ಹುಬ್ಬಳ್ಳಿ: ಚುನಾವಣಾ ಪ್ರಚಾರದಲ್ಲಿ ಅತ್ಯಂತ ಕೀಳುಮಟ್ಟದಲ್ಲಿ ಹೇಳಿಕೆ ನೀಡಿರುವ ಪ್ರಧಾನಿ ಮೋದಿ ಅವರನ್ನು ಚುನಾವಣಾ ಸ್ಪರ್ಧೆಯಿಂದ ಅನರ್ಹಗೊಳಿಸಬೇಕು, ಚುನಾವಣಾ ಪ್ರಕ್ರಿಯೆಯಲ್ಲಿ ಅವರು ಪಾಲ್ಗೊಳ್ಳದಂತೆ ಚುನಾವಣಾ ಆಯೋಗ ತಡೆಯೊಡ್ಡಬೇಕು ಎಂದು ಸಚಿವ ಎಚ್.ಕೆ.ಪಾಟೀಲ ಆಗ್ರಹಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುನಿಸಿಪಾಲಿಟಿ ಅಧ್ಯಕ್ಷರು ಸಹ ಈ ರೀತಿ ಹೇಳಿಕೆ ನೀಡುವುದಿಲ್ಲ. ಯಾವ ಪ್ರಧಾನಿಯೂ ಇಷ್ಟೊಂದು ಕೀಳು ಮಟ್ಟದ ಹೇಳಿಕೆ ನೀಡಿರಲಿಲ್ಲ ಆದರೆ ಮೋದಿರವರು ಅತ್ಯಂತ ಕೀಳುಮಟ್ಟದ ಶಬ್ದಗಳನ್ನು ಬಳಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಳಿ, ಆಸ್ತಿ ಕಿತ್ತುಕೊಳ್ಳಲಿದೆ ಎಂಬ ಪಿಎಂ ಹೇಳಿಕೆ ಖಂಡನೆ.
ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸವನೆಂದು ಮಾಡುವುದಿಲ್ಲ. ಜನರ ಕಲ್ಯಾಣಕಾರಕ ಯೋಜನೆಗಳನ್ನುಜಾರಿಗೊಳಿಸಿದ್ದೇ ಕಾಂಗ್ರೆಸ್ ಪಕ್ಷವಾಗಿದೆ. ಚುನಾವಣಾ ನೀತಿಯನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವ ಪ್ರಧಾನಿ ವಿರುದ್ದ ಆಯೋಗ ಕ್ರಮ ಕೈಗೊಳ್ಳದೆ ಮೂಕ ಪ್ರೇಕ್ಷಕವಾದರೆ ಪರಿಣಾಮ ಎದುರಿಸಬೇಕಾಗುತ್ತದೆ. ಕಾನೂನಿಗಿಂತ ಯಾರು ದೊಡ್ಡವರಲ್ಲ.
ಸಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗ ಪಡಿಸಿಕೊಂಡ ರೀತಿ ನೋಡಿದರೆ, ಆಯೋಗದಿಂದ ಸೂಕ್ತ ಕ್ರಮದ ವಿಶ್ವಾಸವಿಲ್ಲ. ಆಯೋಗ ಮೌನವಾದರೆ ಜನ ಗಮನಿಸುತ್ತಾರೆ. ಭಾರತಮಾತೆಯ ಆಭರಣಗಳಾದ ವಿಮಾನ, ರೈಲು ನಿಲ್ದಾಣ, ಹೆದ್ದಾರಿಗಳನ್ನು ದೋಚಿ ಅಂಬಾನಿ, ಅದಾನಿಗಳಿಗೆ ನೀಡಿದ್ದು ಯಾರು ಎಂಬುದನ್ನು ಮೋದಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ.
ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆ ಸಿಐಡಿಗೆ ವಹಿಸಿದ್ದು, ವಿಶೇಷ ಕೋರ್ಟ್ ರಚಿಸಲು ನಿರ್ಧರಿಸಿದೆ. ಘಟನೆ ಕುರಿತಾಗಿ ಸಿಎಂ ಅವರ ಭಾವನೆ, ಸಂದೇಶ ಹಾಗೂ ಸರ್ಕಾರದ ಕ್ರಮದ ಬಗ್ಗೆ ತಿಳಿಸುವಂತೆ ಸಿಎಂ ನನಗೆ ಹೇಳಿದ್ದರಿಂದ ಇಂದು ನೇಹಾ ಹಿರೇಮಠ ನಿವಾಸಕ್ಕೆ ತೆರಳಿ ಅವರ ತಂದೆಗೆ ಮನವರಿಕೆ ಮಾಡಿದ್ದಾಗಿ ಸಚಿವರು ತಿಳಿಸಿದರು.
ಇದನ್ನೂ ಓದಿ: LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್‌ನಿಂದ ಸುಳ್ಳಿನ ರಾಜಕಾರಣ: BYR