಗರ ಜಲ ಮಂಡಳಿಯನ್ನು ಕಂಗಾಲಾಗಿಸಿತ್ತು. ತಾವು ತಪಸ್ಸು ಮಾಡಿ ಮಳೆ ಬರಿಸುವುದಾಗಿ ಶಿವಬಾಲಯೋಗಿ ಹೇಳಿದ್ದನ್ನು ಜಲಮಂಡಳಿ ನಂಬಿ, ಅವರ ತಪಸ್ಸಿಗೆ ತಿಪ್ಪಗೊಂಡನಹಳ್ಳಿ ಜಲಾಶಯದ ದಂಡೆಯಲ್ಲಿ ಚಪ್ಪರ ತೋರಣ ಅಲಂಕಾರದೊಂದಿಗೆ ವ್ಯಾಪಕ ವ್ಯವಸ್ಥೆ ಮಾಡಿತ್ತು. ಇದನ್ನು ಹುಚ್ಚಾಟ ಎಂದು ಎಚ್ಚೆನ್ ಕಟುವಾಗಿ ಟೀಕಿಸಿದಾಗ, ತಾವು ಎಚ್ಚೆನ್‌ಗೆ ಶಾಪ ಕೊಟ್ಟು ಶಿಕ್ಷಿಸುವುದಾಗಿ ಶಿವಬಾಲಯೋಗಿ ಗುಡುಗಿದ್ದರು. ಎಚ್ಚೆನ್ ನಕ್ಕಿದ್ದರು. ಶಿವಬಾಲಯೋಗಿ ತಪಸ್ಸು ಇಂದ್ರ ವರುಣಾದಿಗಳಿಗೆ ಮುಟ್ಟಲಿಲ್ಲ ಎನಿಸುತ್ತದೆ. ಮಳೆಯಂತೂ ಬರಲಿಲ್ಲ. ಮಳೆ ಬರಲಿಲ್ಲ, ಶಾಪವೂ ಬರಲಿಲ್ಲ ಎಂದು ಎಚ್ಚೆನ್ ವಂಗ್ಯವಾಡಿದ್ದರು. ಪಾಲಿಸಲಾಗದ್ದನ್ನು ಬೋಧಿಸಬಾರದು
ಪ್ರಶ್ನಿಸದೆ ಯಾವುದನ್ನೂ ಯಾವತ್ತೂ ಒಪ್ಪಿಕೊಳ್ಳಬಾರದೆನ್ನು ವುದು ಎಚ್ಚೆನ್ ಜೀವನ ಸೂತ್ರ. ಅವರು ಆರಂಭಿಸಿದ ಬೆಂಗಳೂರು ವಿಜ್ಞಾನ ವೇದಿಕೆ ಐದು ದಶಕಗಳ ಬಳಿಕವೂ ಜನ ಮುಗಿಬೀಳುವ ವಿಜ್ಞಾನೋತ್ಸವವಾಗಿದೆ. ಸಂಗೀತ, ಲಲಿತ ಕಲೆಗಳು, ರಂಗಭೂ ಮಿಗೆ ಪ್ರೋತ್ಸಾಹ ಕೊಡುವುದಕ್ಕೆ ಎಚ್ಚೆನ್ ಹೆಸರಾಗಿದ್ದರು. ಹಾಸ್ಯಪ್ರಜ್ಞೆ ಅವರನ್ನು ಎಲ್ಲರೂ ಸಾಮೀಪ್ಯ ಬಯಸುವಷ್ಟು ಸಜ್ಜನರನ್ನಾಗಿಸಿತ್ತು. ತಾನು ಪಾಲಿಸಲಾಗದೇ ಇರುವುದನ್ನು ಬೋಧಿಸುವುದಕ್ಕೆ ಮುಂದಾಗಬಾರದು ಎನ್ನುವು ದನ್ನು ನಂಬಿದ್ದರು ಎಚ್ಚೆನ್. ಪ್ರಖರ ಕನ್ನಡ ಭಾಷಾ ಪ್ರೇಮಿ ಯಾಗಿದ್ದ ಅವರು ತೀರಿಕೊಂಡಾಗ ಅವರಿಗೆ 85 ವಯಸ್ಸಾಗಿತ್ತು. ಜೀವನೋತ್ಸಾಹ ವನ್ನು ಮೈಮನ ಗಳಲ್ಲಿ ತುಂಬಿಕೊಂಡಿದ್ದಲ್ಲದೆ ತಮ್ಮ ಶಿಷ್ಯರು, ಅಭಿಮಾನಿಗಳಲ್ಲೂ ಅದನ್ನು ಭರ್ತಿ ಮಾಡಿಟ್ಟು ಇಹದ ವ್ಯಾಪಾರ ಮುಗಿಸಿದ ಮಹನೀಯ ಅವರು. ಎಂ.ಕೆ. ಭಾಸ್ಕರ ರಾವ್