Advertisement
ರಿಂಗ್ ರಸ್ತೆಯ ಉತ್ತನಹಳ್ಳಿ ಮೈದಾನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಾಮುಂಡೇಶ್ವರಿ ಸನ್ನಿಧಿಯಲ್ಲಿಯೇ ಸಮಾರೋಪ ಆಯೋಜಿಸಲು ಮೂರು ತಿಂಗಳ ಹಿಂದೆಯೇ ನಿಶ್ಚಯಿಸಲಾಗಿತ್ತು. 100 ಎಕರೆ ವಿಸ್ತಾರದ ಮೈದಾನದಲ್ಲಿ 10 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು, ಕಾರ್ಯಕರ್ತರು ಸೇರಲಿದ್ದಾರೆ’ ಎಂದರು.
Related Articles
Advertisement
ಕಾಂಗ್ರೆಸ್‌ನದು ಡ್ಯೂಪ್ಲಿಕೇಟ್ ಕಾರ್ಡ್: ‘ಕಾಂಗ್ರೆಸ್ ಜನರಿಗೆ ನೀಡುತ್ತಿರುವ ಗ್ಯಾರೆಂಟಿ ಕಾರ್ಡ್‌ಗಳು ನಕಲಿ. ಸುಳ್ಳಿನ ಭರವಸೆಯಾಗಿದ್ದು, ರಾಜ್ಯದ ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಕೊಡುವುದು ಕಷ್ಟ. ಅದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ’ ಎಂದು ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
‘ಕಾಂಗ್ರೆಸ್ ಅಧಿಕಾರದಲ್ಲಿರುವ ಛತ್ತೀಸಗಡ, ರಾಜಸ್ಥಾನದಲ್ಲಿ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೊಳಿಸಬೇಕಿತ್ತಲ್ಲವೇ? ಬಿಜೆಪಿಯ ಯೋಜನೆಗಳೂ ಕೂಡ ಜಾಹೀರಾತುಗಳಲ್ಲಿ ಕಾಣುತ್ತವೆ. ಅವು ಜನರಿಗೆ ತಲುಪಿವೆಯೇ’ ಎಂದು ಪ್ರಶ್ನಿಸಿದರು.
‘ವಿಜಯಸಂಕಲ್ಪ ಯಾತ್ರೆಯಲ್ಲಿ ಅಧಿಕಾರಿಗಳಿಂದ ಜನರನ್ನು ಕರೆಸುತ್ತಿದ್ದಾರೆ. ನಿಜವಾದ ಫಲಾನುಭವಿಗಳನ್ನು ಕರೆತರುತ್ತಿಲ್ಲ. ಹಣ ಕೊಟ್ಟು ಜನ ಸೇರಿಸುತ್ತಿದ್ದಾರೆ. ಕಂದಾಯ ಸಚಿವ ಆರ್.ಅಶೋಕ ಅವರು ಬಸವರಾಜ ಬೊಮ್ಮಾಯಿ ಅಂಥ ಮುಖ್ಯಮಂತ್ರಿ ನೋಡಿಲ್ಲ ಎಂದು ಹೇಳಿದ್ದಾರೆ. ಇದು ವ್ಯಂಗ್ಯವೋ? ಇನ್ನಾವ ಅರ್ಥದಲ್ಲಿ ಹೇಳಿದ್ದಾರೊ ಗೊತ್ತಿಲ್ಲ’ ಎಂದು ಟೀಕಿಸಿದರು.
ಇದನ್ನೂ ಓದಿ:ಸಿದ್ದರಾಮಯ್ಯಗೆ ಆಳಂದ ಕ್ಷೇತ್ರ ಬಿಟ್ಟು ಕೊಡುವೆ: ಬಿ.ಆರ್.ಪಾಟೀಲ್
‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ, ಎರಡು ಬಾರಿ ಉಪ ಮುಖ್ಯಮಂತ್ರಿ, ಹದಿಮೂರು ಬಾರಿ ಬಜೆಟ್ ಮಂಡಿಸಿರುವ ಮಹಾನ್ ನಾಯಕ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರ ಹುಡುಕಾಡುವುದನ್ನು ನೋಡಿದರೆ ಅನುಕಂಪ ಬರುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಭ್ರಷ್ಟಾಚಾರಚಾರ ಮುಕ್ತ ಆಡಳಿತ ನೀಡುತ್ತೇವೆಂದು ಹೇಳುವ ಕಾಂಗ್ರೆಸ್ಸಿಗರಿಗೆ ಅರ್ಕಾವತಿ ಪ್ರಕರಣ ನೆನಪಿಲ್ಲವೇ? ಕಾಂಗ್ರೆಸ್ ಹಾಗೂ ಬಿಜೆಪಿಗಳೆರಡೂ ಆಂತರಿಕ ಹೊಂದಾಣಿಕೆ ಮಾಡಿಕೊಂಡಿವೆ. ಮುಖ್ಯಮಂತ್ರಿಗಳೇ ಅರ್ಕಾವತಿ ಹಗರಣ ₹ 8 ಸಾವಿರ ಕೋಟಿ ಎಂದು ಹೇಳುತ್ತಾರೆ. ಆದರೆ, ಮೂರುವರೆ ವರ್ಷ ಅಧಿಕಾರದಲ್ಲಿದ್ದರೂ ಯಾವುದೇ ಕ್ರಮವಹಿಸಿಲ್ಲ’ ಎಂದು ಹೇಳಿದರು.
