Advertisement

ರಾಷ್ಟ್ರೀಯ ಪಕ್ಷಗಳೆರಡೂ ಕರ್ನಾಟಕದ ಪ್ರತಿಷ್ಠೆಗೆ ಕೊಳ್ಳಿಯಿಟ್ಟು ವಿಕೃತ ಕೇಕೆ ಹಾಕುತ್ತಿವೆ

11:42 AM Feb 23, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಶಾಂತಿ-ಭದ್ರತೆಗೆ ಅಪಾಯ ಎದುರಾಗಿದೆ. ಅಭಿವೃದ್ಧಿ, ಆವಿಷ್ಕಾರ, ಸೃಜನಶೀಲ, ವಿಜ್ಞಾನ-ತಂತ್ರಜ್ಞಾನಕ್ಕೆ ಹೆಸರಾದ ಕರ್ನಾಟಕ ಈಗ ವಿರುದ್ಧ ದಿಕ್ಕಿನಲ್ಲಿ ಜಗತ್ತಿನ ಗಮನ ಸೆಳೆದು ಕೃತಾರ್ಥವಾಗುತ್ತಿದೆ. ರಾಷ್ಟ್ರೀಯ ಪಕ್ಷಗಳೆರಡೂ ಕರ್ನಾಟಕದ ಪ್ರತಿಷ್ಠೆಗೆ ಕೊಳ್ಳಿಯಿಟ್ಟು ʼವಿಕೃತ ಕೇಕೆʼ ಹಾಕುತ್ತಿವೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಸರಣಿ ಟ್ವೀಟ್ ಮಾಡಿರುವ ಅವರು, ಶಿಕ್ಷಣದ ಕಾಶಿ ಕರ್ನಾಟಕದ ಶಾಲೆ-ಕಾಲೇಜುಗಳಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಸಿ ಮಕ್ಕಳಲ್ಲಿ ದ್ವೇಷದ ವಿಷವುಕ್ಕಿಸಲಾಗುತ್ತಿದೆ. ಎರಡು ವರ್ಷದಿಂದ ಕೋವಿಡ್‌ ಹೊಡೆತದಿಂದ ಮಲಗಿರುವ ವಿದ್ಯಾರಂಗವನ್ನು ಸರ್ವನಾಶ ಮಾಡುವ ಹುನ್ನಾರವಷ್ಟೇ ಇದು. ಬಡವರ ಮಕ್ಕಳು ಓದಿ ವಿದ್ಯಾವಂತರಾಗಬಾರದೇ? ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯಾದ್ಯಂತ ʼರಾಜಕೀಯ ಕೊರೊನಾʼವನ್ನು ಹಬ್ಬಿಸುತ್ತಿವೆ. ಆ ಮೂಲಕ ಜನರ ಮನಸ್ಸುಗಳನ್ನು ಹಾಳು ಮಾಡುತ್ತಿವೆ. ಈ ಮಹಾಮಾರಿಗೆ ಲಸಿಕೆ ಇಲ್ಲ. ಜನರು ಈ ಹುನ್ನಾರವನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಅಧಿಕೃತ ಪ್ರತಿಪಕ್ಷದ ಸ್ವಪ್ರತಿಷ್ಠೆ, ಆಡಳಿತ ಪಕ್ಷದ ಅಸಮರ್ಥತೆಗೆ ವಿಧಾನ ಕಲಾಪ ಆಪೋಶನವಾಯಿತು. ʼನಾನು ಹೊಡೆದಂಗೆ ಮಾಡುತ್ತೇನೆ, ನೀನು ಅತ್ತಂಗೆ ಮಾಡುʼ ಎನ್ನುವಂತೆ ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಕುಮ್ಮಕ್ಕಾಗಿ ʼಕಲಾಪಕ್ಕೆ ಕುಣಿಕೆʼ ಬಿಗಿದು ಜನರ ಆಶೋತ್ತರಗಳನ್ನು ಸದನದಲ್ಲೇ ಸಮಾಧಿ ಮಾಡಿದವು. ನಿಗದಿತ ವೇಳಾಪಟ್ಟಿಗಿಂತ ಮೂರು ದಿನ ಮೊದಲೇ ಮುಗಿದ ಅಧಿವೇಶನದಲ್ಲಿ ಆರೂವರೆ ಕೋಟಿ ಕನ್ನಡಿಗರಿಗೆ ಸೊನ್ನೆ ಸುತ್ತಲಾಗಿದೆ. ಜನಪ್ರತಿನಿಧಿಗಳ ಕೇವಲ ಟಿಎ-ಡಿಎಗಾಗಿ ಮತ್ತು ವೇತನ, ಭತ್ಯೆ ಏರಿಸಿಕೊಳ್ಳಲಷ್ಟೇ ಅಧಿವೇಶನ ನಡೆದಿದೆ. ಜನರು ಏನೆಂದುಕೊಂಡಾರು? ಎಂಬ ಕನಿಷ್ಠ ಭಯವೂ ಇಲ್ಲದ ʼಆತ್ಮವಂಚನೆಯ ಪರಾಕಾಷ್ಠೆʼ ಇದು ಎಂದು ಟೀಕೆ ಮಾಡಿದ್ದಾರೆ.

