ವಿಧಾನಸಭೆ: ಮಹದಾಯಿ ಹೋರಾಟಗಾರರಿಗೆ ಪೊಲೀಸರಿಂದ ಹೊಡೆಸಿದವರು ಈಗ ” ನಮ್ಮ ನೀರು, ನಮ್ಮ ಹಕ್ಕು” ಎಂದು ಹೊರಟಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಜೆಟ್ ಚರ್ಚೆಯಲ್ಲಿ ಜೆಡಿಎಸ್ ಪರವಾಗಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಏನಾದರೂ ಅನುಷ್ಠಾನವಾಗಬೇಕಿದ್ದರೆ ರಾಜ್ಯ ಸರಕಾರ ಕೇಂದ್ರದ ಮನವೊಲಿಸಬೇಕು. ಅದನ್ನು ಬಿಟ್ಟು ನಮ್ಮ ನೀರು, ನಮ್ಮ ಹಕ್ಕು ಎಂದು ಹೇಳುತ್ತಾ ಹೊರಟರೆ ಏನೂ ಆಗುವುದಿಲ್ಲ ಎಂದು ಟೀಕಿಸಿದರು.
ಕೇಂದ್ರ ಸರಕಾರ ಪದೇ ಪದೇ ಉಭಯ ರಾಜ್ಯಗಳು ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಿ ಎಂದು ಹೇಳುತ್ತಿರುವುದು ಅರ್ಥವಾಗುವುದಿಲ್ಲ. ಮುಖ್ಯಮಂತ್ರಿಗಳು ತಕ್ಷಣ ಕೇಂದ್ರ ಸರಕಾರದ ಮನವೊಲಿಸಬೇಕು. ಇಲ್ಲವಾದರೆ ಸಿಡಬ್ಲ್ಯುಸಿ ಏಜೆ ಬೇಕು? ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಮಹಾನಗರ ಪಾಲಿಕೆ: ವಾರ್ಡ್ ಕಮಿಟಿ ಅಸ್ತಿತ್ವಕ್ಕೆ: 60 ವಾರ್ಡ್‌ಗಳ ಮಹತ್ವದ ಸಭೆ
ಬಜೆಟ್ ನಲ್ಲಿ ನೀವು ಒಂದು ಸಾವಿರ ಕೋಟಿ ರೂ.ನ್ನು ಮೇಕೆದಾಟು ಯೋಜನೆಗೆ ಮೀಸಲಿಟ್ಟಿದ್ದೀರಿ. ಆದರೆ ಇದರಿಂದ ಯಾವ ಪ್ರಯೋಜನವೂ ಇಲ್ಲ. ಪಾದಯಾತ್ರೆಗೆ ಹೆದರಿ ಸರಕಾರ ಹಣ ಮೀಸಲಿಟ್ಟಿದೆ ಎಂದು ಯಾರೊಬ್ಬರು ಭಾಷಣ ಶುರು ಮಾಡಿದ್ದಾರೆ. ಪಾದಯಾತ್ರೆಯಿಂದ ಏನು ಆಗಲ್ಲ. ಯಾರೂ ಕೇಳಲ್ಲ. ಪಾದಯಾತ್ರೆ ಮೂಲಕ ಭದ್ರ ಕೋಟೆಗೆ ಲಗ್ಗೆ ಇಟ್ಟಿದ್ದಾರೆಂದು ಬರೆಸಿಕೊಂಡುದ್ದಾರೆ. ಇದೆಲ್ಲ ನಾವು ಬಹಳ ನೋಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದರು.