ಪ್ರಯಾಗರಾಜ್ (ಉತ್ತರಪ್ರದೇಶ): ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿ ಒಂದಕ್ಕೊಂದು ಅಂಟಿಕೊಂಡಿವೆ. ಹಲವರ ಅರ್ಜಿಗಳ ಹಿನ್ನೆಲೆಯಲ್ಲಿ ಈ ವಿವಾದಿತ ಜಾಗವನ್ನು ಪೂರ್ಣವಾಗಿ ಸಮೀಕ್ಷೆಗೊಳಪಡಿಸುವಂತೆ, ವಾರಾಣಸಿ ನಾಗರಿಕ ನ್ಯಾಯಾಲಯ ಆದೇಶಿಸಿತ್ತು. ಅದಕ್ಕೆ ಅಲಹಾಬಾದ್ ಉಚ್ಚ ನ್ಯಾಯಾಲಯ ತಡೆ ನೀಡಿದೆ.
ಈ ವಿವಾದಿತ ಪ್ರದೇಶದ ನಿರ್ವಹಣೆಗೆ ಸಂಬಂಧಿಸಿ 1991ರಲ್ಲಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ಮೇಲಿನ ತೀರ್ಪನ್ನು ಉಚ್ಚ ನ್ಯಾಯಾಲಯ ಕಾಯ್ದಿರಿಸಿದೆ. ತೀರ್ಪು ಪ್ರಕಟವಾಗುವವರೆಗೆ ಕೆಳಹಂತದ ನ್ಯಾಯಾಲಯಕ್ಕೆ ಈ ಕುರಿತ ಯಾವುದೇ ಆದೇಶ ನೀಡುವ ಅಧಿಕಾರವಿಲ್ಲ ಎಂದು ಜ್ಞಾನವಾಪಿ ಮಸೀದಿ ನಿರ್ವಹಣೆ ಸಮಿತಿ ವಾದಿಸಿದೆ.
ಇದನ್ನೂ ಓದಿ:ಕಾರವಾರ: ತಿಂಗಳ ಅವಧಿಯಲ್ಲಿ ನಾಲ್ಕನೇ ಕಡಲಾಮೆಯ ಸಾವು
1664ರಲ್ಲಿ ಮೊಘಲ್ ಸುಲ್ತಾನ ಔರಂಗಜೇಬ್, ವಿಶ್ವನಾಥ ಮಂದಿರವನ್ನು ಕೆಡವಿ ಮಸೀದಿ ನಿರ್ಮಿಸಿದ್ದಾನೆ. ಆದ್ದರಿಂದ ಅದೇ ಜಾಗದಲ್ಲಿ ಮತ್ತೆ ಮಂದಿರ ನಿರ್ಮಿಸಲು ಅವಕಾಶ ಕೊಡಬೇಕು ಎಂದು ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ 1991ರ ಪೂಜಾಸ್ಥಾನ ಕಾಯ್ದೆ ಪ್ರಕಾರ, 1947 ಆ.15ಕ್ಕಿಂತ ಮುನ್ನ ನಿರ್ಮಾಣವಾದ ಯಾವುದೇ ಪೂಜಾಸ್ಥಾನಗಳನ್ನು ಇನ್ನೊಂದು ಪೂಜಾಸ್ಥಾನವಾಗಿ ಬದಲಾಯಿಸಬಾರದು ಎನ್ನಲಾಗಿದೆ. ಅದನ್ನೇ ಆಧಾರವಾಗಿಟ್ಟುಕೊಂಡು ಜ್ಞಾನವಾಪಿ ಮಸೀದಿ ಮಂಡಳಿ ಹೋರಾಟ ಮುಂದುವರಿಸಿದೆ.