ಬೆಂಗಳೂರು: ಚುನಾವಣೆ ಹೊತ್ತಿನಲ್ಲಿ ಮೀಸಲು ಮರು ಹಂಚಿಕೆ ಮಾಡಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿಯ ಪಾಪದ ಕೊಡ ತುಂಬುತ್ತಿದೆ .ಬಿಜೆಪಿ ಮೀಸಲು ಮೋಸ ಎಂದು ಹ್ಯಾಷ್ ಟ್ಯಾಗ್ ಹಾಕಿದ್ದಾರೆ. ಚುನಾವಣೆ ಎಂಬ ಚದುರಂಗದಾಟದಲ್ಲಿ ರಾಜ್ಯ ಬಿಜೆಪಿ ಬಿಸಿಲುಗುದರೆಯ ಮೇಲೆ ಸವಾರಿ ಮಾಡುತ್ತಿದೆ, ಅಷ್ಟೇ ಅಲ್ಲ. ಕ್ರೂರ ವ್ಯಾಘ್ರನ ಮೇಲೂ ಕುಳಿತು ಕುರುಡಾಗಿ ಸರ್ಕಸ್ ಮಾಡುತ್ತಿದೆ. ಸಾಗು, ಇಲ್ಲವೇ ಹೋಗು ಎನ್ನುವ ದುಸ್ಥಿತಿಯಲ್ಲಿ ತೋಯ್ದಾಡುತ್ತಿದೆ. ಮತದ ಹೆಸರಿನಲ್ಲಿ ಮತಯುದ್ಧ ಗೆಲ್ಲಬಹುದೆಂದು ಚಟಕ್ಕೆ ಬಿದ್ದಿರುವ ರಾಜ್ಯ ಬಿಜೆಪಿ, ಈಗ ಸರ್ವಜನರ ಕಲ್ಯಾಣದ ಪ್ರತೀಕವಾದ ಕರ್ನಾಟಕದಲ್ಲಿ ಮೀಸಲು ಕಳ್ಳಾಟ ಆಡಿದೆ. ಗೆಲ್ಲಲೇಬೇಕು, ಗೆಲ್ಲದಿದ್ದರೆ ಇನ್ನೊಬ್ಬರ ತಟ್ಟೆಗೆ ಕೈ ಹಾಕು, ಆಗದಿದ್ದರೆ ಕಸಿದುಕೋ.. ಇದೇ ಕಮಲ ಪಕ್ಷದ ಕುಟಿಲತೆ ಎಂದು ಕುಟುಕಿದ್ದಾರೆ.
ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಮುಸ್ಲಿಮರಿಗೆ 2ಬಿ ಅಡಿಯಲ್ಲಿ ನೀಡಿದ್ದ ಶೇ.4 ಮೀಸಲು ಕಸಿದುಕೊಂಡು, ಅದಕ್ಕೆ ಆರ್ಥಿಕ ಹಿಂದುಳಿದಿರುವಿಕೆಯ ಲೇಪ ಹಚ್ಚಿ, ಮೀಸಲು ಆಶಯವನ್ನೇ ಹಾಳುಗೆಡವಿ ಬದುಕುಗಳನ್ನು ಸುಟ್ಟು ಹಾಕುವ ದುಷ್ಟತನವಲ್ಲದೆ ಮತ್ತೇನೂ ಅಲ್ಲ ಎಂದು ಟೀಕಿಸಿದ್ದಾರೆ.
ಕಳ್ಳಬೆಕ್ಕು ಕಣ್ಮುಚ್ಚಿ ಹಾಲು ಕುಡಿಯಲು ಹೊರಟಿದೆ. ಒಬ್ಬರ ಅನ್ನ ಕಸಿದುಕೊಂಡು ಇನ್ನೊಬ್ಬರ ಹೊಟ್ಟೆ ತುಂಬಿಸಬಹುದು ಎನ್ನುವ ಬಿಜೆಪಿಗರ ರಕ್ಕಸಚಾಳಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಕ್ಕೆ ಶಾಶ್ವತ ಸಮಾಧಿ ಕಟ್ಟುವಂತಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇಲ್ಲದವರ ನಡವಳಿಕೆ ಇದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
ಮೂರೂವರೆ ವರ್ಷದಿಂದ ಗಾಳಿಯಲ್ಲಿ ಗಾಳೀಪಟ ಹಾರಿಸಿಕೊಂಡೇ ಕಾಗಕ್ಕಗುಬ್ಬಕ್ಕನ ಕಥೆ ಹೇಳಿದ್ದ ರಾಜ್ಯ ಬಿಜೆಪಿ ಸರಕಾರ ಚುನಾವಣೆ ಗಿಮಿಕ್ಕಿನ ಸಂಪುಟ ಸಭೆಯಲ್ಲಿ ಮೀಸಲು ತುಪ್ಪವನ್ನು ಜನರ ಹಣೆಗೆ ಸವರುವ ಬೂಟಾಟಿಕೆ ನಡೆಸಿದೆ.
ಬಿಜೆಪಿ ಪಾಪದ ಕೊಡ ಭರ್ತಿ ಆಗಿದೆ. ರಾಜ್ಯವನ್ನು ಧರ್ಮದ ಹೆಸರಿನಲ್ಲಿ ವಿಭಜಿಸಿ, ಜಾತಿಜಗಳಕ್ಕೆ ತುಪ್ಪ ಸುರಿಯುತ್ತಿದೆ. ಅರಗಿನ ಮನೆಯಲ್ಲಿ ಪಾಂಡವರಿಗೆ ಕೊಳ್ಳಿ ಇಡಲು ಹೋಗಿ ಮುಂದೊಮ್ಮೆ ತಾವೇ ಎಸಗಿದ ಪಾಪಕುಂಡದಲ್ಲಿ ಬೆಂದು ಹೋದ ಕೌರವರಂತೆ, ಬಿಜೆಪಿಗರು ಮದವೇರಿ ಮೆರೆಯುತ್ತಿದ್ದಾರೆ.
– ಎಚ್.ಡಿ.ಕುಮಾರಸ್ವಾಮಿ