Advertisement

ಬೆಂಬಲದ ಭಿಕ್ಷೆ ಬೇಡಿದವರು ಯಾರು? ‘ಮಿಸ್ಟರ್‌ ಟರ್ಮಿನೇಟರ್’ಗೆ ಕುಮಾರಸ್ವಾಮಿ ಪ್ರಶ್ನೆ

08:37 AM Dec 13, 2021 | Team Udayavani |

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಪರಸ್ಪರ ಆರೋಪ – ಪ್ರತ್ಯಾರೋಪ, ಟೀಕೆಗಳು ಮುಂದುವರಿದಿದೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ವಿಪಕ್ಷ ನಾಯಕ ಸಿದ್ದರಾಯಮಯ್ಯ ವಿರುದ್ಧ ಪರೋಕ್ಷವಾಗಿ ಟೀಕೆಗಳನ್ನು ಮಾಡಿದ್ದಾರೆ.

Advertisement

ಟ್ವೀಟ್ ಮಾಡಿರುವ ಎಚ್ ಡಿಕೆ, “ಕಟ್ಟುವುದು ಮನುಷ್ಯತ್ವ, ಕೆಡವುವುದು ರಾಕ್ಷಸತ್ವ. ನಿಮಗೆ ಕೆಡವಿ ಗೊತ್ತೇ ವಿನಾ ಕಟ್ಟಿ ಗೊತ್ತಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂದು ಹೇಳಿ ನಮ್ಮ ಮನೆ ಬಾಗಿಲಿಗೆ ಬಂದ ಕಾಂಗ್ರೆಸ್‌ ನಾಯಕರು ಸರಕಾರದ ನೇತೃತ್ವ ವಹಿಸಿ ಎಂದರು. ಹಾಗಾದರೆ, ಪಕ್ಷದ ನಿರ್ಧಾರಕ್ಕೂ ನಿಮಗೂ ಸಂಬಂಧ ಇಲ್ಲವಾ ಮಿಸ್ಟರ್ ಸಿದ್ದಸೂತ್ರಧಾರ? ನಾನು ಜೆಡಿಎಸ್‌ʼನವರ ಮನೆ ಬಾಗಿಲಿಗೆ ಹೋಗಿಲ್ಲ ಎನ್ನುತ್ತೀರಿ, ನಿಮ್ಮನ್ನು ಕರೆದವರು ಯಾರು? ನಾವೇನು ಎಲೆ-ಅಡಿಕೆ ಕೊಟ್ಟು ಆಹ್ವಾನ ಕೊಟ್ಟೆವಾ? ಬಂದು ಬೆಂಬಲದ ಭಿಕ್ಷೆ ಬೇಡಿದವರು ಯಾರು? ದೆಹಲಿ ನಾಯಕರು ನಮ್ಮ ಮನೆ ಬಾಗಿಲಲ್ಲಿ ನಿಂತಿದ್ದಾಗಲೇ ಮೈತ್ರಿಗೆ ಕುಣಿಕೆ ಬಿಗಿಯಲು ಯತ್ನಿಸಿದವರು ಯಾರು ಮಿಸ್ಟರ್‌ ಟರ್ಮಿನೇಟರ್ ಎಂದು ಪ್ರಶ್ನಿಸಿದ್ದಾರೆ.

ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆದಿದೆ, ನನ್ನ ಹಂತದಲ್ಲಿ ಅಲ್ಲ ಅನ್ನುತ್ತೀರಿ! ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರ ಮಾತಿಗೇ ನಿಮ್ಮಲ್ಲಿ ಕಿಮ್ಮತ್ತಿಲ್ಲಾ? ಹಾಗಾದರೆ, ಸಿಎಲ್‌ಪಿಯನ್ನೇ ಅಡ್ಡಡ್ಡ ʼಸೀಳಿʼ ಬೆಂಬಲಿಗ ಶಾಸಕರು ಬಿಜೆಪಿಗೆ ಹೋಗಲು ದುಷ್ಪ್ರೇರಣೆ ಕೊಟ್ಟವರು ಯಾರು? ವರಿಷ್ಠರು ತಂದ ಸರಕಾರವನ್ನೇ ತೆಗೆದಿರಿ, ಬಿಜೆಪಿ ಸರಕಾರ ಬರಲು ಕಾರಣರಾದಿರಿ. ಈಗ ಸುಳ್ಳಿಗೆ ಸುಳ್ಳು ಪೋಣಿಸುತ್ತಿದ್ದೀರಿ. ಬಿಜೆಪಿ ಸರಕಾರ ಬರಲು ಶಾಸಕರ ಟೀಂ ರೆಡಿ ಮಾಡಿದವರು ಯಾರು? ಇಷ್ಟೆಲ್ಲಾ ʼಸಿದ್ದಕಲೆʼ ಎಲ್ಲಿಂದ ಬಂತು ಮಿಸ್ಟರ್ ಸಿದ್ದಕಲಾನಿಪುಣಪ್ಪಾ ಎಂದು ಟೀಕಿಸಿದ್ದಾರೆ.

ಹೈಕಮಾಂಡ್ ನಿರ್ಧಾರಕ್ಕೂ ಗುನ್ನ, ಅಹಿಂದದ ಹೆಸರಿನಲ್ಲಿ ದಲಿತ ನಾಯಕರಾದ ಖರ್ಗೆ ಅವರಿಗೂ ಖೆಡ್ಡಾ, ಡಾ,ಪರಮೇಶ್ವರ ಅವರಿಗೆ ಸೋಲಿನ ಸುಳಿ, ಈಗ ನೋಡಿದರೆ; ʼಬಂಡೆʼಯ ಕೆಳಗೂ ಡೈನಾಮೈಟ್ ಇಡುತ್ತಿರುವ ಅನೈತಿಕ, ನೀಚ, ನಿಕೃಷ್ಟ, ಹೀನ ರಾಜಕಾರಣಕ್ಕೆ ನಾಂದಿ ಹಾಡಿರುವ ʼಪರಮಪಾತಕ  ಪರಾಕಾಷ್ಠೆ ಯಾರು ಎಂದಿದ್ದಾರೆ.

ಜೆಡಿಎಸ್‌ ಬಿಜೆಪಿಯ ಬಿ ಟೀಂ ಅನ್ನುತ್ತೀರಿ. ಹಾಗಾದರೆ; ಆಡಳಿತ ಪಕ್ಷದಲ್ಲೇ ಕೂತು ವಿರೋಧಿಗಳೊಂದಿಗೆ ಕುಮ್ಮಕ್ಕಾಗಿ ಬೆನ್ನಿಗಿರಿದ ʼಬ್ರೂಟಸ್‌ʼ ಯಾರು? ಮೈತ್ರಿ ಸರಕಾರಕ್ಕೆ ಮೊದಲ ದಿನದಿಂದಲೇ ಮಹೂರ್ತ ಇಟ್ಟವರು ಯಾರು? ಸ್ವಯಂಘೋಷಿತ ಅಹಿಂದ ನಾಯಕರೇ ನಿಮ್ಮೊಳಗಿದೆ ಕಾರ್ಕೋಟಕ ʼವಿಷʼ. ಆ ವಿಷವೇ ನಿಮಗೆ ಮುಳುವು. ಅಹಾ! ʼಕೋಲಾರದಲ್ಲಿ ಕಲರ್‌ಫುಲ್‌ ಸುಳ್ಳುಗಳ ಸರಮಾಲೆʼಯನ್ನೇ ಸೃಷ್ಟಿಸಿ ಕೃತಾರ್ಥರಾಗಿದ್ದೀರಿ. ʼಅಡ್ಜಸ್ಟ್‌ಮೆಂಟ್‌ ರಾಜಕಾರಣʼದ ಹರಿಕಾರರು ನೀವಲ್ಲವೇ? ವಿನಾಶಕಾಲೇ ವಿಪರೀತ ಸುಳ್ಳು! ಎಂದು ಎಚ್ ಡಿಕೆ ಟೀಕೆ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next