ನಟನಾಗಿ, ದೇಹದಾರ್ಢ್ಯ ಪಟುವಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಎ.ವಿ ರವಿ ಉರೂಫ್ ಜಿಮ್ ರವಿ ಬಗ್ಗೆ ಅನೇಕರಿಗೆ ಗೊತ್ತಿರಬಹುದು. ಕನ್ನಡ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ಸುಮಾರು 140ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಜಿಮ್ ರವಿ, ಈಗ ಪೂರ್ಣ ಪ್ರಮಾಣದಲ್ಲಿ ನಾಯಕ ನಟನಾಗಿ ಸ್ಯಾಂಡಲ್ ವುಡ್‌ಗೆ ಪರಿಚಯವಾಗುತ್ತಿದ್ದಾರೆ.
“ರವಿ ಜಿಮ್’ ಎಂಬ ಹೆಸರಿನ ಜಿಮ್ ತರಬೇತಿ ಕೇಂದ್ರವನ್ನು ನಡೆಸಿಕೊಂಡು ಬರುತ್ತಿರುವ, ಕಳೆದ 30 ವರ್ಷಗಳಿಂದ ಸುಮಾರು 70 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಜಿಮ್ ತರಬೇತಿ ನೀಡಿದ್ದಾರೆ. ಇದೀಗ “ರವೀಸ್ ಜಿಮ್ ಪ್ರೊಡಕ್ಷನ್ಸ್’ ಹೆಸರಿನಲ್ಲಿ ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿರುವ ಜಿಮ್ ರವಿ, ತಮ್ಮ ಬ್ಯಾನರ್ ಮೂಲಕ “ಪುರುಷೋತ್ತಮ’ ಚಿತ್ರವನ್ನು ನಿರ್ಮಿಸುತ್ತಿದ್ದು, ಈ ಚಿತ್ರದ ಮೂಲಕ ಮೊದಲ ಬಾರಿಗೆ ಹೀರೋ ಆಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಇದೇ ಫೆ. 14 ರ “ಪ್ರೇಮಿಗಳ ದಿನ’ದಂದು “ಪುರುಷೋತ್ತಮ’ ಚಿತ್ರದ ಮಹೂರ್ತ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಹಿರಿಯ ನಟ, ನಿರ್ದೇಶಕ ಎಸ್. ನಾರಾಯಣ್ “ಪುರುಷೋತ್ತಮ’ ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಹಿರಿಯ ನಟ ಜೈ ಜಗದೀಶ್, ವಿಜಯಲಕ್ಷ್ಮೀ ಸಿಂಗ್, ತುರುವೆಕೆರೆ ಶಾಸಕ ಮಸಾಲೆ ಜಯರಾಮ್ ಮೊದಲಾದವರು ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.
ಎಸ್. ವಿ ಅಮರನಾಥ್ “ಪುರುಷೋತ್ತಮ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮುಹೂರ್ತದ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಎಸ್. ವಿ ಅಮರನಾಥ್, “ರವಿ ಅವರನ್ನು ಇಲ್ಲಿಯವರೆಗೂ ಕ್ರೀಡಾಪಟು, ಕಲಾವಿದನಾಗಿ ನೋಡಿದ್ದೀರಾ. ಈಗ ಅವರಲ್ಲಿರುವ ಕಲಾವಿದನನ್ನು ಬೇರೆ ತರಹ ಪರದೆ ಮೇಲೆ ತೋರಿಸವ ಪ್ರಯತ್ನ ಮಾಡಲಾಗುವುದು. ಅಂದರೆ ಕ್ರೀಡೆ, ಆಕ್ಷನ್ ಖಂಡಿತ ಇರೋದಿಲ್ಲ. ಪೂರ್ಣ ಪ್ರಮಾಣದ ಹಾಸ್ಯದ ಏಳೆಯಲ್ಲಿ ಕಥೆ ಸಾಗುತ್ತದೆ. ಮಧ್ಯಮ ವರ್ಗದ ಕುಟುಂಬದವರು ಪ್ರತಿ ನಿತ್ಯ ಏನಾದರೂ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಆ ತರಹದ ದೊಡ್ಡದಾದ ಚಾಲೆಂಜ್ ಇವರ ಜೀವನದಲ್ಲಿ ಬಂದಾಗ, ಅದನ್ನು ಹೇಗೆ ನಿಭಾಯಿಸುತ್ತಾರೆ. ಇಲ್ಲಿ ನಾಯಕ ದೇಹಶಕ್ತಿಯನ್ನು ಪ್ರದರ್ಶಿಸದೆ, ಕೇವಲ ಬುದ್ದಿಶಕ್ತಿಯಿಂದ ಹೇಗೆಲ್ಲಾ ಅವಘಡಗಳನ್ನು ಸರಿಪಡಿಸಿಕೊಳ್ಳುತ್ತಾನೆ ಎಂಬುದು ಚಿತ್ರದ ಸಾರಾಂಶವಾಗಿದೆ’ ಎಂದು ಚಿತ್ರದ ಕಥಾಹಂದರ ಬಗ್ಗೆ ಮಾಹಿತಿ ನೀಡಿದರು.
ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ಜಿಮ್ ರವಿ, “ನಾಯಕನಿಂದ ಒದೆ ತಿನ್ನಿಸಿಕೊಳ್ಳುತ್ತಿರುವ ದೃಶ್ಯಗಳನ್ನು ನೋಡಿತ್ತಿದ್ದ ಹಿತೈಷಿಗಳು, ನೀವು ಯಾವಾಗ ಹೀರೋ ಆಗೋದು ಅಂತ ಹತ್ತು ವರ್ಷದಿಂದ ಕೇಳುತ್ತಿದ್ದರು. ಅದಕ್ಕೆ ಈ ದಿನ ಕಾಲ ಕೂಡಿಬಂತು. ಒಂದಷ್ಟು ಕಡೆ ನೋವಿನ ಸಂಗತಿ ನಡೆಯಿತು. ಅದೆಲ್ಲವನ್ನು ಸ್ಪೂರ್ತಿಯಾಗಿ ಪಡೆದುಕೊಂಡಿದ್ದೆ. ನಿರ್ದೇಶಕರು ಯಾವುದೇ ರೋಲ್ ಕೊಟ್ಟರೂ ಶ್ರಮವಹಿಸಿ ನಟಿಸುತ್ತಿದ್ದೆ. ಹಣದ ಹಿಂದೆ ಯಾವತ್ತು ಹೋಗಿರಲಿಲ್ಲ. ಪಾತ್ರದ ಸಲುವಾಗಿ ಹದಿನೆಂಟು ಕೆ.ಜಿ ತೂಕ ಕಡಿಮೆ ಮಾಡಿಕೊಂಡಿದ್ದೇನೆ. ಶೀಘ್ರದಲ್ಲಿಯೇ ಚಿತ್ರದ ಚಿತ್ರೀಕರಣ ಶುರುವಾಗಲಿದೆ’ ಎಂದರು.
“ಪುರುಷೋತ್ತಮ’ ಚಿತ್ರದ ನಾಲ್ಕು ಹಾಡುಗಳಿಗೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜಿಸುತ್ತಿದ್ದಾರೆ. ಉಳಿದಂತೆ ಚಿತ್ರದ ಇತರ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ. ಸದ್ಯ ಮುಹೂರ್ತವನ್ನು ಆಚರಿಸಿಕೊಂಡು ಸೆಟ್ಟೇರಿರುವ “ಪುರುಷೋತ್ತಮ’ ಚಿತ್ರವನ್ನು ಬೆಂಗಳೂರು, ಮೈಸೂರು ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜಿಸಿದೆ.
ಒಟ್ಟಾರೆ “ಪುರುಷೋತ್ತಮ’ನಾಗಿ ಪ್ರೇಕ್ಷಕರ ಮುಂದೆ ಬರಲು ತಯಾರಾಗಿರುವ ಜಿಮ್ ರವಿ ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದ್ದಾರೆ ಅನ್ನೋದು ಇದೇ ವರ್ಷಾಂತ್ಯದೊಳಗೆ ಗೊತ್ತಾಗುವ ಸಾಧ್ಯತೆ ಇದೆ.