Advertisement

ರಾಜ್ಯದ ಪರಿಸ್ಥಿತಿ ಬಗ್ಗೆ ಪ್ರಧಾನಿಗಳಿಗೆ ಮನದಟ್ಟು ಮಾಡಿ: ಬಿಎಸ್ ವೈ ಗೆ ಕುಮಾರಸ್ವಾಮಿ ಸಲಹೆ

08:29 AM May 12, 2020 | keerthan |

ಬೆಂಗಳೂರು: ಕೋವಿಡ್-19 ವೈರಸ್ ನಿಯಂತ್ರಣ, ಲಾಕ್ ಡೌನ್ ಕುರಿತಂತೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿವಿಧ ರಾಜ್ಯಗಳ ಸಿಎಂಗಳ ಜೊತೆ ಚರ್ಚೆ ನಡೆಸಲಿದ್ದಾರೆ. ಇದರಲ್ಲಿ ರಾಜ್ಯದ ಸಿಎಂ ಬಿ ಎಸ್ ಯಡಿಯೂರಪ್ಪ ಕೂಡಾ ಭಾಗವಹಿಸುತ್ತಿದ್ದಾರೆ. ಈ ಸಭೆಯಲ್ಲಿ ಬಿಎಸ್ ವೈ ಅವರು ರಾಜ್ಯಕ್ಕೆ ಕೋವಿಡ್-19 ಪ್ಯಾಕೇಜ್ ನೀಡುವಂತೆ ಮೋದಿ ಅವರನ್ನು ಆಗ್ರಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಸರ್ಕಾರ ಪಿಎಂ ಕೇರ್ ನಿಧಿ ಸ್ಥಾಪಿಸಿದೆ. ಇದಕ್ಕೆ ಸಂಸದರಾದಿಯಾಗಿ, ಉದ್ಯಮಿಗಳು, ನಾಗರಿಕರು ಉದಾರ ದೇಣಿಗೆ ನೀಡಿದ್ದಾರೆ. ಹೀಗಿದ್ದೂ ಕೇಂದ್ರದಿಂದ ರಾಜ್ಯಕ್ಕೆ ಈ ವರೆಗೆ ಕೋವಿಡ್ ಎದುರಿಸಲು ಸೂಕ್ತ ಆರ್ಥಿಕ ನೆರವು ಬಂದಿಲ್ಲ ಎಂಬುದನ್ನು ಮೋದಿ ಅವರಿಗೆ ಬಿಎಸ್ ವೈ ಮನನ ಮಾಡಿಕೊಡಬೇಕು‌ ಎಂದಿದ್ದಾರೆ.

ಕಳೆದ 3 ದಿನಗಳ ಅಂಕಿಅಂಶ ಗಮನಿಸಿದರೆ ರಾಜ್ಯದಲ್ಲಿ ಕೋವಿಡ್ -19 ಹೆಚ್ಚುತ್ತಿರುವಂತೆ ಕಾಣುತ್ತಿದೆ. ಹೀಗಾಗಿ ವೈದ್ಯಕೀಯ ಕ್ರಮಗಳನ್ನು ಬಿಗಿಗೊಳಿಸಬೇಕಿದೆ. ಜೊತೆಗೆ ಲಾಕ್ ಡೌನ್ ನಿಂದ ನಷ್ಟಕ್ಕೊಳಗಾಗಿರುವ ಜನರಿಗೆ ಆರ್ಥಿಕ ಪರಿಹಾರ ನೀಡಬೇಕಿದೆ. ದೊಡ್ಡ ಮಟ್ಟದ ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ಕೊಡುವ ಕರ್ನಾಟಕದಂತಹ ದೊಡ್ಡ ರಾಜ್ಯಕ್ಕೆ ಸೂಕ್ತ ಪ್ಯಾಕೇಜ್ ಅತ್ಯಗತ್ಯ ಎಂದಿದ್ದಾರೆ.

ಕೋವಿಡ್ ಪ್ಯಾಕೇಜ್ ಜೊತೆಗೆ ಜಿಎಸ್ ಟಿ ಬಾಕಿ, ನೆರೆ-ಬರ ಪರಿಹಾರ ಸೇರಿದಂತೆ ಕೇಂದ್ರದಿಂದ ಬರಬೇಕಾದ ಇತರ ಬಾಕಿ ಹಣದ ಬಗ್ಗೆಯೂ ಬಿಎಸ್ವೈ ಮೋದಿ ಜೊತೆಗಿನ ಸಭೆಯಲ್ಲಿ ಕೇಳಬೇಕು. ಲಾಕ್ ಡೌನ್ ನಿಂದಾಗಿ ರಾಜ್ಯ ಹಣಕಾಸಿನ ತೊಂದರೆ ಅನುಭವಿಸುತ್ತಿದೆ. ಈ ಹೊತ್ತಲ್ಲಿ ಕೇಂದ್ರದಿಂದ ಸೂಕ್ತ ನೆರವು ಬಾರದ ಹೊರತು ಕೋವಿಡ್ ನಿಯಂತ್ರಣ ಕಷ್ಟವಾಗಲಿದೆ ಎಂದು ಎಚ್ ಡಿಕೆ ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next