Advertisement

ಎಚ್‌-1 ಬಿ ವೀಸಾ ನಿರ್ಧಾರ ರಾಜಕೀಯ ಪ್ರೇರಿತ

01:15 AM Jun 26, 2020 | Hari Prasad |

ಟ್ರಂಪ್‌ ಸರಕಾರ, ಎಚ್‌-1 ಬಿ ಸೇರಿದಂತೆ ವಿವಿಧ ಉದ್ಯೋಗ ಸಂಬಂಧಿ ವೀಸಾಗಳನ್ನು ಈ ವರ್ಷಾಂತ್ಯದವರೆಗೆ ರದ್ದು ಮಾಡಿ ಘೋಷಣೆ ಹೊರಡಿಸಿದೆ.

Advertisement

ಭಾರತ ಮತ್ತು ಅಮೆರಿಕ ನಡುವಿನ ಸ್ನೇಹವು ಹೊಸ ಆಯಾಮ ತಲುಪುತ್ತಿರುವ ವೇಳೆಯಲ್ಲೇ, ಟ್ರಂಪ್‌ ಸರಕಾರದ ಈ ನಿರ್ಧಾರ ಬೇಸರ ಹುಟ್ಟಿಸುವಂಥದ್ದು.

ಆದಾಗ್ಯೂ, ಯಾವುದೇ ದೇಶವಾದರೂ ತನ್ನ ನಾಗರಿಕರ ಹಿತದೃಷ್ಟಿಗೆ ಆದ್ಯತೆ ಕೊಡುವುದು ಸ್ವಾಭಾವಿಕವೇ ಆದರೂ, ಇತರೆ ರಾಷ್ಟ್ರಗಳ, ಅದರಲ್ಲೂ ಮುಖ್ಯವಾಗಿ ಪ್ರಮುಖ ಮಿತ್ರ ರಾಷ್ಟ್ರಗಳ ನಾಗರಿಕರ ಭವಿಷ್ಯದ ಮೇಲೆ ಪ್ರಭಾವ ಬೀರುವಂಥ ಇಂಥ ವಿಷಯಗಳಲ್ಲಿ ಹಿಂದೆ ಮುಂದೆ ಯೋಚಿಸದೇ ನಿರ್ಧಾರ ತೆಗೆದುಕೊಳ್ಳುವುದು ಖಂಡಿತ ತಪ್ಪು. ಈ ನಿರ್ಧಾರದಿಂದಾಗಿ ಅಮೆರಿಕಕ್ಕೆ ತೆರಳಲು ಸಜ್ಜಾಗಿದ್ದವರಷ್ಟೇ ಅಲ್ಲದೇ, ಎಚ್‌-1ಬಿ ವೀಸಾದ ನವೀಕರಣಕ್ಕಾಗಿ ಕಾಯುತ್ತಿದ್ದ ಕಂಪೆನಿಗಳಿಗೂ ಹೊಸ ಸಂಕಷ್ಟ ಎದುರಾಗಿದೆ.

ಈ ಕಾರಣಕ್ಕಾಗಿಯೇ, ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮಗಳ ಒಕ್ಕೂಟವು ಟ್ರಂಪ್‌ ಸರಕಾರದ ಈ ನಿರ್ಧಾರವನ್ನು ಬಲವಾಗಿ ಖಂಡಿಸಿದೆ. “”ಇದರಿಂದಾಗಿ ಪ್ರತಿಭಾನ್ವಿತರು ಅವಕಾಶ ವಂಚಿತರಾಗುವುದಷ್ಟೇ ಅಲ್ಲದೇ, ಇದು ಈಗಾಗಲೇ ಸಂಕಷ್ಟದಲ್ಲಿರುವ ಅಮೆರಿಕದ ಆರ್ಥಿಕತೆಯ ಮೇಲೂ ಮತ್ತಷ್ಟು ಋಣಾತ್ಮಕ ಪರಿಣಾಮ ಬೀರಲಿದೆ” ಎಂದು ಎಚ್ಚರಿಸಿದೆ. ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮ ಒಕ್ಕೂಟದ ಎಚ್ಚರಿಕೆಗೆ ಅಮೆರಿಕದ ಉದ್ಯಮ ಪರಿಣತರು ಹಾಗೂ ಅಲ್ಲಿನ ಉದ್ಯಮ ಒಕ್ಕೂಟಗಳೂ ಧ್ವನಿಗೂಡಿಸಿವೆ.

ಆದರೆ, ಇದೇ ವೇಳೆಯಲ್ಲೇ ಟ್ರಂಪ್‌ ಅವರ ನಿರ್ಧಾರದಿಂದಾಗಿ, ಈಗಾಗಲೇ ಎಚ್‌1-ಬಿ ವೀಸಾದಡಿಯಲ್ಲಿ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಪ್ರಯೋಜನವಾಗಲೂಬಹುದು ಎಂದು ಕೆಲ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಹೊಸ ಆದೇಶದಿಂದಾಗಿ ಅಮೆರಿಕದಲ್ಲಿ ನುರಿತ ಕೆಲಸಗಾರರ ಕೊರತೆ ಎದುರಾಗಲಿದೆ.

