Advertisement

ಕನ್ನಡ, ಕರ್ನಾಟಕಕ್ಕೆ ಅಪಚಾರ ಮಾಡಲು ಪಟ್ಟಭದ್ರ ಹಿತಾಸಕ್ತಿ ಕೆಲಸ ಮಾಡುತ್ತಿವೆ:ಎಚ್ ಡಿಕೆ ಕಿಡಿ

09:33 AM Jun 06, 2021 | Team Udayavani |

ಬೆಂಗಳೂರು: ‘ಕನ್ನಡ ಕೆಟ್ಟ ಭಾಷೆ’ ಎಂಬ ವಿಚಾರ ಗೂಗಲ್‌ನಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಅಮೆಜಾನ್ ಕರ್ನಾಟಕಕ್ಕೆ ಅವಮಾನಿಸಿದ ಘಟನೆಯೂ ಬಯಲಾಗಿರುವುದನ್ನು ಗಮನಿಸುತ್ತಿದ್ದರೆ, ಕನ್ನಡ, ಕರ್ನಾಟಕಕ್ಕೆ ಅಪಚಾರ ಮಾಡಲು ಪಟ್ಟಭದ್ರ ಹಿತಾಸಕ್ತಿ ಕೆಲಸ ಮಾಡುತ್ತಿರುವ ಅನುಮಾನ ಮೂಡುತ್ತಿದೆ. ಜನಸಮುದಾಯವೊಂದರ ಭಾವನೆಗಳ ಜೊತೆಗೆ ಆಟವಾಡುತ್ತಿರುವವರನ್ನು ಪತ್ತೆ ಹಚ್ಚುವ ಸಂದರ್ಭ ಈಗ ಸೃಷ್ಟಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಒಳ ಉಡುಪುಗಳ ಮೇಲೆ ಕನ್ನಡ ಧ್ವಜ ಬಣ್ಣ ಮತ್ತು ರಾಜ್ಯ ಸರ್ಕಾರದ ಲಾಂಛನವನ್ನು ಮುದ್ರಿಸಿದ ಅಮೆಜಾನ್ ನ ನಡೆಗೆ ಟ್ವಿಟರ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡದ ಧ್ವಜವನ್ನು ಅಪಮಾನಿಸಿದ ಕೆನಡಾದ ಅಮೆಜಾನ್ ಗೆ ಕನ್ನಡಿಗರು ಬಿಸಿ ಮುಟ್ಟಿಸಿದ್ದಾರೆ. ಅಮೆಜಾನ್‌ ತನ್ನ ತಪ್ಪು ಸರಿಪಡಿಸಿಕೊಂಡಿದೆ. ಕನ್ನಡವನ್ನು ಅವಮಾನಿಸಿದ ಗೂಗಲ್‌ಗೆ ಪಾಠ ಕಲಿಸಿದ್ದು, ಈಗ ಅಮೆಜಾನ್‌ಗೆ ಬುದ್ಧಿ ಕಲಿಸಿದ್ದರಲ್ಲಿ ಎದ್ದು ಕಾಣುವಂಥದ್ದು ಕನ್ನಡಿಗರ ‘ಅಭಿಮಾನ’. ಅದಕ್ಕಾಗಿ ಕನ್ನಡದ ಮನಸ್ಸುಗಳನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ:ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಜೀವ ಉಳಿಸಿತು14,000 ಕಿ.ಮೀ ದೂರದಿಂದ ಬಂದ ಫೋನ್ ಕರೆ..!

ಕನ್ನಡ, ಕರ್ನಾಟಕದ ವಿಚಾರದಲ್ಲಿ ಇತ್ತೀಚೆಗೆ ಬಹುರಾಷ್ಟ್ರೀಯ ಕಂಪನಿಗಳು ಅತ್ಯಂತ ಅಜಾಗರೂಕವಾಗಿ, ಅಸೂಕ್ಷ್ಮವಾಗಿ ವರ್ತಿಸುತ್ತಿವೆ. ಗೂಗಲ್ ನಂತರ ಈಗ ಅಮೆಜಾನ್ ಕೆನಡಾ ವಿಭಾಗ ನಿರ್ಲಕ್ಷ್ಯ ಮೆರೆದಿದೆ. ಈ ಸಂಸ್ಥೆಗಳು ಭಾಷೆ ಮತ್ತು ಭಾವನೆಗಳ ವಿಚಾರದಲ್ಲಿ ಯಾಕಿಂಥ ನಿರ್ಲಕ್ಷ್ಯ ವಹಿಸುತ್ತಿವೆ? ಈ ಬಗ್ಗೆ ಅಮೆಜಾನ್ ಪ್ರತಿಕ್ರಿಯೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Advertisement

ಬಾವುಟದ ಜೊತೆಗೇ, ಕರ್ನಾಟಕದ ರಾಜ ಲಾಂಛನವನ್ನೂ ಅಮೆಜಾನ್‌ ಅಮಾನಿಸಿದೆ. ಇದು ಸರ್ಕಾರಕ್ಕೆ ಮಾಡಲಾದ ಅಪಮಾನ. ಸರ್ಕಾರ ಸಂವಿಧಾನದ ಅಂಗ. ಹೀಗಾಗಿ ಅಮೆಜಾನ್ ನಿಂದ ಬಹುದೊಡ್ಡ ಅಪಚಾರವಾಗಿದೆ. ಅಮೆಜಾನ್‌ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವೇ ಎಂಬುದರತ್ತ ರಾಜ್ಯ ಸರ್ಕಾರ ಗಮನ ಹರಿಸಬೇಕು. ಮುಂದೆ ಇಂಥ ಮುಜುಗರ ತಪ್ಪಿಸಲು ಇದು ಅಗತ್ಯ. ಇಂಥ ಅಪಮಾನಗಳ ಮೂಲಕ ಕನ್ನಡಿಗರ ಸಹನೆ ಕೆಣಕುವ ಕೆಲಸ ಇಂಥ ಸಂಸ್ಥೆಗಳಿಂದ ಆಗುತ್ತಲೇ ಇವೆ. ಕನ್ನಡಿಗರ ಕೋಪದಿಂದ ಸಿಡಿಯುವ ಕಿಡಿಯಿಂದ ಅನಾಹುತಗಳು ಸಂಭವಿಸಿದರೆ, ಅದನ್ನು ತಾಳಿಕೊಳ್ಳುವ ಶಕ್ತಿ ಈ ಸಂಸ್ಥೆಗಳಿಗೆ ಉಳಿಯಲಾರದು. ಪರಿಸ್ಥಿತಿ ಅಲ್ಲಿಗೆ ಹೋಗುವ ಮೊದಲು ಅಮೆಜಾನ್ ಜಾಗತಿಕವಾಗಿ ಕ್ಷಮೆ ಕೋರಬೇಕು. ತಪ್ಪಿತಸ್ಥರನ್ನು ಹಿಡಿದುಕೊಡಬೇಕು ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next