Advertisement

ಹೀಗೆ ಮಾಡಿದರೆ ಬಿಜೆಪಿ ಮುಕ್ತ ಭಾರತವಾಗಲಿದೆ: ಹೆಚ್ ಡಿಕೆ ಕಿಡಿ

02:27 PM Apr 04, 2022 | Team Udayavani |

ಬೆಂಗಳೂರು: ”ಇಷ್ಟು ವರ್ಷ ಇಲ್ಲದೇ ಇರುವ ಧ್ವನಿವರ್ಧಕ ವಿವಾದ ಈಗ ಯಾಕೆ ? ಇದು ಕರ್ನಾಟಕ, ಉತ್ತರ ಪ್ರದೇಶವಲ್ಲ, ಬಿಜೆಪಿಯವರು ಕಾಂಗ್ರೆಸ್ ಮುಕ್ತ ಎಂದು ಹೇಳಿದ್ದರು. ಹೀಗೆ ಮಾಡಿದರೆ ಬಿಜೆಪಿ ಮುಕ್ತವಾಗಲಿದೆ” ಎಂದು ಮಾಜಿ ಸಿಎಂ‌ ಎಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಜಾಬ್, ಹಲಾಲ್ ಬಗ್ಗೆ ಧೈರ್ಯವಾಗಿ ಚರ್ಚಿಸಬೇಕಿತ್ತು ಎಂದು ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಮುಂದೆ ಹೇಳಿದ್ದಾರೆ. ವಿವಾದಕ್ಕೆ ಬೆಂಕಿ ಹಚ್ಚಿಕೊಟ್ಟವರು ಕಾಂಗ್ರೆಸ್ ನವರು. ನಾನು ಬಿಜೆಪಿ ಜೊತೆ ಚಕ್ಕಂದ ಮಾಡಿಕೊಳ್ಳಲು ಹೊಂದಾಣಿಕೆ ಮಾಡಿಕೊಂಡಿಲ್ಲ, ಈ ಸರ್ಕಾರಕ್ಕೆ ಪಾಪದ‌ ಕೊಡ ತುಂಬಿದೆ. ಹೀಗಾಗಿ ಇನ್ನು ಮುಂದೆ ಹೋರಾಟ ಮಾಡುತ್ತೇವೆ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರ ಬರಲು ಕಾರಣ ಯಾರು ? ನಾವೇನು ಬಿಜೆಪಿ ಜೊತೆಗೆ ಹೋಗಿಲ್ಲ. ಈಗಿನ ಸರ್ಕಾರ ಬರಲು ಕಾರಣ ಯಾರು ?ಕುಮಾರಸ್ವಾಮಿ ದೊಡ್ಡವರು ಅಂತಾ ಹೇಳುತ್ತಾರೆ.ಇಲ್ಲಿ ದೊಡ್ಡವರು, ಚಿಕ್ಕವರು ಬರುವುದಿಲ್ಲ.ಧೈರ್ಯವಾಗಿ ಎದುರಿಸಿ ಏನಾಗಿದೆ ನಿಮಗೆ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಸವಾಲು ಹಾಕಿದರು.

ನಾನು ಬಿಜೆಪಿ ವಿರುದ್ಧ ಸೆಟೆದು ನಿಂತಿರೋದು ಜನರ ರಕ್ಷಣೆಗಾಗಿ.ಯಾರನ್ನೂ ಮೆಚ್ಚಿಸಲು ಅಲ್ಲ.ಇಷ್ಟೆಲ್ಲಾ ಆದರೂ ಸರ್ಕಾರ ಜಾಣ ಕಿವುಡಾಗಿದೆ.ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ.ನಾನು ಯಾವುದೇ ಸೋಗು ಹಾಕುವುದಿಲ್ಲ. ನಾನು ದಾರ್ಶನಿಕ ಅಂತಾ ಫಲಕ ಹಾಕೊಕೊಂಡಿಲ್ಲ.ಅದೆಲ್ಲಾ ಬಿಜೆಪಿಯವರದ್ದು.ನಾನೇನು ಸಮಾಜ ಬದಲಾವಣೆಯ ಪರಿವರ್ತಕನಲ್ಲ. ನಾನು ಓಟ್ ಬ್ಯಾಂಕ್ ಗಾಗಿ ಮಾತನ್ನಾಡುತ್ತಿಲ್ಲ.ಎಲ್ಲಿ ಅನ್ಯಾಯವಾಗಲಿದೆಯೋ ಅಲ್ಲಿ ಧ್ವನಿ ಎತ್ತುತ್ತೇನೆ.ನಾನು ಬೆಂದ ಮನೆಯಲ್ಲಿ ಗಳ ಇರಿಯೋನಲ್ಲಾ. ಮತ‌ ಪಡೆಯುವ ಸಲುವಾಗಿ ಹಿಂದೂ ಅಂತಾ ಹೇಳುತ್ತಾರೆ. ಅಧಿಕಾರದ ಸುಪ್ಪತ್ತಿಗೆಗಾಗಿ‌‌ ಕಂದಾಚಾರ ಮಾಡುತ್ತಿರೋರು ಬಿಜೆಪಿಯವರು ಎಂದು ಟೀಕಿಸಿದರು.