Advertisement

ಹೀಗಾಗಿ, ಎಚ್‌1-ಬಿ ವೀಸಾದಡಿ ಕೆಲಸ ಮಾಡುತ್ತಿರುವ ವರ್ಗಕ್ಕೆ ಹೆಚ್ಚಿನ ಅವಕಾಶ ದೊರೆಯಬಹುದು ಹಾಗೂ ಹೆಚ್ಚಿನ ವೇತನ ಪಡೆಯುವ ಮೂಲಕ ಪ್ರಯೋಜನ ಪಡೆಯಬಹುದು ಎನ್ನಲಾಗುತ್ತಿದೆ. ಇದಷ್ಟೇ ಅಲ್ಲದೇ, ಅಮೆರಿಕಕ್ಕೆ ತೆರಳಲು ಸಜ್ಜಾಗಿರುವ ನುರಿತ ಉದ್ಯೋಗಿಗಳ ಸೇವೆಯನ್ನು ಭಾರತದಲ್ಲಿಯೇ ಬಳಸಿಕೊಳ್ಳಬಹುದು, ಇದರಿಂದ ದೇಶದ ಆರ್ಥಿಕತೆಗೂ ಪ್ರಯೋಜನವಾಗಲಿದೆ ಎಂಬ ಸಲಹೆ ಕೇಳಿಬರುತ್ತಿದೆ.

ಇದೇನೇ ಇದ್ದರೂ, ಟ್ರಂಪ್‌ ಸರಕಾರದ ಈ ನಿರ್ಧಾರದ ಹಿಂದೆ ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗಿಂತಲೂ ಸ್ವಹಿತಾಸಕ್ತಿಯೇ ಚಾಲನಾ ಶಕ್ತಿಯಾಗಿದೆ ಎನ್ನುವುದು ನಿರ್ವಿವಾದ. ಈ ವರ್ಷಾಂತ್ಯದಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿದ್ದು ಟ್ರಂಪ್‌ ಅವರ ಜನಪ್ರಿಯತೆ ಬಹಳ ಕುಸಿದಿದೆ ಎನ್ನಲಾಗುತ್ತದೆ.

ಅದರಲ್ಲೂ ಕೋವಿಡ್ 19 ನಿರ್ವಹಣೆಯ ವಿಚಾರದಲ್ಲಿ ಟ್ರಂಪ್‌ ಆಡಳಿತದ ಆರಂಭಿಕ ತಪ್ಪುಗಳಿಂದಾಗಿ, ಇಂದು ಆ ಇಡೀ ದೇಶ ತತ್ತರಿಸಿಹೋಗಿದೆ. ಒಟ್ಟಲ್ಲಿ ಕೊರೊನಾದಿಂದಾಗಿ, ಅಮೆರಿಕದಲ್ಲಿ ಬೃಹತ್‌ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಿದ್ದು, ಇದರ ಬಿಸಿ ಡೊನಾಲ್ಡ್‌ ಟ್ರಂಪ್‌ ಅವರಿಗೆ ತಾಗಲಾರಂಭಿಸಿದೆ. ಹೀಗಾಗಿ, ಎಚ್‌-1 ಬಿ ವೀಸಾ ರದ್ದತಿಯ ವಿಚಾರ ಸಂಪೂರ್ಣವಾಗಿ ಚುನಾವಣಾ ದೃಷ್ಟಿಯಿಂದಲೇ ರೂಪಿತವಾಗಿದೆ ಎನ್ನುವುದು ನಿರ್ವಿವಾದ.

ಈ ನಿರ್ಧಾರವನ್ನು ತಾತ್ಕಾಲಿಕ ಅಡಚಣೆ ಎಂದೇ ನೋಡಬೇಕು ಎನ್ನುತ್ತಾರೆ ರಾಜಕೀಯ ಪರಿಣತರು. ಇದೇನೇ ಇದ್ದರೂ, ಎಚ್‌-1ಬಿ ವಿಚಾರದಲ್ಲಿ ಟ್ರಂಪ್‌ ತೆಗೆದುಕೊಂಡ ಈ ನಿರ್ಧಾರವು ಅವರಿಗೆ ರಾಜಕೀಯವಾಗಿ ಎಷ್ಟು ಅನುಕೂಲ ಮಾಡಿಕೊಡುತ್ತದೋ ತಿಳಿಯದಾದರೂ, ಭಾರತದೊಂದಿಗಿನ ಸ್ನೇಹಕ್ಕೆ ಅವರು ಅನಗತ್ಯ ಅಡ್ಡಿ ಸೃಷ್ಟಿಸುತ್ತಿರುವುದಂತೂ ಸತ್ಯ.

Advertisement

Udayavani is now on Telegram. Click here to join our channel and stay updated with the latest news.

Next