ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಜೆಡಿಎಸ್- ಬಿಜೆಪಿ ನಾಯಕರ ಈ ಭೇಟಿಯೂ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದು, ಚರ್ಚೆ ಆರಂಭವಾಗಿದೆ.
ಭೇಟಿಯ ಬಳಿಕ ಉಭಯ ನಾಯಕರೂ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಯಾವುದೇ ರಾಜಕೀಯ ಚರ್ಚೆಯಾಗಿಲ್ಲ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ರಾಜಕೀಯ ಬೆಳವಣಿಗೆಯ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ನಮ್ಮದು ಹಳೆಯ ಸ್ನೇಹ. ದೇವೇಗೌಡರು ಹಾಗೂ ಎಸ್.ಆರ್ ಬೊಮ್ಮಾಯಿ ಸ್ನೇಹಿತರು, ಆ ಕಾಲದಿಂದಲೂ ನಮ್ಮ ಸ್ನೇಹ ಇದೆ. ಒಂದೇ ಕುಟುಂಬದ ರೀತಿ ಇದ್ದೇವೆ ಎಂದರು.
ಇದನ್ನೂ ಓದಿ:ನಕಲಿ ವೋಟರ್ ಐಡಿ ಪತ್ತೆ ಪ್ರಕರಣ: ಶಾಸಕ ಮುನಿರತ್ನಗೆ ರಿಲೀಫ್
ಭೇಟಿ ವೇಳೆ ಪಕ್ಷಗಳ ರಾಜಕೀಯ ಚರ್ಚೆ ಆಗಿಲ್ಲ. ಬೊಮ್ಮಾಯಿ ಅವರನ್ನು ಜೆಡಿಎಸ್ ಪಕ್ಷ ಸೇರ್ಪಡೆಗೆ ಮನವೊಲಿಸಲೂ ಬಂದಿಲ್ಲ. ನನ್ನ ಕ್ಷೇತ್ರದ ಕೆಲ ವಿಚಾರ ಚರ್ಚೆ ಮಾಡಿದ್ದೇವೆ ಅಷ್ಟೇ. ಅದು ಬಿಟ್ಟು ಬೇರೆ ಏನು ಚರ್ಚೆಯಾಗಿಲ್ಲ. ಯಾವುದೇ ರಾಜಕೀಯ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಕಾಪು ತಾಲೂಕಿನ 16 ಗ್ರಾ.ಪಂಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ
ಗೃಹ ಸಚಿವ ಬಸವರಾಜ್ ಬೊಮ್ಮಯಿ ಮಾತನಾಡಿ, ಯಾವುದೇ ರಾಜಕೀಯ ವಿಚಾರ ಚರ್ಚೆಯಾಗಿಲ್ಲ. ಕುಮಾರಸ್ವಾಮಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು.
ಕುಮಾರಸ್ವಾಮಿ ಮತ್ತು ನಾನು ತುಂಬಾ ಹಳೇ ಸ್ನೇಹಿತರು. ನನ್ನ ತಂದೆ ಕಾಲದಿಂದಲೇ ದೇವೇಗೌಡರ ಕುಟುಂಬದ ಜೊತೆ ಒಳ್ಳೆಯ ಬಾಂಧವ್ಯವಿದೆ. ನಿನ್ನೆಯೇ ನನ್ನ ಮನೆಗೆ ಬರುತ್ತೇನೆ ಎಂದಿದ್ದರು. ಕ್ಷೇತ್ರದ ಅಭಿವೃದ್ಧಿ ಸಂಬಂಧಪಟ್ಟಂತೆ ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.