Advertisement

ಅಮೆರಿಕದಲ್ಲೇ ಎಚ್‌-1ಬಿ ವೀಸಾ ನವೀಕರಣ ವ್ಯವಸ್ಥೆ! ಹಳೆಯ ನಿಯಮ ಮರುಜಾರಿಗೆ ಚಿಂತನೆ

09:15 PM Feb 10, 2023 | Team Udayavani |

ವಾಷಿಂಗ್ಟನ್‌:ಅಮೆರಿಕದಲ್ಲಿರುವ ಸಾವಿರಾರು ಭಾರತೀಯ ತಂತ್ರಜ್ಞಾನ ವೃತ್ತಿಪರರು ಸೇರಿದಂತೆ ವಿದೇಶಿ ಟೆಕಿಗಳು ನೆಮ್ಮದಿಯ ನಿಟ್ಟುಸಿರುವ ಬಿಡುವಂಥ ಸುದ್ದಿಯಿದು. ಅಮೆರಿಕ ಸರ್ಕಾರವು ಎಚ್‌1ಬಿ ಮತ್ತು ಎಲ್‌1 ವೀಸಾಗಳಿಗೆ ಸಂಬಂಧಿಸಿ ಈ ಹಿಂದೆ ಇದ್ದ “ದೇಶೀಯ ವೀಸಾ ಮರುದೃಢೀಕರಣ’ ವ್ಯವಸ್ಥೆಯನ್ನು ಮರುಜಾರಿ ಮಾಡಲು ಚಿಂತನೆ ನಡೆಸಿದೆ. ಆರಂಭದಲ್ಲಿ ನಿರ್ದಿಷ್ಟ ಕೆಟಗರಿಯ ವೀಸಾಗಳ ಅವಧಿ ವಿಸ್ತರಣೆಗೆ ಪ್ರಯೋಗಿಕವಾಗಿ ಈ ಯೋಜನೆ ಜಾರಿಗೆ ಬರಲಿದೆ.

Advertisement

2004ರವರೆಗೆ ಎಚ್‌1ಬಿ ವೀಸಾದಾರರು ಅಮೆರಿಕದಲ್ಲೇ ತಮ್ಮ ವೀಸಾವನ್ನು ನವೀಕರಣ(ಸ್ಟಾಂಪಿಂಗ್‌) ಮಾಡಬಹುದಿತ್ತು. ನಂತರದಲ್ಲಿ ಈ ವ್ಯವಸ್ಥೆ ರದ್ದು ಮಾಡಲಾಯಿತು. ಅದರಂತೆ, ಈಗ ವೀಸಾ ಅವಧಿ ಮುಗಿದ ಕೂಡಲೇ ಉದ್ಯೋಗಿಗಳು ತಮ್ಮ ತಮ್ಮ ದೇಶಕ್ಕೆ ವಾಪಸಾಗಬೇಕಿತ್ತು. ಅಲ್ಲಿ ಅಮೆರಿಕದ ರಾಯಭಾರ ಕಚೇರಿಗೆ ತೆರಳಿ ವೀಸಾ ರೀಸ್ಟಾಂಪಿಂಗ್‌ ಪ್ರಕ್ರಿಯೆ ಪೂರ್ಣಗೊಳಿಸಿ ವೀಸಾ ಅವಧಿ ವಿಸ್ತರಿಸಿಕೊಳ್ಳಬೇಕಿತ್ತು. ಇದಾದ ಬಳಿಕ, ತಮ್ಮ ಪಾಸ್‌ಪೋರ್ಟ್‌ಗಳಿಗೆ ಸ್ಟಾಂಪಿಂಗ್‌ ಮಾಡಿಸಿಕೊಂಡು ಅಮೆರಿಕಕ್ಕೆ ಮತ್ತೆ ಪ್ರವೇಶಿಸಬೇಕಾಗಿತ್ತು. ಆದರೆ, ವೀಸಾ ನವೀಕರಣಕ್ಕೆ ಭಾರೀ ಸಂಖ್ಯೆಯ ಅರ್ಜಿಗಳು ಬರುತ್ತಿದ್ದ ಕಾರಣ, 800 ದಿನಗಳಿಗಿಂತಲೂ ಹೆಚ್ಚು ಕಾಯಬೇಕಾದ ಸ್ಥಿತಿಯಿತ್ತು. ಈಗ ಅಮೆರಿಕ ಸರ್ಕಾರ ಈ ನಿಯಮದಲ್ಲಿ ತಿದ್ದುಪಡಿ ತಂದು, 2004ಕ್ಕೂ ಮುಂಚೆ ಇದ್ದ ನಿಯಮ ಮರುಜಾರಿ ಮಾಡಲು ನಿರ್ಧರಿಸಿದೆ.

ಅದರಂತೆ, ವೀಸಾ ಅವಧಿ ಮುಗಿದರೆ ಅಮೆರಿಕದಲ್ಲೇ ಇದ್ದುಕೊಂಡು ಸ್ಟಾಂಪಿಂಗ್‌ ಪ್ರಕ್ರಿಯೆ ಮುಗಿಸಿ, ವೀಸಾ ನವೀಕರಣ ಮಾಡಬಹುದಾಗಿದೆ. ಸದ್ಯ ಇದು ಪ್ರಾಯೋಗಿಕವಾಗಿ ಜಾರಿಯಾಗಿದ್ದು, ವರ್ಷಾಂತ್ಯದ ವೇಳೆಗೆ ಪೂರ್ಣಪ್ರಮಾಣದಲ್ಲಿ ಜಾರಿಯಾಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next