Advertisement

ನನ್ನ ಹತ್ತಿರ ನಿಮ್ಮ ಆಟ ನಡೆಯುವುದಿಲ್ಲ: ಸಚಿವ ಅಶ್ವತ್ಥನಾರಾಯಣ ವಿರುದ್ಧ ಎಚ್‌ಡಿಕೆ ಆಕ್ರೋಶ

05:29 PM Aug 02, 2022 | Team Udayavani |

ರಾಮನಗರ: ಮನೆಗೆ ಬೆಂಕಿ ಬಿದ್ದಾಗ ಅಡುಗೆ ಮಾಡಿಕೊಳ್ಳುತ್ತಾರೆ ಎಂದು ಸಚಿವ ಡಾ.ಅಶ್ವತ್ಥನಾರಾಯಣ ಹೇಳಿಕೆ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Advertisement

ಬಿಡದಿಯ ತಮ್ಮ ತೋಟದಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ‘’ಸಚಿವರಾದವರು ತಲೆಯಲ್ಲಿ ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು. ನಾಲಿಗೆ ಹೊರಳಿದ ಹಾಗೆಲ್ಲ ಮಾತನಾಡುವುದು ಸರಿಯಲ್ಲ’ ಎಂದರು.

ಡಿಕೆ ಸಹೋದರರ ಜತೆ ಆಡಿದ ಆಟವನ್ನು ನನ್ನ ಹತ್ತಿರ ಆಡಿದರೆ ನಡೆಯಲ್ಲ. ಕುಮಾರಸ್ವಾಮಿ ಹತ್ತಿರ ಇದೆಲ್ಲ ಸಾಗುವುದಿಲ್ಲ. ದುಡ್ಡಿನ ಮದದಿಂದ ಅಶ್ವತ್ಥನಾರಾಯಣ ಹೀಗೆ ಮಾತನಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಅಶ್ವತ್ಥನಾರಾಯಣ ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು‌. 25 ಲಕ್ಷ ರೂ. ಕೊಡಲು ಶುರು ಮಾಡಿದ್ದು ಯಾರು? ಒಂದೊಂದು ಕಡೆ ಒದೊಂದು ರೂಲ್ಸ್ ಮಾಡಿದ್ದಾರೆ. ದುಡ್ಡಿನ ಮದದಿಂದ ಮಾತಿನ ಮೇಲೆ ಹಿಡಿತ ಮೀರಬಾರದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಮಿತ್‌ ಶಾ ಭೇಟಿ ಬಗ್ಗೆ ಲೇವಡಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ರಾಜ್ಯ ಭೇಟಿ ಬಗ್ಗೆ ಕುಟುಕಿದ ಅವರು; ಇನ್ನೊಂದಷ್ಟು ಹೆಣಗಳನ್ನು ಬೀಳಿಸಲು ಅವರು ರಾಜ್ಯಕ್ಕೆ ಬರುತ್ತಿರಬೇಕು. ಗುಜರಾತ್ ನಲ್ಲಿನ ಹತ್ಯೆಗಳನ್ನೇ ಇಲ್ಲಿ ಮುಂದುವರಿಸಲು ಅವರು ಇಲ್ಲಿಗೆ ಬರುತ್ತಿರಬಹುದು. ಚುನಾವಣೆ ಸಮಯದಲ್ಲಿ ನರಹತ್ಯೆ ನಡೆಸಿ, ರಾಜಕೀಯ ಮಾಡುವುದೇ ಬಿಜೆಪಿಯ ಹುಟ್ಟುಗುಣ. ಬಿಜಿಪಿ ಅಧಿಕಾರಕ್ಕೆ ಬರಲು ಹಿಂದುತ್ವದ ಹೆಸರಿನಲ್ಲಿ ಮನೆಯಲ್ಲಿ ನೆಮ್ಮದಿಯಾಗಿದ್ದ ಯುವಕರನ್ನು ಕರೆತಂದರು. ಈಗ ನೋಡಿದರೆ ನಾವು ಹೇಳಿದ ಹಾಗೆಯೇ ‌ಕೇಳಬೇಕು ಎಂದು ಅಪ್ಪಣೆ ಮಾಡುತ್ತಿದ್ದಾರೆ. ಅಧಿಕಾರದ ಮದದಲ್ಲಿ ತಿಂದು ತೇಗಿದ್ದಾರೆ ಎಂದು ಕುಮಾರಸ್ವಾಮಿ ಅವರು ಗುಡುಗಿದರು.

