Advertisement

ಅಭಿವೃದ್ಧಿ ಹೆಸರಲ್ಲಿ ಕೊಳ್ಳೆ ಹೊಡೆದಿದ್ದೇ ಸಾಧನೆ!

11:46 PM May 12, 2017 | Team Udayavani |

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಾಲ್ಕು ವರ್ಷಗಳ ಸಾಧನೆ ಹೇಗೆ ಪರಾಮರ್ಶೆ ಮಾಡುತ್ತೀರಿ?
ಅನ್ನಕೊಡುವ ರೈತನ ಕಷ್ಟ ಅರಿತುಕೊಳ್ಳದ, ಬರ ಪರಿಸ್ಥಿತಿ ನಿರ್ವಹಿಸದೆ, ಅಭಿವೃದ್ಧಿ ಹೆಸರಿನಲ್ಲಿ ಹಣ ಕೊಳ್ಳೆ ಹೊಡೆದು ಕಾಲ ಕಾಲಕ್ಕೆ ಹೈಕಮಾಂಡ್‌ಗೆ ಕಪ್ಪ ಸಲ್ಲಿಸಿ, ಅಧಿಕಾರಿಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳದ, ಭ್ರಷ್ಟಾಚಾರಕ್ಕೆ ರತ್ನಗಂಬಳಿ ಹಾಸಿದ್ದು ಕಾಂಗ್ರೆಸ್‌ ಸರ್ಕಾರದ ನಾಲ್ಕು ವರ್ಷದ ಸಾಧನೆ.

Advertisement

ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಶೇ. 95ರಷ್ಟು ಭರವಸೆ ಈಡೇರಿದೆ ಎಂದು ಸಿಎಂ ಹೇಳಿಕೊಂಡಿದ್ದಾರಲ್ಲಾ?
ಹೇಳಿಕೊಳ್ಳಲು ಯಾರ ಅಪ್ಪಣೆ ಬೇಕು? 158 ಭರವಸೆ ಈಡೇರಿದ ಬಗೆ ಹೇಗೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ಅನ್ನಭಾಗ್ಯ ಕನ್ನ ಭಾಗ್ಯ ಆಗಿದೆ. ಅಷ್ಟಕ್ಕೂ ಈ ಯೋಜನೆ ಇವರೇ ಪ್ರಾರಂಭಿಸಿದ್ದಲ್ಲ. ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದಾಗಲೇ ತಲಾ 4 ಕೆಜಿ ಅಕ್ಕಿ ಕೊಡುವ ಯೋಜನೆ ಇತ್ತು.  ಕ್ಷೀರಭಾಗ್ಯ ಯೋಜನೆ ಮಕ್ಕಳ ಆರೋಗ್ಯಕ್ಕೆ ತಂದಿದ್ದಲ್ಲ, ಕೆಎಂ.ಎಫ್.ನಲ್ಲಿ ಸಂಗ್ರಹವಾಗುವ ಹಾಲು ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲ. ಇನ್ನು ಹಾಲಿಗೆ ಪ್ರೋತ್ಸಾಹಧನ ಇವರ ಯೋಜನೆಯಲ್ಲ, ಎರಡು ರೂ. ಕೊಡುತ್ತಿದ್ದದ್ದು 4 ರೂ. ಏರಿಸಲಾಯಿತಷ್ಟೆ.

ಅಭಿವೃದ್ಧಿ ನಿಗಮಗಳಲ್ಲಿ ಅಹಿಂದ ವರ್ಗದ 10.18 ಲಕ್ಷ ಜನ ಮಾಡಿದ್ದ 466.3 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆಯಂತಲ್ಲಾ?
ನಿಗಮಗಳಲ್ಲಿ ಮಾಡಿದ್ದ ಸಾಲ ಮನ್ನಾ ಘೋಷಣೆ ಸಿದ್ದರಾಮಯ್ಯ ಮಾಡಿದರು. ನಿಗಮಗಳಿಗೆ ಸರ್ಕಾರ ಆ ಹಣ ತುಂಬಿ ಕೊಡಲಿಲ್ಲ. ಬುಕ್‌ ಅಡ್ಜೆಸ್ಟ್‌ಮೆಂಟ್‌ ಮಾಡಲಾಯಿತು. ಇದರಲ್ಲಿ ಇವರದೇನು ಹೆಚ್ಚುಗಾರಿಕೆ?   

ಎಸ್‌ಸಿಪಿ-ಟಿಎಸ್‌ಪಿ ಕ್ರಾಂತಿಕಾರಕ ಕಾಯ್ದೆ ತಂದು 86,728 ಕೋಟಿ ರೂ. ಮೀಸಲಿಟ್ಟಿದ್ದಾರಂತಲ್ಲಾ?
ಅದರಲ್ಲಿ ನಿಜವಾಗಿಯೂ ವೆಚ್ಚವಾಗಿದ್ದು ಎಷ್ಟು ಎಂಬುದು ಮುಖ್ಯವಲ್ಲವೇ? ಈ ಬಾರಿಯ ಬಜೆಟ್‌ ಬಿಟ್ಟುಬಿಡಿ.  ಮೂರು ವರ್ಷಗಳಲ್ಲಿ 60.350 ಕೋಟಿ ರೂ. ಒದಗಿಸಿ 47,186 ಕೋಟಿ ರೂ. ಬಿಡುಗಡೆ ಎಂದು ಲೆಕ್ಕದಲ್ಲಿ ತೋರಿಸಲಾಗಿದೆ. ಆದರೆ, ವೆಚ್ಚ ಹಾಗೂ ಯೋಜನೆಗಳ ಪೂರ್ಣ ಪ್ರಮಾಣದ ಅನುಷ್ಠಾನ ಶೇ.60 ರಷ್ಟು ಇಲ್ಲ. ಎಸ್‌ಸಿಪಿ-ಟಿಎಸ್‌ಪಿ ಬಗ್ಗೆ ಇವರು ಬಡಾಯಿ ಕೊಚ್ಚಿಕೊಳ್ತಾರೆ. ನಿಗದಿತ ಹಣ ವೆಚ್ಚ ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿ ಮೇಲೆ ಕ್ರಮ ಎಂದು ನಿಯಮ ರೂಪಿಸಲಾಯ್ತು. ಇದುವರೆಗೂ ಯಾವುದೇ ಅಧಿಕಾರಿಯ ಮೇಲೆ ಕ್ರಮದ ಉದಾಹರಣೆ ತೋರಿಸಲಿ.

ಭ್ರಷ್ಟಾಚಾರ ರಹಿತ ಸರ್ಕಾರ ನಮ್ಮದು ಎಂದು ಸಿದ್ದರಾಮಯ್ಯ ಪದೇ ಪದೆ ಹೇಳುತ್ತಿದ್ದಾರಲ್ಲಾ?
ಎದೆ ಮುಟ್ಟಿಕೊಂಡು ಹೇಳಲಿ; ಅರ್ಕಾವತಿ ಡಿ ನೋಟಿಫಿಕೇಷನ್‌ ಪ್ರಕರಣದಲ್ಲಿ ಇವರು ಸತ್ಯ ಹರಿಶ್ಚಂದ್ರರಾಅಂತಾ? ಹೈಕಮಾಂಡ್‌ಗೆ ಯಾವ್ಯಾವ ಬಾಬಿ¤ನಲ್ಲಿ ಯಾವ್ಯಾವ ಸಮಯದಲ್ಲಿ ಎಷ್ಟೆಷ್ಟು ಹಣ ತಲುಪಿಸಲಾಯಿತು ಎಂಬುದು ಗೊತ್ತಿಲ್ಲವೇ.

Advertisement

ನೀವು ಮುಖ್ಯಮಂತ್ರಿಯಾಗಿದ್ದವರು, ಪ್ರಾಮಾಣಿಕವಾಗಿ ಹೇಳಿ ನಾಲ್ಕು ವರ್ಷದಲ್ಲಿ ಸರ್ಕಾರ ಏನೂ ಸಾಧನೆಯೇ ಮಾಡಿಲ್ಲವೇ?
ವಿರೋಧ ಮಾಡಲಿಕ್ಕಾಗಿಯೇ ಟೀಕಿಸುವವನು ನಾನಲ್ಲ. ಅಂಕಿ – ಅಂಶ ಗೊತ್ತಿದ್ದೇ ಹೇಳುತ್ತಿದ್ದೇನೆ. ಒಂದು ಸರ್ಕಾರ ಎಂದರೆ ವ್ಯವಸ್ಥೆ. ಆ ವ್ಯವಸ್ಥೆಯಡಿ ಯಾರು ಏನೂ ಮಾಡದಿದ್ದರೂ ಒಂದಷ್ಟು ಕಾರ್ಯಕ್ರಮ, ಯೋಜನೆಗಳು ಅನುಷ್ಟಾನವಾಗುತ್ತವೆ. ಹಿಂದಿನ ಸರ್ಕಾರಗಳ ಯೋಜನೆಗಳ ಜತೆಗೆ ಹೊಸ ಸರ್ಕಾರದ ಕಾರ್ಯಕ್ರಮಗಳು ಸೇರ್ಪಡೆಯಾಗುತ್ತವೆ. ಆದರೆ, ಸಮಗ್ರ ಕರ್ನಾಟಕದ ಅಭಿವೃದ್ಧಿ ನಿಟ್ಟಿನಲ್ಲಿ ಸಿದ್ದರಾಮಯ್ಯ ಎಡವಿದ್ದಾರೆ. ಎಲ್ಲ ಭಾಗಗಳಿಗೆ ನ್ಯಾಯ ಕಲ್ಪಿಸುವಲ್ಲಿ ವಿಫ‌ಲರಾಗಿದ್ದಾರೆ.

