Advertisement

ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಅಂತ್ಯಸಂಸ್ಕಾರ ಮಾಡಲು ಅವಕಾಶ ನೀಡಿ: ಕುಮಾರಸ್ವಾಮಿ ಸಲಹೆ

09:09 AM Apr 23, 2021 | Team Udayavani |

ಬೆಂಗಳೂರು: ಕೋವಿಡ್ ಮಹಾಮಾರಿಯಿಂದ ಜೀವ ತೆತ್ತ ವ್ಯಕ್ತಿಗಳ ಶವಸಂಸ್ಕಾರಕ್ಕೆ ಬೆಂಗಳೂರಿನ ಅಷ್ಟ ದಿಕ್ಕುಗಳಲ್ಲಿನ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ದಿನವೊಂದಕ್ಕೆ ಸುಮಾರು 25 ಶವಗಳನ್ನು ಅಂತ್ಯಸಂಸ್ಕಾರ ಮಾಡಲು ಸರಕಾರ ತಕ್ಷಣವೇ ಸಮರೋಪಾದಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Advertisement

ಟ್ವೀಟ್ ಮಾಡಿರುವ ಅವರು, ಚಿಕಿತ್ಸೆ ದಕ್ಕದೆ ಅತ್ಯಂತ ಅಮಾನವೀಯವಾಗಿ ಸಾವನ್ನಪ್ಪಿದ ಕೊರೊನಾ ಸೋಂಕಿತರ ಶವಗಳ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಕನಿಷ್ಠ ವ್ಯವಸ್ಥೆಯನ್ನು ಮಾಡುವಲ್ಲಿ ಕೈ ಚೆಲ್ಲಿ ಕುಳಿತಿರುವ ರಾಜ್ಯ ಸರ್ಕಾರದ ವೈಫಲ್ಯ ಅತ್ಯಂತ ಬೇಜವ್ದಾರಿತನದ ನಿರ್ದಯಿ ವರ್ತನೆ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನ ಎಂಟೂ ದಿಕ್ಕುಗಳಲ್ಲೂ ಮರಗಳಿಲ್ಲದ ಬೆಂಗಾಡು ಅರಣ್ಯ ಭೂಮಿಯಿದೆ.ಇಲ್ಲಿ ಪ್ರತಿದಿನ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತಿಮ ಸಂಸ್ಕಾರಕ್ಕೆ ಕೂಡಲೇ ವ್ಯವಸ್ಥೆ ಮಾಡಬೇಕು. ಸರಕಾರ ಇದನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೊರೊನಾ ಸೋಂಕಿತರಿಗೆ ಬೆಡ್ ಗಳನ್ನು, ಆಕ್ಸಿಜನ್, ವೆಂಟಿಲೇಟರ್, ಹಾಗೂ ಲಭ್ಯವಿರುವ ಉಪಶಮನದ ಔಷಧಿಗಳನ್ನು ಸರಕಾರ ಕೊಡಲಿಲ್ಲ. ಕನಿಷ್ಟ ಅವರ ಅಂತ್ಯ ಸಂಸ್ಕಾರವನ್ನಾದರೂ ಗೌರವಯುತವಾಗಿ ನಡೆಸಲು ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಅತ್ಯಂತ ನೋವಿನಿಂದ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಎಚ್ ಡಿಕೆ ಹೇಳಿದ್ದಾರೆ.

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ವ್ಯವಸ್ಥೆ ಮಾಡುವಲ್ಲಿ ಮುಗ್ಗರಿಸಿ ಬಿದ್ದ ಸರಕಾರ ಅಂತ್ಯಸಂಸ್ಕಾರಕ್ಕಾದರೂ ಜಾಗದ ವ್ಯವಸ್ಥೆ ಮಾಡುವಲ್ಲಿ ಇನ್ನೂ ತಡಮಾಡದೆ ಕೈ ಕಟ್ಟಿ ಕೂರಬಾರದು. ಇಲ್ಲದಿದ್ದರೆ, ಜನರ ಹಿಡಿಶಾಪ ಸರಕಾರಕ್ಕೆ ತಗಲುವುದರಲ್ಲಿ ಸಂಶಯವೇ ಬೇಡ. ಸಾವನ್ನಪ್ಪಿದ ಕೊರೊನಾ ಸೋಂಕಿತರ ಬಂಧು ಬಳಗದವರು ಪಡುತ್ತಿರುವ ಬವಣೆಯನ್ನು ಕಂಡರೆ, ಹೃದಯ ಕಿವುಚಿದಂತಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next