ಕಾಶ್ಮೀರ್ ಫೈಲ್ ಗೆ ತೆರಿಗೆ ವಿನಾಯಿತಿ‌ ಕೊಟ್ಟಿದ್ದಾರೆ.ಮಂತ್ರಿಗಳ ಕಚೇರಿಯಲ್ಲಿರುವ ಜನರ ಫೈಲ್ ಗಳಿವೆ.ಮೊದಲು ಇದಕ್ಕೆ ತೆರಿಗೆ ವಿನಾಯಿತಿ ಕೊಡಲಿ.ಜನರ ಜೊತೆ ಚೆಲ್ಲಾಟವಾಡುವುದನ್ನ ನಿಲ್ಲಿಸಿ.ಅದು ಬಿಟ್ಟು ಹಲಾಲ್, ಜಟ್ಕಾ ಅಂತಾ ಹಿಡಿದುಕೊಂಡು ಕುಳಿತಿದ್ದಾರೆ ಎಂದು ಆರೋಪಿಸಿದರು.

Advertisement

ಕಾಂಗ್ರೆಸ್ ರೀತಿ ನಾನು ಅಂಜಿಕೊಂಡು ಕುಳಿತುಕೊಂಡಿಲ್ಲ.ಎಲ್ಲವನ್ನೂ ಧೈರ್ಯವಾಗಿ ಹೇಳಿದ್ದೇನೆ.ವಿಶ್ವಹಿಂದೂ ಪರಿಷತ್,ಬಜರಂಗ ದಳದವರು ಏನೇನೋ ಮಾಡುತ್ತಿದ್ದಾರೆ . ರೈತರು ಕಷ್ಟದಲ್ಲಿರುವಾಗ ಯಾವ ವಿಶ್ವಹಿಂದೂ ಪರಿಷತ್, ಬಜರಂಗ ದಳದವರು ಬಂದಿದ್ದರು ?ಎಂದು ವಾಗ್ದಾಳಿ ನಡೆಸಿದರು.

ಹಿಜಾಬ್ ವಿಚಾರ ಬಂದಾಗ ಕಾಂಗ್ರೆಸ್ ನವರು ಮನೆಯಲ್ಲಿ ಸೇರಿಕೊಂಡರು.ಹಿಜಾಬ್ ವಿಚಾರ ಮಾತನ್ನಾಡಬೇಡಿ ಅಂತಾ ಕೆಪಿಸಿಸಿ ಅಧ್ಯಕ್ಷರೇ ಹೇಳುತ್ತಾರೆ.ಇದು ಓಟ್ ಬ್ಯಾಂಕ್ ರಾಜಕಾರಣವಲ್ಲದೇ  ಇನ್ನೇನು ? ಮುಸ್ಲಿಂರು ಯಾಕೆ ಕಾಂಗ್ರೆಸ್ ನ್ನ ನಂಬಬೇಕು ? ನಾವು ಈ ವಿಚಾರವಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಪೆಟ್ರೋಲಿಯಂ, ಸಿಮೆಂಟ್, ಗ್ಯಾಸ್ ಬೆಲೆ ಎಷ್ಟಾಗಿದೆ ?ಬಜರಂಗ ದಳದವರು, ವಿಶ್ವಹಿಂದೂ ಪರಿಷತ್ ನವರು ಬಂದು ಜನರ ಸಮಸ್ಯೆ ಬಗೆಹರಿಸಲಿ. ಆಗ ನಾನು ನಿಮ್ಮ ಜೊತೆ ಕೈಜೋಡಿಸುತ್ತೇನೆ. ಕಾಂಗ್ರೆಸ್ ಸರಿಯಾಗಿದಿದ್ದರೆ ಇಂದು ಯಾಕೆ ಈ ಪರಿಸ್ಥಿತಿ ಬರುತ್ತಿತ್ತು ? ಗ್ಯಾಸ್ ಸಿಲಿಂಡರ್ ಗೆ ಅಲಂಕಾರ ಮಾಡಿಕೊಂಡು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next