ಎಚ್.ಡಿ.ಕೋಟೆ : ಆದಿವಾಸಿ ತುಂಬು ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಮನೆ ಬಾಗಿಲಿಗೇ ಆ್ಯಂಬುಲೆನ್ಸ್ ಸಹಿತ ತಾಲೂಕು ಆರೋಗ್ಯಾಧಿಕಾರಿ (ಟಿಎಚ್‌ಒ), ನರ್ಸ್, ಆರೋಗ್ಯ ಸಿಬ್ಬಂದಿ ಧಾವಿಸಿದರೂ ಆಕೆ, ಚಿಕಿತ್ಸೆ ನಿರಾಕರಿಸಿ ಬಾಗಿಲು ಹಾಕಿಕೊಂಡು ಮನೆಯಲ್ಲೇ ಹೆರಿಗೆಯಾಗಿರುವ ಘಟನೆ ತಾಲೂಕಿನ ಹಿರೇಹಳ್ಳಿ ಹಾಡಿಯಲ್ಲಿ ಜರುಗಿದೆ.
ಖುದ್ದ ತಾಲೂಕು ಆರೋಗ್ಯಾಧಿಕಾರಿಗಳೇ ತಾಸುಗಟ್ಟಲೆ ಮನೆ ಹೊಸ್ತಿಲಿನಲ್ಲೇ ನಿಂತರೂ ಆಕೆ ಬಾಗಿಲನ್ನು ತೆರೆಯಲೇ ಇಲ್ಲ. ಹಿರೇಹಳ್ಳಿ ಹಾಡಿ ಸುಧಾಕರ ಪತ್ನಿ ರತಿ ಎಂಬಾಕೆಯೇ ಮನೆಯಲ್ಲಿಯೇ ಹೆರಿಗೆ ಮಾಡಿಕೊಂಡ ಮಹಿಳೆ. ರತಿಗೆ ಈಗಾಗಲೇ 4 ಮಕ್ಕಳಿದ್ದು, 5ನೇ ಮಗುವಿಗೆ ಗರ್ಭ ಧರಿಸಿದ್ದರು. ತುಂಬು ಗರ್ಭಿಯಾಗಿದ್ದ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ
ವಿಷಯ ತಿಳಿದ ಆ ಭಾಗದ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಹಾಡಿಗೆ ಧಾವಿಸಿ, ಆಸ್ಪತ್ರೆಗೆ ಬರುವಂತೆ ಗರ್ಭಿಣಿ ರತಿಗೆ ಮನವಿ ಮಾಡಿಕೊಂಡರೂ ಆಕೆ ಒಪ್ಪಿಕೊಳ್ಳಲೇ ಇಲ್ಲ. ಆಗ ಈ ವಿಚಾರವನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಅವರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಕಾದು ಸುಸ್ತಾದ ವೈದ್ಯರು: ಕೂಡಲೇ ಡಾ|ರವಿಕುಮಾರ್ ಮತ್ತು ತಂಡವು ಆ್ಯಂಬುಲೆನ್ಸ್ ಸಹಿತ ಹಿರೇಹಳ್ಳಿ ಹಾಡಿಗೆ ಭೇಟಿ ನೀಡುವಷ್ಟರಲ್ಲಿ ರತಿಗೆ ಮನೆಯಲ್ಲೇ ಸುಲಲಿತವಾಗಿ ಹೆರಿಗೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೂ ಮನೆಯ ಹೆರಿಗೆ ಸುರಕ್ಷಿತವಲ್ಲ, ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುವಂತೆ ಆಸ್ಪತ್ರೆ ಸಿಬ್ಬಂದಿ ಪರಿಪರಿಯಾಗಿ ವಿನಂತಿಸಿಕೊಂಡರೂ ಆಕೆ ಸುತಾರಂ ಒಪ್ಪದೇ ಮನೆ ಬಾಗಿಲನ್ನು ಭದ್ರಪಡಿಸಿಕೊಂಡಿದ್ದಾರೆ. ಟಿಎಚ್‌ಒ ಡಾ| ರವಿಕುಮಾರ್, ಉದ್ಭವ ಸಂಸ್ಥೆಯ ವೈದ್ಯೆ ಡಾ|ಕವಿತಾ, ನರ್ಸ್ ಹಾಗೂ ಆಶಾ ಕಾರ್ಯಕರ್ತೆ ತಾಸುಗಟ್ಟಲೇ ಕಾದು ಕುಳಿತರೂ ರತಿ ಮಾತ್ರ ಮನೆ ಬಾಗಿಲನ್ನು ತೆರೆಯಲೇ ಇಲ್ಲ. ತುರ್ತು ವಾಹನದೊಂದಿಗೆ ಮನೆಯ ಬಳಿ ಕಾದೂಕಾದೂ ಸುಸ್ತಾದ ವೈದ್ಯರು ಕಡೆಗೆ
ಮನೆಯ ಕಿಟಕಿ ಮೂಲಕ ಬಾಣಂತಿ ರತಿಗೆ ಔಷಧಗಳನ್ನು ನೀಡಿ ಅದನ್ನು ಬಳಕೆ ಮಾಡುವ ವಿಧಾನ ತಿಳಿಸಿ ವಾಪಸ್ ತೆರಳಿದರು. ಹೆರಿಗೆ ಬಳಿಕ ತಾಯಿ-ಮಗು ಆರೋಗ್ಯವಾಗಿದ್ದಾರೆ.
ಸವಾಲು: ಅದಿವಾಸಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ಹಲವು ಯೋಜನೆಗಳನ್ನೂ ರೂಪಿಸಿ ದ್ದರೂ ಇವುಗಳನ್ನು ಸದುಪಯೋಗ ಪಡೆಯುತ್ತಿಲ್ಲ. ಅನಕ್ಷರತೆ, ಮೌಡ್ಯದಿಂದ ಆರೋಗ್ಯ ಸೇವೆಯನ್ನೂ ಪಡೆಯಲು ಹಿಂದೇ ಟು ಹಾಕುತ್ತಿದ್ದಾರೆ. ಬಹುತೇಕ ಹಾಡಿಗಳಲ್ಲಿ ಇದೇ ಮನಸ್ಥಿತಿ ಇರುವುದರಿಂದ ಕೋವಿಡ್ ಲಸಿಕೆ ನೀಡುವುದು ಆರೋಗ್ಯ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ.
ಇದನ್ನೂ ಓದಿ : ಪದವಿ ಪೂರ್ವ ಕಾಲೇಜುಗಳಿಗೆ ಫೆ.15ರವರೆಗೆ ರಜೆ ವಿಸ್ತರಣೆ: ಆದೇಶ
– ಎಚ್. ಬಿ. ಬಸವರಾಜ್