Advertisement

H.D. Kumaraswamy ಕುಟುಂಬದ ಬೇನಾಮಿ ಆಸ್ತಿಗಳೆಷ್ಟು?: ಡಿಕೆಶಿ

11:13 PM Aug 04, 2024 | Team Udayavani |

ರಾಮನಗರ: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಕುಟುಂಬದ ಸದಸ್ಯರ ಬೇನಾಮಿ ಆಸ್ತಿಗಳೆಷ್ಟು? ಆಲೂಗಡ್ಡೆ, ಈರುಳ್ಳಿಯಲ್ಲಿ ಎಷ್ಟು ಸಂಪಾದನೆಯಾಗಿದೆ ಎಂಬುದನ್ನು ಉತ್ತರಿಸಬೇಕೆಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆಗ್ರಹಿಸಿದರು.

Advertisement

ಬಿಜೆಪಿ-ಜೆಡಿಎಸ್‌ ಪಾದಯಾತ್ರೆಗೆ ಪ್ರತಿಯಾಗಿ ಜನಾಂದೋಲನ ಸಭೆ ನಡೆಸಿ ಮೈತ್ರಿ ನಾಯಕರಿಗೆ ದಿನಕ್ಕೊಂದು ಪ್ರಶ್ನೆ ಕೇಳುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌, ಚನ್ನಪಟ್ಟಣದಲ್ಲಿ ರವಿವಾರ ನಡೆದ ಜನಾಂದೋಲನ ಸಭೆಯುದ್ದಕ್ಕೂ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ಧಾಳಿ ನಡೆಸಿದರು.

ಪಾಪ ವಿಮೋಚನೆ ಯಾತ್ರೆ
ಮೈತ್ರಿ ಕೂಟದವರು ನಡೆಸುತ್ತಿರು ವುದು ಪಾಪ ವಿಮೋಚನೆ ಯಾತ್ರೆ. ಎರಡೂ ಪಕ್ಷದವರು ತಮ್ಮ ಅವಧಿಯಲ್ಲಿ ಸೃಷ್ಟಿಸಿದ ಪಾಪದ ಕೂಸಿಗೆ ಉತ್ತರ ನೀಡಲು ನಾವು ಜನಾಂದೋಲನ ನಡೆಸುತ್ತಿದ್ದೇವೆ. ನಾವು ಕೇಳಿರುವ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಬೇಕಿರುವುದು ಮೈತ್ರಿ ಕೂಟದ ಧರ್ಮ ಎಂದರು.

ಭಾಷಣದುದ್ದಕ್ಕೂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿ, ಮಣ್ಣಿನ ಮಗ ನೀನಲ್ಲ: ನಿನ್ನ ತಂದೆ. ನೀನು ಪ್ಯಾಂಟ್‌ ಬಿಚ್ಚಿ ಇದೀಗ ಪಂಚೆ ಉಟ್ಟುಕೊಂಡು ಮಣ್ಣಿನ ಮಗ ಎನ್ನುತ್ತಿದ್ದೀಯಾ. ನಿಮ್ಮ ಡಿನೋಟಿಫಿಕೇಷನ್‌ ಹಗರಣ, ಕುಟುಂಬದ ಆಸ್ತಿ ವಿವರವನ್ನು ನಾನು ಇನ್ನೂ ಬಿಚ್ಚಿಲ್ಲಾ ಸದ್ಯದಲ್ಲೇ ಬಿಚ್ಚುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ 6 ವರ್ಷ ಶಾಸಕನಾಗಿದ್ದೆಯಲ್ಲಾ, ಎಷ್ಟು ಜನರಿಗೆ ಬಗರ್‌ಹುಕುಂ ಸಮಿತಿಯಲ್ಲಿ ಜಮೀನು ಮಂಜೂರು ಮಾಡಿದೆ? 22 ಸಾವಿರ ಜನತೆ ನನಗೆ ಅರ್ಜಿ ನೀಡಿ ಮನೆ ಇಲ್ಲ, ನಿವೇಶನ ಇಲ್ಲ, ಜಮೀನು ಇಲ್ಲ ಎಂದು ಕೇಳಿಕೊಂಡಿದ್ದಾರೆ. ಇಷ್ಟು ಜನರಿಗೆ ನೀನು ಅಧಿ ಕಾರದಲ್ಲಿದ್ದಾಗ ಏನು ಮಾಡಿದೆ ಎಂದು ಪ್ರಶ್ನಿಸಿದರು.