‘ಚುನಾವಣೆಗೂ ಮುನ್ನ ಒಕ್ಕಲಿಗರಿಗೆ ಎಷ್ಟು ಮೀಸಲಾತಿ ಕೊಡುತ್ತೀರೆಂದು ಘೋಷಣೆ ಮಾಡಿ ಎಂದು ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ. ಅಧಿಕಾರಕ್ಕೆ ಬಂದರೆ ಒಕ್ಕಲಿಗರಷ್ಟೇ ಅಲ್ಲದೆ ಎಲ್ಲ ಸಮಾಜಗಳಿಗೂ ನಿಯಮಾವಳಿ ಹಾಗೂ ಕಾನೂನು ಬದ್ಧವಾಗಿ ಮೀಸಲಾತಿ ನೀಡಲಾಗುವುದು. ಅನ್ಯಾಯ ಸರಿಪಡಿಸಲಾಗುವುದು’ ಎಂದು ಭರವಸೆ ನೀಡಿದರು.
‘ಉರಿಗೌಡ, ದೊಡ್ಡ ನಂಜೇಗೌಡ ಹೆಸರಿನಲ್ಲಿ ಹುಡುಗಾಟಿಕೆ ಆಡುತ್ತಿದ್ದ ಬಿಜೆಪಿಗರಿಗೆ ಚುಂಚಶ್ರೀಗಳು ಎಚ್ಚರಿಕೆ ಕೊಟ್ಟಿರುವುದಲ್ಲದೇ ವಿವಾದಕ್ಕೆ ಇತಿಶ್ರೀ ಹಾಡಿದ್ದಾರೆ. ಅವರನ್ನು ಅಭಿನಂದಿಸುವೆ’ ಎಂದರು.
‘ಕಾಂಗ್ರೆಸ್, ಬಿಜೆಪಿ ಬಿ ಟೀಂ ಜೆಡಿಎಸ್ ಅಲ್ಲ. ನಾವು ಕನ್ನಡಿಗರ ಬಿ ಟೀಂ. ನಾನು ಜನರ ಕಷ್ಟಕ್ಕೆ ಕಣ್ಣೀರು ಹಾಕುವುದನ್ನೇ ಕೆಲವರು ಬಲಹೀನತೆ ಎನ್ನುತ್ತಾರೆ. ಹೃದಯ, ಮಾನವೀಯತೆ ಇದ್ದವರಿಗೆ ಬಡವರ ಕಷ್ಟ ಕೇಳಿ ಕಣ್ಣೀರು ಬರುತ್ತದೆ. ಟೀಕೆ ಮಾಡುವವರಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದೇವೇಗೌಡ ರೋಡ್ ಶೋ: ‘ಸಮಾರೋಪದ ದಿನದಂದೇ ಎಚ್.ಡಿ.ದೇವೇಗೌಡ ಅವರು ಮೈಸೂರಿನ ಶ್ರೀರಾಂಪುರದಿಂದ ಸಮಾವೇಶದ ಸ್ಥಳದವರೆಗೆ 3 ಕಿ.ಮೀ ರೋಡ್ ಶೋ ನಡೆಸಲಿದ್ದಾರೆ’ ಎಂದು ಕುಮಾರಸ್ವಾಮಿ ಹೇಳಿದರು.
ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ಕೆ.ಮಹದೇವ್, ಮುಖಂಡರಾದ ಕೆ.ವಿ.ಮಲ್ಲೇಶ್, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಸ್ವಾಮಿ, ನಗರ ಘಟಕದ ಅಧ್ಯಕ್ಷ ಚಲುವೇಗೌಡ, ಮುಖಂಡರಾದ ಪ್ರೇಮಾ ಶಂಕರೇಗೌಡ, ಆರ್.ಲಿಂಗಪ್ಪ, ಎಂ.ಜೆ.ರವಿಕುಮಾರ್, ಎಸ್ ಬಿಎಂ ಮಂಜು ಇದ್ದರು.