Advertisement

ಸಿದ್ದರಾಮೋತ್ಸವದ ಬಗ್ಗೆ ಆಸಕ್ತಿ ಇಲ್ಲ: ಸಿದ್ದರಾಮೋತ್ಸವದ ಬಗ್ಗೆ ನನಗೇನೂ ಆಸಕ್ತಿ ಇಲ್ಲ. ಅವರು ಏನೋ ಮಾಡುತ್ತಿದ್ದಾರೆ. ಅದರ ಬಗ್ಗೆ ನಾನ್ಯಾಕೆ ಚಿಂತೆ ಮಾಡಲಿ. ಅವರ ಪಾಡಿಗೆ ಅವರು ಮಾಡಿಕೊಳ್ಳಲಿ ಬಿಡಿ. ಐದಲ್ಲದಿದ್ದರೆ ಇಪ್ಪತ್ತು ಲಕ್ಷ ಜನರನ್ನು ತೋರಿಸಲಿ. ಅವರ ನಾಯಕತ್ವದ ಬಗ್ಗೆ ದೆಹಲಿಗೆ ಪ್ರದರ್ಶನ ಮಾಡಲಿ. ಇದರಿಂದ ಅವರ ಪಕ್ಷದಲ್ಲಿ ಬೆಂಕಿ‌ ಹಂಚಿಕೊಳ್ಳುತ್ತದೆ. ನಮಗೇನು ಸಮಸ್ಯೆ ಎಂದರು ಕುಮಾರಸ್ವಾಮಿ.

ಇದನ್ನೂ ಓದಿ:ಮೊಟ್ಟೆ ಕೊಡಲೇಬೇಕೆಂದರೆ… ಮಿಡ್ ಡೇ ಮೀಲ್ ವಿಚಾರವಾಗಿ ಸಲಹೆ ನೀಡಿದ ತೇಜಸ್ವಿನಿ ಅನಂತ್ ಕುಮಾರ್

ಬಾಲಕೃಷ್ಣ ಅವರು, ನನಗೂ ಒಂದು ಚಾನ್ಸ್ ನೀಡಿ ಎಂದಿದ್ದಾರೆ. ಇದರಲ್ಲಿ ತಪ್ಪೇನಿದೆ? ರಾಜಕೀಯದಲ್ಲಿ ತೀರ್ಮಾನ ತೆಗೆದುಕೊಳ್ಳುವಾಗ ಕೆಲವೊಂದು ನಿರ್ಣಯ ಮಾಡಬೇಕಾಗುತ್ತದೆ.‌ 2006ರಲ್ಲಿ ಎಂ.ಪಿ.ಪ್ರಕಾಶ್ ಮನೆಗೆ ಹೋಗಿ ನೀವೇ ಸಿಎಂ ಆಗಿ ಎಂದಿದ್ದೆ. ಆ ಸನ್ನಿವೇಶ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಇನ್ಯಾರೋ ನನ್ನನ್ನು ಸಿಎಂ ಮಾಡಿದ್ದಲ್ಲ ಎಂದರು.

ಬಿಜೆಪಿ ನನ್ನ ಬಗ್ಗೆ ಮನುಷ್ಯತ್ವ ಇಲ್ಲದೇ ಟ್ವೀಟ್ ಮಾಡಿದೆ. ಅದಕ್ಕೆ ನಾನು ಉತ್ತರವನ್ನೂ ಕೊಟ್ಟಿದ್ದೇನೆ. ನಾನು ಖುಷಿಯಿಂದ ಸಿಎಂ ಆಗಿರಲಿಲ್ಲ. ಅಂದಿನ ನನ್ನ ಕಣ್ಣೀರನ್ನು ಬಾಲಕೃಷ್ಣ ಸಹ ನೋಡಿದ್ದಾರೆ. ನನ್ನ ತಂದೆಯ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದರೆ ಅಂದು ನಾನು ಬಿಜೆಪಿ ಜತೆ ಸರಕಾರ ರಚನೆ ಮಾಡಿದ್ದೇ ಕಾರಣ. ನನ್ನ ತಂದೆಯವರ ಆರೋಗ್ಯದ ಬಗ್ಗೆ ಕಣ್ಣೀರಿಟ್ಟರೆ, ಬಿಜೆಪಿ ಕಣ್ಣೀರಧಾರೆ ಮೂಲಕ ಚುನಾವಣೆ ನಡೆಸಲು ಎಚ್ಡಿಕೆ ಹೋಗಿದ್ದಾರೆ ಎಂದು ಹೇಳುತ್ತಿದೆ.‌ ಅಮಾಯಕ ಮಕ್ಕಳ ಬಲಿ, ಈದ್ಗಾ ಮೈದಾನದ ಹೆಣದ ಮೇಲೆ ಬಿಜೆಪಿ ಪಕ್ಷ ಬೆಳೆದಿದೆ. ಬಿಜೆಪಿಗೆ ಸ್ವಲ್ಪವಾದರೂ ಮನುಷ್ಯತ್ವ ಇರಬೇಕು ಎಂದು ಅವರು ಟೀಕಿಸಿದರು.