Advertisement

ನನ್ನ ಆತ್ಮ ವಿಶ್ವಾಸ ನಿನಗೇ ಗೊತ್ತು
ನಮ್ಮ ಇಡೀ ಕುಟುಂಬದ ಮೇಲೆ ನಿನ್ನ ಅಣ್ಣ ಬಾಲಕೃಷ್ಣೇಗೌಡ ಕೇಸ್‌ ಹಾಕಿಸಿದ. ನೀನು ನನ್ನ ಹೆಂಡತಿ, ತಮ್ಮ ಸೇರಿ ನಮ್ಮ ಕುಟುಂಬದ ಮೇಲೆ ಕೇಸ್‌ ಹಾಕಿಸಿದೆ. ನಾನು ಜೈಲಿನಲ್ಲಿದ್ದಾಗ ನೀನೇಬಂದು ನೋಡಿದೆ ನನ್ನ ಆತ್ಮವಿಶ್ವಾಸ ಹೇಗಿತ್ತೆಂದು. ನನ್ನ ಮೇಲಿನ ಎಲ್ಲ ಕೇಸುಗಳನ್ನು ಸುಪ್ರಿಂ ಕೋರ್ಟ್‌ ವಜಾ ಮಾಡಿದೆ ಎಂಬುದು ಕುಮಾರಣ್ಣನಿಗೆ ಗೊತ್ತಿರ ಲಿಲ್ಲ ಎಂದು ವಾಗ್ಧಾಳಿ ನಡೆಸಿದರು.

ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿರುವ 25 ಹಗರಣಗಳ ಪುಸ್ತಕ ಬಿಡುಗಡೆ ಮಾಡುತ್ತೇನೆ. ಕುಮಾರ ಸ್ವಾಮಿ ಅವರ ಎಲ್ಲ ಹಗರಣಗಳನ್ನು ಬಯಲು ಮಾಡುತ್ತೇನೆ ಎಂದರು.

ಎಚ್‌ಡಿಕೆಗೆ ಓಪನ್‌ ಚಾಲೆಂಜ್‌
ಕುಮಾರಸ್ವಾಮಿ ನಿನಗೆ ಓಪನ್‌ ಚಾಲೆಂಜ್‌ ಮಾಡುತ್ತಿದ್ದೇನೆ. ಈಗಾಗಲೇ ನನ್ನ ವಿರುದ್ಧ ಒಂದು ಬಾರಿ ಫೈಟ್‌ ಮಾಡಿ ಸೋತಿದ್ದೀಯಾ. ನನ್ನ ವಿರುದ್ಧ ಫೈಟ್‌ ಮಾಡುವುದು ಸರಿಯಲ್ಲ. ಬಾ ಮತ್ತೂಮ್ಮೆ ಫೈಟ್‌ ಮಾಡೋಣ ಎಂದು ಶಿವಕುಮಾರ್‌ ಪಂಥಾಹ್ವಾನ ನೀಡಿದರು. ನಿನ್ನ ನವರಂಗಿ ಆಟವನ್ನು ಎಲ್ಲರೂ ನೋಡಲಿ ಎಂದು ಲೇವಡಿ ಮಾಡಿದರು.

ಕುಮಾರಸ್ವಾಮಿ ಜತೆ ನಾನು ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಇದಕ್ಕೆ ವೇದಿಕೆ ಬೇಕಿದೆ. ಇದಕ್ಕಾಗಿ ಅಸೆಂಬ್ಲಿಗೆ ನಿನ್ನ ಸೋದರನ ಕೈಯಲ್ಲಿ ದಾಖಲೆ ಕೊಟ್ಟು ಕಳುಹಿಸು, ಚರ್ಚೆ ಮಾಡುತ್ತೇನೆ ಎಂದಿದ್ದೇನೆ. ಮಾಧ್ಯಮಗಳ ಮುಂದೆ ಮುಖಾಮುಖಿ ಚರ್ಚೆಗೆ ನಾನು ಸಿದ್ಧವಿದ್ದೇನೆ.
– ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next