Advertisement

ಹು-ಧಾ ಸ್ಮಾರ್ಟ್‌ಸಿಟಿ ಕಂಪನಿಗೆ ಪೂರ್ಣಾವಧಿ ಎಂಡಿ ಇಲ್ಲವೇ?

01:08 PM Nov 21, 2017 | Team Udayavani |

ಹುಬ್ಬಳ್ಳಿ: ಉತ್ತರ ಕರ್ನಾಟಕದ ಹಣೆಬರಹವೋ ಏನೋ ಗೊತ್ತಿಲ್ಲ. ನೂರಾರು, ಸಾವಿರಾರು ಕೋಟಿ ರೂಪಾಯಿ ಮೊತ್ತದ ಯೋಜನೆಗಳಿದ್ದರೂ, ಅವುಗಳ ಸಮರ್ಪಕ ಅನುಷ್ಠಾನ ಹಾಗೂ ನಿಗಾಕ್ಕೆ ಜವಾಬ್ದಾರಿಯುತ ಪೂರ್ಣ ಪ್ರಮಾಣದ ಪ್ರಮುಖ ಅಧಿಕಾರಿಗಳೇ ಇಲ್ಲವಾಗಿದ್ದು,ಇದಕ್ಕೆ ತಾಜಾ ಸೇರ್ಪಡೆ ಹುಬ್ಬಳ್ಳಿ- ಧಾರವಾಡ ಸ್ಮಾರ್ಟ್‌ ಸಿಟಿ ಯೋಜನೆ. 

Advertisement

ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಅಂದಾಜು 3,000 ಕೋಟಿ ರೂ. ಗೂ ಅಧಿಕ ವೆಚ್ಚದ ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದರೂ ಇದರ ನಿರ್ವಹಣೆಗೆ ಇರಬೇಕಾದ ಪೂರ್ಣ ಪ್ರಮಾಣದ ವ್ಯವಸ್ಥಾಪಕ ನಿರ್ದೇಶಕರು ಇಲ್ಲವಾಗಿದ್ದು, ಪಾಲಿಕೆ ಆಯುಕ್ತರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಇಡೀ ಉತ್ತರ ಕರ್ನಾಟಕದಿಂದ ಎರಡು ಮಹಾನಗರ ಸ್ಥಾನ ಪಡೆದಿವೆ.

ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ. ಸಂವಿಧಾನದ 371(ಜೆ)ಕಲಂ ನಡಿ 2013ರಲ್ಲಿ ವಿಶೇಷ ಸ್ಥಾನ ಪಡೆದು, ಸಾವಿರಾರು ಕೋಟಿ ರೂ. ಅಭಿವೃದ್ಧಿ ಯೋಜನೆಗಳನ್ನು ಹೊಂದಿರುವ ಹೈದರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಇಂದಿಗೂ ಪೂರ್ಣಾವಧಿ ಕಾರ್ಯದರ್ಶಿ ಇಲ್ಲ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಹು.ಧಾ.ದಲ್ಲಿ 3 ಸಾವಿರ ಕೋಟಿ ರೂ.ಅಧಿಕ ವೆಚ್ಚದ ಅಭಿವೃದ್ಧಿ ಕಾರ್ಯಗಳಾಗುತ್ತಿದ್ದರೂ ಹು.ಧಾ.ಸ್ಮಾರ್ಟ್‌ ಸಿಟಿ ಕಂಪೆನಿಗೆ ಕಾಯಂ ವ್ಯವಸ್ಥಾಪಕ ನಿರ್ದೇಶಕರಿಲ್ಲ. 

ಪ್ರತ್ಯೇಕ ಕಚೇರಿ ಇದ್ದರೂ ಎಂಡಿ ಇಲ್ಲ: ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಈಗಾಗಲೇ ಹು.ಧಾ. ಸ್ಮಾರ್ಟ್‌ ಸಿಟಿ ಯೋಜನೆ ಕಂಪೆನಿ ಕಾಯ್ದೆ ಅಡಿಯಲ್ಲಿ ನೋಂದಾಯಿತಗೊಂಡಿದೆ. ವಿಶೇಷ ವಾಹಕ(ಎಸ್‌ಪಿವಿ), ಆಡಳಿತ ಮಂಡಳಿ  ರಚನೆಯಾಗಿದೆ, ಸಲಹಾ ಏಜೆನ್ಸಿ ಕಾರ್ಯ ನಿರ್ವಹಿಸುತ್ತಿದೆ, ಪ್ರತ್ಯೇಕ ಕಚೇರಿ ಮಾಡಿ, ವಿಶೇಷಾಧಿಕಾರಿ ನೇಮಕಗೊಂಡಿದ್ದಾರೆ.

ಆದರೆ ಇದೆಲ್ಲದಕ್ಕೂ ಕಳಸಪ್ರಾಯವಾಗಿರಬೇಕಾದ ಪೂರ್ಣ ಪ್ರಮಾಣದ ವ್ಯವಸ್ಥಾಪಕ ನಿರ್ದೇಶಕರೇ ಇಲ್ಲವಾಗಿದೆ. ಮಹಾನಗರ ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠರಿಗೆ ಇದರ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಪಾಲಿಕೆಯಲ್ಲಿನ ಕಾರ್ಯದೊತ್ತಡ,

Advertisement

ಹೋರಾಟ, ಸಭೆ, ಸಮಾರಂಭಗಳನ್ನು ಗಮನಿಸಿದರೆ ಪಾಲಿಕೆಗೆ ಹೆಚ್ಚುವರಿಯಾಗಿ ಇನ್ನೊಬ್ಬರು ಆಯುಕ್ತರು ಬೇಕು ಎನ್ನುವ ಸ್ಥಿತಿ ಇದೆ. ಅಂತಹದ್ದರಲ್ಲಿ ಆಯುಕ್ತರಿಗೆ ಹೆಚ್ಚುವರಿಯಾಗಿ ಮತ್ತೂಂದು ಜವಾಬ್ದಾರಿ ನೀಡಲಾಗಿದೆ. ಸಹಜವಾಗಿಯೇ ಇದು ಸ್ಮಾರ್ಟ್‌ ಸಿಟಿ ಯೋಜನೆ ಮೇಲೆ ಪರಿಣಾಮ ಬೀರತೊಡಗಿದೆ. 

3 ಸಾವಿರ ಕೋಟಿ ರೂ.ಯೋಜನೆ: ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಐದು ವರ್ಷಗಳಲ್ಲಿ ಅಂದಾಜು 1,662ಕೋಟಿ ರೂ ಹರಿದು ಬರಲಿದೆ. ಅಮೃತ ಯೋಜನೆಯಡಿ ಐದು ವರ್ಷಗಳಲ್ಲಿ ಅಂದಾಜು 200 ಕೋಟಿ ರೂ.ದೊರಕಲಿದೆ.

ಅಂದಾಜು 692ಕೋಟಿ ರೂ. ವೆಚ್ಚದ ಬಿಆರ್‌ಟಿಎಸ್‌ ಯೋಜನೆ, ವಿವಿಧ ಹಂತಗಳಲ್ಲಿ 24/7 ಯೋಜನೆ ಜಾರಿಗೊಂಡಿದ್ದು, ಪ್ರಸ್ತುತ ಅಂದಾಜು 175 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮನೆ ಮನೆಗೆ ಅಡುಗೆ ಅನಿಲ ಸಂಪರ್ಕ ಯೋಜನೆ ಪ್ರಾಯೋಗಿಕ ಜಿಲ್ಲೆಗಳಲ್ಲಿ ಧಾರವಾಡ ಕೂಡ ಒಂದಾಗಿದ್ದು, ಅವಳಿನಗರದಲ್ಲಿ ಅಂದಾಜು 275 ಕೋಟಿ ರೂ.ವೆಚ್ಚದಲ್ಲಿ ಗೇಲ್‌ ಇಂಡಿಯಾದ ಕಾಮಗಾರಿಯೂ ನಡೆಯುತ್ತಿದೆ.

ಅಂದಾಜು 175 ಕೋಟಿ ರೂ.ವೆಚ್ಚದಲ್ಲಿ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿ ನಡೆಯುತ್ತಿದ್ದು, ಸ್ವತ್ಛ ಭಾರತ ಅಭಿಯಾನ ಅದರಡಿಯಲ್ಲೇ ಬರುವ ಅಂದಾಜು 113ಕೋಟಿ ರೂ.ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ, 134 ಕೋಟಿ ರೂ.ವೆಚ್ಚದ ಒಳಚರಂಡಿ ವ್ಯವಸ್ಥೆ ಹೀಗೆ ಒಟ್ಟಾರೆ ಅಂದಾಜು 3,000 ಕೋಟಿ ರೂ.ವೆಚ್ಚದ ಯೋಜನೆಗಳಾಗಿವೆ. 

ಸ್ಮಾರ್ಟ್‌ ಸಿಟಿ ಯೋಜನೆಗೆ ಐಎಎಸ್‌ ದರ್ಜೆ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸುವುದು ಅವಶ್ಯವಾಗಿದೆ. ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ ಸಿಟಿ ಯೋಜನೆಗೆ ಒಂದು ಪೂರ್ಣಾವಾಧಿ ವ್ಯವಸ್ಥಾಪಕ ನಿರ್ದೇಶಕರಿಲ್ಲ. ಇದ್ದವರು ಐಎಎಸ್‌ ದರ್ಜೆಯವರು ಅಲ್ಲ ಎಂಬುದು ವಿಶೇಷ. ಇನ್ನಾದರೂ ಸರಕಾರ ಈ ಕಡೆ ಗಮನ ನೀಡಿ ಐಎಎಸ್‌ ದರ್ಜೆ ಅಧಿಕಾರಿಯನ್ನು ಪೂರ್ಣಾವಾಧಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡೀತೆ ಎಂದು ಹು.ಧಾ.ಸ್ಮಾರ್ಟ್‌ ಸಿಟಿ ಎದುರು ನೋಡುತ್ತಿದೆ.  

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next