ಬೆಂಗಳೂರು: ಕೋವಿಡ್ 19 ಸೋಂಕು ರಾಜ್ಯವನ್ನು ಸಂಪೂರ್ಣ ತಲ್ಲಣಗೊಳಿಸಿದೆ. ಜನರ ಜೀವನ ಉಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯ ಸರ್ಕಾರ ನಿರ್ಲಕ್ಷತನವನ್ನು ತೋರಿಸುತ್ತಿದೆ. ಜನರ ಸಮಸ್ಯೆಗೆ ಗಮನವನ್ನೇ ಹರಿಸುತ್ತಿಲ್ಲ ಎಂದು ಮಾಜಿ ಸಚಿವೆ ಎಚ್.ಕೆ.ಪಾಟೀಲ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಟೆಸ್ಟ್ ಮಾಡಿಸುವ ಬಗ್ಗೆ ನಾವು ಒತ್ತಾಯಿಸುತ್ತಲೇ ಇದ್ದೇವೆ. ಮುಖ್ಯಮಂತ್ರಿಗಳಿಗೆ ಮೂರು ಬಾರಿ ಪತ್ರ ಬರೆದಿದ್ದೇನೆ. ಆದರೆ 40 ಸಾವಿರಕ್ಕೂ ಹೆಚ್ಚು ಪರೀಕ್ಷಾ ವರದಿ ಇನ್ನು ಬರಬೇಕಿದೆ. ಇದಕ್ಕೆ ನಾವು ಏನನ್ನಬೇಕು. ಯಾವ ಚಾಟಿಯಿಂದ ಸರ್ಕಾರಕ್ಕೆ ಬೀಸಬೇಕು. ಬೌದ್ಧಿಕ ದಿವಾಳಿತನ ಜನರಿಗೆ ಆಘಾತವನ್ನುಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋವಿಡ್-19 ಪಾಸಿಟಿವ್ ಬಂದವರಿಗೆ ವಿಮೆ ಮಾಡಿಸಿ. ಸೋಂಕಿತ ವ್ಯಕ್ತಿಗೆ ಐದು ಲಕ್ಷದ ಹೆಲ್ತ್ ವಿಮೆ ಮಾಡಿಸಿ. ಆಗ ಪಾಸಿಟಿವ್ ವ್ಯಕ್ತಿಗೆ ಉಪಯೋಗವಾಗಲಿದೆ ಎಂದು ಸಲಹೆ ನೀಡಿದರು.
ಮುಂದೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ. ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಎಂದು ಹೇಳುತ್ತಿದ್ದಾರೆ. ಮನೆಯಲ್ಲೇ ಕ್ವಾರಂಟೈನ್ ಆಗಿ ಎನ್ನುತ್ತಾರೆ. ನಾವು ಮೊದಲೇ ಸಾಕಷ್ಟು ಸಲಹೆಗಳನ್ನು ನೀಡಿದ್ದೆವು. ಹಾಸ್ಟಲ್, ಹೊಟೇಲ್ ವಶಕ್ಕೆ ತೆಗೆದುಕೊಳ್ಳುವಂತೆ ಹೇಳಿದ್ದೆವು. ಆದರೆ ಇಂದಿಗೂ ಏನೂ ಆಗಿಲ್ಲ ಎಂದರು.
ಬೀದಿ ಬೀದಿಗಳಲ್ಲಿ ಜನ ಸಾಯುವ ಪರಿಸ್ಥಿತಿ ಎದುರಾಗಲಿದೆ. ಆ್ಯಂಬುಲೆನ್ಸ್, ಮೆಡಿಕಲ್ ಸಿಬ್ಬಂದಿಗಳ ಕೊರೆತಯಾಗಿದೆ. ಸರ್ಕಾರ ಸ್ಪೆಷಲ್ ರಿಕ್ರ್ಯೂಟ್ ಮೆಂಟ್ ಪ್ರಾರಂಭಿಸಲಿ. ನರ್ಸ್, ವೈದ್ಯರು, ಪೌರ ಕಾರ್ಮಿಕರನ್ನು ತೆಗೆದುಕೊಳ್ಳಲಿ. ಅಗತ್ಯವಾದಷ್ಟು ಸಿಬ್ಬಂದಿಯನ್ನು ತುರ್ತಾಗಿ ತೆಗೆದುಕೊಳ್ಳಿ ಎಂದರು.
ಇಟಲಿ ಪರಿಸ್ಥಿತಿ ಬರದಂತೆ ಗಮನಹರಿಸಬೇಕಿದೆ. ದೊಡ್ಡ ಸಂಖ್ಯೆಯಲ್ಲಿ ಜನ ಸಾವಿಗೀಡಾಗ್ತಾರೆ, ಅಂತ್ಯಕ್ರಿಯೆ ಮಾಡುವುದಕ್ಕೂ ಕಷ್ಟವಾಗಲಿದೆ. ಮುತುವರ್ಜಿ ವಹಿಸಿ ಏನಾದರೂ ಮಾಡಿದ್ದೀರ? ಪರಿಹಾರದ ಮಾತು ದೂರ, ನಾಲ್ಕು ಕಿಟ್ ಹಂಚಿದ್ರೆ ಸಾಲದು. ಪಕ್ಷದ ಕಾರ್ಯಕರ್ತರಿಗೆ ಕೊಟ್ಟು ಸಮಸ್ಯೆ ಸೃಷ್ಠಿಸಿದ್ರಿ ಕಾರ್ಮಿಕರ ಬದುಕನ್ನ ಬೀದಿಗೆ ತಂದಿರಿ ಎಂದು ರಾಜ್ಯ ಸರ್ಕಾರದ ವಿರುದ್ಧ ಎಚ್.ಕೆ.ಪಾಟೀಲ್ ಆರೋಪಿಸಿದರು.