ಇದನ್ನೂ ಓದಿ:ನಾಗಮಂಗಲ: ಚಲುವರಾಯಸ್ವಾಮಿ ಆಪ್ತ ಉದ್ಯಮಿ ಮನೆ- ಕಚೇರಿ ಮೇಲೆ ಐಟಿ ದಾಳಿ

ಹಿಜಾಬ್, ಕೇಸರಿ ಶಾಲು ಮತ್ತು ಶಿವಮೊಗ್ಗದಲ್ಲಿ ನಡೆದ ಯುವಕನ ಕೊಲೆ. ಇವೆಲ್ಲಾ ಯಾರಿಂದ ಯಾರಿಗಾಗಿ ನಡೆಯುತ್ತಿವೆ? ಈ ʼಟೂಲ್ʼಕಿಟ್ʼ ರೂವಾರಿಗಳು ಯಾರು? ಅಧಿವೇಶನವನ್ನು ಹಳ್ಳ ಹಿಡಿಸಿದ್ದಕ್ಕೂ ಈ ಎಲ್ಲಾ ಪ್ರತಿಗಾಮಿ ಘಟನೆಗಳಿಗೆ ಸಂಬಂಧ ಇದೆ ಎನ್ನುವ ಅನುಮಾನ ನನ್ನದು. ಸತ್ಯವೇನೆಂಬುದು ಜನರಿಗೆ ಗೊತ್ತಾಗಬೇಕು. ಸಾವಿನ ಮನೆಯಲ್ಲಿ ಮತಫಸಲು ತೆಗೆಯುವ ನಿರ್ಲಜ್ಜ ನಡೆ ಅಸಹನೀಯ. ಶಾಂತಿಯನ್ನು ಕದಡಿದ ಪಾಪ ಸುಮ್ಮನೆ ಬಿಡುವುದಿಲ್ಲ. ಹಚ್ಚಹಸರಿನ ನಿರ್ಮಲ ಮಲೆನಾಡಿನಲ್ಲಿ ಹೊತ್ತಿ ಉರಿಯುತ್ತಿರುವ ʼದ್ವೇಷದಳ್ಳುರಿʼ ಇಡೀ ರಾಜ್ಯಕ್ಕೇ ಶಾಪವಾಗಿ ಪರಿಣಮಿಸಲಿದೆ ಎಂದು ಎಚ್ ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶ ಮಾಡಬೇಕು. ಅವರು ಯಾರ ಕೈಗೊಂಬೆಯೂ ಆಗಬಾರದು ಎಂದು ನಾನು ಮತ್ತೊಮ್ಮೆ ಆಗ್ರಹಿಸುತ್ತಿದ್ದೇನೆ. ಶಾಂತಿ-ಭದ್ರತೆ ನಿರ್ವಹಣೆಯಲ್ಲಿ ವಿಫಲವಾಗಿರುವ ಸರಕಾರಕ್ಕೆ ರಾಜ್ಯಪಾಲರು ಕಿವಿ ಹಿಂಡಲೇಬೇಕು ಎಂದು ಕುಮಾರಸ್ವಾಮಿ ಒತ್ತಾಯ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next