ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್ ಭೇಟಿ ಸಂದರ್ಭದಲ್ಲಿ ಆದ ಭದ್ರತಾ ಲೋಪದ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ” ನಾವು ಇತಿಹಾಸದಿಂದ ಪಾಠ ಕಲಿಯಬೇಕಿದೆ” ಎಂದು ವ್ಯಾಖ್ಯಾನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ” ಪಂಜಾಬ್ ನಲ್ಲಿ ಬುಧವಾರ ನಡೆದಿರುವುದು ಅತ್ಯಂತ ದುರಾದೃಷ್ಟಕರ ಘಟನೆ. ಪ್ರಧಾನಿ ಭದ್ರತೆ ವಿಚಾರದಲ್ಲಿ ಈ ವಿವಾದ ಸೃಷ್ಟಿ ಯಾಗಬಾರದಿತ್ತು. ದೇಶದ ಅತ್ಯುನ್ನತ ವ್ಯಕ್ತಿಯ ಭದ್ರತೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಕ್ಷಣಲ್ಲೂ ಲೋಪ ಸರಿಯಲ್ಲ” ಎಂದು ಹೇಳಿದ್ದಾರೆ.
ನಾವು ಇತಿಹಾಸದಿಂದ ಪಾಠ ಕಲಿಯಬೇಕಿದೆ ಎಂದು ಉಲ್ಲೇಖಿಸುವ ಮೂಲಕ ದೇವೇಗೌಡರು ಪರೋಕ್ಷವಾಗಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿದ್ದಾರೆ. ಪ್ರಧಾನಿ ಭದ್ರತಾ ಲೋಪದ ಬಗ್ಗೆ ಈಗ ದೇಶಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿದೆ.
ಪಂಜಾಬ್ ನ ಫಿರೋಜ್ ಪುರದಲ್ಲಿ ಆಯೋಜಿಸಿದ್ದ ಬಿಜೆಪಿ ರ್ಯಾಲಿಗೆ ಆಗಮಿಸುವುದಕ್ಕೂ ಮುನ್ನ ಬಟಿಂಡಾ ವಿಮಾನ ನಿಲ್ದಾಣದಿಂದ ಹುಸೈನ್ ನಿವಾಲಕ್ಕೆ ಹೋಗುವ ಸಂದರ್ಭದಲ್ಲಿ ಭದ್ರತಾ ಲೋಪವಾಗಿತ್ತು. ಪ್ರಧಾನಿ ಪ್ರಯಾಣಿಸುವ ಮಾರ್ಗದಲ್ಲಿ ರೈತರು ಪ್ರತಿಭಟನೆ ನಡೆಸಿದ್ದರಿಂದ ಸುಮಾರು 20 ನಿಮಿಷಗಳ ಕಾಲ ಪ್ರಧಾನಿ ಭದ್ರತಾ ಪಡೆಯೊಂದಿಗೆ ಮೇಲುಸೇತುವೆ ಮೇಲೆ ಕಾಯುವಂತಾಗಿತ್ತು. ಈ ವಿಚಾರ ಕಾಂಗ್ರೆಸ್ ಬಿಜೆಪಿ ಮಧ್ಯೆ ಭಾರಿ ವಾಗ್ವಾದಕ್ಕೆ ಕಾರಣವಾಗಿದೆ. ಈ ಮಧ್ಯೆ ದೇವೇಗೌಡರು ಘಟನೆಯನ್ನು ಖಂಡಿಸಿದ್ದಾರೆ.
ಇದೊಂದು ರಾಜಕೀಯ ಪ್ರೇರಿತ ಷಡ್ಯಂತ್ರ ಅಷ್ಟೇ ಅಲ್ಲ, ಅತ್ಯಂತ ನೀಚತನದ ಪರಮಾವಧಿ, ಧಿಕ್ಕಾರವಿರಲಿ ಇಂತಹ ರಾಜಕಾರಣಕ್ಕೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಪ್ರಧಾನಿ ಮೋದಿಗೆ ಎದುರಾದ ಭದ್ರತಾ ಲೋಪ ಸಂಬಂಧ ಕಿಡಿಕಾರಿದ್ದಾರೆ.