ರಾಜ್ಯ ಮಟ್ಟದಲ್ಲಿ ರೂಪಿಸುವ ಕಾರ್ಯಕ್ರಮಗಳು ಎಲ್ಲ ಭಾಗಕ್ಕೂ ತಲುಪುತ್ತಲ್ಲವೇ?
ಎಲ್ಲದರ ಜತೆ ಒಂದು ಎಂದು ತಲುಪುತ್ತವೆ. ನಿರ್ಲಕ್ಷ್ಯ ಹಾಗೂ ಅಭಿವೃದ್ಧಿ ಕಾಣದ ಪ್ರದೇಶಕ್ಕೆ ಹೆಚ್ಚು ಒತ್ತು ನೀಡಬೇಕಲ್ಲವೇ? ಸ್ನೇಹಿತರ ಮದುವೆಗೆ ಹೆಲಿಕಾಪ್ಟರ್‌ನಲ್ಲಿ ಅಧಿಕಾರಿಗಳ ದಂಡು ಸಮೇತ ಸರ್ಕಾರಿ ವೆಚ್ಚದಲ್ಲಿ ವಿಜಯಪುರ-ಬಾಗಲಕೋಟೆಗೆ ಹೋಗುವ ಮುಖ್ಯಮಂತ್ರಿಯವರು ಕನಿಷ್ಠ ಆ ನೆಪದಲ್ಲಾದರೂ ಅಲ್ಲಿನ ಬರ ನಿರ್ವಹಣೆ ಹಾಗೂ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಲಿಲ್ಲ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ಎಷ್ಟು ಬಾರಿ ಸಭೆ ಮಾಡಿದ್ದಾರೆ? ಅದರ ಪ್ರತಿಫ‌ಲ ಏನು ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಲಿ. 

ಸರ್ಕಾರದಲ್ಲಿ ನೀವು ಕಂಡ ಲೋಪವೇನು?
ಮೊದಲಿಗೆ ಸಚಿವ ಸಂಪುಟ ಸಹೋದ್ಯೋಗಿಗಳಲ್ಲಿ ಸಮನ್ವಯತೆಯೇ ಇರಲಿಲ್ಲ. ಅಧಿಕಾರಿಗಳ ಮೇಲೆ ನಿಯಂತ್ರಣ ಸ್ವತಃ ಮುಖ್ಯಮಂತ್ರಿಯವರಿಗೆ ಇರಲಿಲ್ಲ. ಇದರ ಪರಿಣಾಮ ಆಡಳಿತ ಕುಸಿತ ಕಂಡಿತು. ಇದು ಹಲವಾರು ಸಂದರ್ಭಗಳಲ್ಲಿ ಸಾಬೀತಾಯಿತು. ಮುಖ್ಯಮಂತ್ರಿಯವರ ಸುತ್ತ ಎಸ್‌ಪಿಜಿ (ಸ್ಟೆಷಲ್‌ ಪ್ರೊಟೆಕ್ಷನ್‌ ಗ್ರೂಪ್‌) ಬಿಟ್ಟು ಬೇರೆ ಯಾರಿದ್ದರು? 

ಪ್ರತಿಪಕ್ಷವಾಗಿ ನೀವು ನಿಮ್ಮ ಹೊಣೆಗಾರಿಕೆ ನಿಭಾಯಿಸಿದ್ದೀರಾ?
ಖಂಡಿತ. ಆಯಾ ಸಂದರ್ಭದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ಸದನದ ಒಳಗೆ ಮತ್ತು ಹೊರಗೆ ಜೆಡಿಎಸ್‌ ಸಂಘಟಿತ ಹೋರಾಟ ಮಾಡಿದೆ. ಆದರೆ, ಸರ್ಕಾರ ಮತ್ತು ಮುಖ್ಯಮಂತ್ರಿಯವರಿಗೆ ಯಾವುದನ್ನೂ ಕೇಳಿಸಿಕೊಳ್ಳುವ ವ್ಯವಧಾನವೇ ಇರಲಿಲ್ಲ. ಪ್ರತಿಪಕ್ಷಗಳ ಸಲಹೆ-ಅಭಿಪ್ರಾಯ ಮುಕ್ತ ಮನಸ್ಸಿನಿಂದ ಸ್ವೀಕಾರ ಮಾಡಲೇ ಇಲ್ಲ.

ಸಿದ್ದರಾಮಯ್ಯ ಸರ್ಕಾರದ ಸಾಧನೆ ಬಗ್ಗೆ ಹತ್ತಕ್ಕೆ ನೀವು ಎಷ್ಟು ಅಂಕ ಕೊಡುತ್ತೀರಿ?
ಅದನ್ನು ಕೊಡುವವನು ನಾನಲ್ಲ, ರಾಜ್ಯದ ಜನತೆ. ವೆರಿ ಶಾರ್ಟ್ಲಿ, ಇನ್ನೊಂದು ವರ್ಷದಲ್ಲಿ ಅದು ಗೊತ್ತಾಗುತ್ತದೆ.

— ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ 

– ಸಂದರ್ಶನ: ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next