ರಾಮನಗರ: ಒಂದು ಸಮಾಜವನ್ನು ಓಲೈಸಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ನಗರದಲ್ಲಿ ಕರಗ ಮಹೋತ್ಸವದ ಪ್ರಯುಕ್ತ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಿರ್ಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಕಾಂಗ್ರೆಸ್ ಸಾಫ್ಟ್ ಆಗಿದೆ ಎಂದು ಸುದ್ದಿಗಾರರು ಗಮನ ಸೆಳೆದಾಗ ಅವರು ಹೀಗೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ:ಸಂಸತ್ ಕಲಾಪಕ್ಕೆ ಅಡ್ಡಿ: ಕಾಂಗ್ರೆಸ್ ಪಕ್ಷದ ಮುಖವಾಡ ಬಯಲುಗೊಳಿಸಿ: ಸಂಸದರಿಗೆ ಮೋದಿ
ಆ ಪಕ್ಷದಲ್ಲೊಬ್ಬರು (ಕಾಂಗ್ರೆಸ್) ಸಿಎಂ ಸ್ಥಾನಕ್ಕೆ ಟವಲ್ ಹಾಸಿಕೊಂಡು ಕುಳಿತಿದ್ದಾರಲ್ಲ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನುದ್ದೇಶಿಸಿ ಟೀಕಾ ಪ್ರಹಾರ ನಡೆಸಿದ ಕುಮಾರಸ್ವಾಮಿ, ಯಡಿಯೂರಪ್ಪ ಒಬ್ಬ ಭ್ರಷ್ಟ ಸಿಎಂ ಆಗಿದ್ದರು, ಮುಂದೆಯೂ ಭ್ರಷ್ಟ ಮುಖ್ಯಮಂತ್ರಿಯೇ ಬರ್ತಾರೆ. ಬಿಜೆಪಿಯಿಂದ ಒಳ್ಳೆಯ ಮುಖ್ಯಮಂತ್ರಿಯನ್ನು ನೋಡೋಕೆ ಸಾಧ್ಯವಿಲ್ಲ ಎಂದು ಟೀಕೆ ಮಾಡ್ತಾರೆ. ಇನ್ನೊಂದು ಕಡೆ ಯಡಿಯೂರಪ್ಪ ಅವರ ನಿರ್ಗಮನದ ವಿಚಾರದಲ್ಲಿ ಬಿಜೆಪಿ ಪಕ್ಷದ ಹೈಕಮಾಂಡ್ ವಿರದ್ದವೂ ಮಾತನಾಡುತ್ತಾರೆ. ಇವೆಲ್ಲ ಆ ಸಮಾಜದ (ವೀರಶೈವ-ಲಿಂಗಾಯತ) ಅನುಕಂಪ ಗಿಟ್ಟಿಸಿಕೊಳ್ಳುವ ರಾಜಕೀಯ ಕುತಂತ್ರ ನಡೆಗಳು ಎಂದರು.
ಮುಂದಿನ ಮುಖ್ಯಮಂತ್ರಿಗಳು ಯಾರಾಗ ಬೇಕು ಎಂಬುದನ್ನು ಆ ಪಕ್ಷದ (ಬಿಜೆಪಿ) ಹೈಕಮಾಂಡ್ ನಿರ್ಧರಿಸುತ್ತದೆ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಮತ್ತೊಂದು ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.