ರಾಜ್ಯಕ್ಕೆ ಯಾರು ಯಾರ ಕೊಡುಗೆ ಏನು ಎನ್ನುವುದು ಗೊತ್ತಿದೆ. ನನ್ನ ಸಾಧನೆ ಬಗ್ಗೆಯೂ ವಿಧಾನಸೌಧದಲ್ಲಿ ದಾಖಲೆಗಳಿವೆ. ರಾಷ್ಟ್ರೀಯ ಹೆದ್ದಾರಿ ಯೋಜನೆ ಬಗ್ಗೆ ಸಭೆ ಮಾಡಿದ್ದೆನೆ. ವರ್ತುಲ ರೈಲು ಯೋಜನೆಗೆ ಪ್ರಧಾನಿಗಳು ಈಗ ಕೈ ಹಾಕಿದ್ದಾರೆ. ಅದಿನ್ನೂ ಟೇಕಾಫ್ ಆಗಿಲ್ಲ‌. ಆಗಲೇ ಫೋಟೋ ಕ್ರೆಡಿಟ್‌ ತೆಗೆದುಕೊಳ್ಳಲು ಹೊರಟಿದ್ದಾರೆ. ಇಲ್ಲಿಗೆ ‌ಬಂದು ಫೋಟೋ ತೆಗೆಸಿಕೊಳ್ಳಲು ಇವರು ಯಾರು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಫೋಟೋ ರಾಜಕೀಯ ಶುರು ಮಾಡಿದ್ದರು. ಅದನ್ನು ಅವರ ಶಿಷ್ಯ ಪ್ರತಾಪ್ ಸಿಂಹ ಕೂಡ ಮುಂದುವರಿಸುತ್ತಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿ ಕಾಮಾಗಾರಿ ಕಳಪೆಯಾಗಿದೆ. ಅದರಲ್ಲಿ ಎರಡು ಮಾತಿಲ್ಲ. ಯಾರದೋ ಸರಕಾರದಲ್ಲಿ ಆಗಿದ್ದ ಕೆಲಸಕ್ಕೆ ಬಿಜೆಪಿ ಸರಕಾರ ಟೇಪ್ ಕತ್ತರಿಸಿ ಬಿಲ್ಡಪ್ ತೆಗೆದುಕೊಳ್ಳುತ್ತಿದೆ ಎಂದು ಅವರು ಚಾಟಿ ಬೀಸಿದರು.

ಡಿಸಿ, ಎಸ್ಪಿ ವಿರುದ್ಧ ಕಿಡಿ: ರಾಮನಗರ ಜಿಲ್ಲೆಯಲ್ಲಿ ಡಿಸಿ, ಎಸ್ಪಿ ಇಬ್ಬರೂ ಎಂಜಿನಿಯರ್ ಗಳಿಗೆ ಹೆದರಿಸಿ, ರಸ್ತೆಯ ಹಂಪ್‌ ಗಳನ್ನ ತೆಗೆಸಿದ್ದಾರೆ. ಬಸವನಪುರದ ಬಳಿ ಪಿಡಿಒ ಒಬ್ಬರು ಮೃತಪಟ್ಟಿದ್ದಾರೆ. ಒಬ್ಬರು ಕಾಲು ಕಳೆದುಕೊಂಡಿದ್ದಾನೆ. ನಿತ್ಯವೂ ಅಪಘಾತಗಳು ಆಗುತ್ತಿವೆ. ಅಧಿಕಾರಿಗಳು ಇರುವುದು ಜನರ ರಕ್ಷಣೆ ಮಾಡುವುದಕ್ಕೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಜನರ ಪ್ರಾಣ ತೆಗೆಯಲು ಅಧಿಕಾರಿಗಳು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ತೋಟದ ಮನೆಯ ಮುಂದೆಯೇ ಅಪಘಾತ ಆಗಿ ಒಬ್ಬರು ಮೃತಪಟ್ಟಿದ್ದಾರೆ. ಹಂಪ್ ಹಾಕಿ ಎಂದರೂ ಈವರೆಗೂ ಹಾಕಿಲ್ಲ. ಇವರಿಗೆ ಯಾವ ಕೋರ್ಟ್ ಆದೇಶ ನೀಡಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next