ಕೊಪ್ಪಳ: ಅನರ್ಹ ಶಾಸಕರು ಸೋಲಲು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಹೆಚ್ ಕೆ ಪಾಟೀಲ್ ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಪಕ್ಷಾಂತರ ಮಾಡಿದವರನ್ನು ಆಯಾ ಕ್ಷೇತ್ರದ ಜನತೆ ತಿರಸ್ಕರಿಸಲಿದ್ದಾರೆ. ಆ ಮೂಲಕ ಪಕ್ಷಾಂತರಿಗಳಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಚುನಾವಣೆಯಲ್ಲಿ ನಮಗೆ ಗೆಲುವು ಆಗಲಿದೆ ಎನ್ನುವುದನ್ನು ಮೊನ್ನೆಯ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದ ಸ್ಥಾನಗಳನ್ನು ನೋಡಿದರೆ ಗೊತ್ತಾಗುತ್ತದೆ. ಹೀಗಾಗಿ ಉಪ ಚುನಾವಣೆಯಲ್ಲಿ ಗೆಲುವು ನಮ್ಮದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೆ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಉಳಿದ ಕ್ಷೇತ್ರಗಳಿಗೂ ಶೀಘ್ರದಲ್ಲೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಘೊಷಣೆ ಮಾಡಲಾಗುವುದು. ಯಾವುದೇ ಕ್ಷೇತ್ರಗಳಲ್ಲೂ ಗೊಂದಲ, ಭಿನ್ನಮತ ಇಲ್ಲ. ಕೆಲ ಕಾರಣಗಳಿಂದ ಘೊಷಣೆ ಮಾಡಲಾಗಿಲ್ಲ. ಹಲವರು ಆಕಾಂಕ್ಷಿಗಳಾಗಿದ್ದರಿಂದ ಪಕ್ಷದ ವರಿಷ್ಠರು ಚರ್ಚೆ ನಡೆಸಿ ಟಿಕೆಟ್ ನೀಡಲಿದ್ದಾರೆ. ಪಕ್ಷದ ಸಭೆಗೆ ಹಲವು ಹಿರಿಯರು ಗೈರಾಗಿದ್ದು ನನಗೆ ತಿಳಿದಿಲ್ಲ. ಅವರನ್ನೇ ಕೇಳಿ ಎಂದ ಅವರು, ಪಕ್ಷದಲ್ಲಿ ಯಾವುದೆ ಭಿನ್ನಮತ, ಗೊಂದಲಗಳು ಇಲ್ಲ ಎಂದರು.
ಉಪಚುನಾವಣೆಯಲ್ಲಿ ಜೆಡಿಎಸ್ ಸಹ ಸ್ಪರ್ಧೆ ಮಾಡುವುದರಿಂದ ಮತವಿಭಜನೆ ಆಗುವುದರಲ್ಲಿ ಅನುಮಾನಗಳಿಲ್ಲ. ಕೆಲವು ಕಡೆಗಳಲ್ಲಿ ಮತವಿಭಜನೆಯಾಗಲಿದೆ. ಆದರೆ ಗೆಲುವು ಮಾತ್ರ ಕಾಂಗ್ರೆಸ್ ನದ್ದೆ. ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿಗೆ ಜಿಗಿದ ಅನರ್ಹರಿಗೆ ಬುದ್ಧಿ ಕಲಿಸುವ ದೃಷ್ಟಿಯಿಂದ ಜನತೆ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಲಿದ್ದಾರೆ ಎಂದು ತಿಳಿಸಿದರು.