ವಾರಾಣಸಿ: ಜ್ಞಾನವಾಪಿ ಮಸೀದಿಯ ಸರ್ವೇ ಕಾರ್ಯ ಸತತ ಎರಡನೇ ದಿನವೂ ನಿರಾತಂಕವಾಗಿ ಮುಗಿದಿದೆ. ಭಾನುವಾರ ಬೆಳಗ್ಗೆ 8ರಿಂದ ಮೂರನೇ ಹಂತದ ಸರ್ವೆ ಕಾರ್ಯ ನಡೆಯಲಿದೆ ಎಂದು ಸರ್ವೇ ಕಾರ್ಯ ಕೈಗೊಂಡಿರುವ ಕೋರ್ಟ್ ಕಮೀಷನ್‌ನ ಸದಸ್ಯ ವಕೀಲ ವಿಶಾಲ್ ಸಿಂಗ್ ತಿಳಿಸಿದ್ದಾರೆ.
ಎರಡನೇ ದಿನದ ಸರ್ವೆಯಲ್ಲಿ, ಗ್ಯಾನವಾಪಿ ಮಸೀದಿಯ ಆವರಣ, ಮಸೀದಿಯ ಮೇಲಿರುವ ಮೂರು ಗುಮ್ಮಟಗಳನ್ನು ಸರ್ವೇ ಮಾಡಲಾಯಿತು ಎಂದು ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮಾ ತಿಳಿಸಿದ್ದಾರೆ.
“”ಅಸಲಿಗೆ ಎರಡನೇ ದಿನದ ಸರ್ವೆ ಕಾರ್ಯ ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ನಡೆಯಬೇಕಿತ್ತು. ಆದರೆ, ಸರ್ವೆ ಕಾರ್ಯ ಅಂದುಕೊಂಡ ಸಮಯದಲ್ಲಿ ಪೂರ್ಣಗೊಳ್ಳಲಿಲ್ಲ. ಹಾಗಾಗಿ, ಸರ್ವೆ ಕಾರ್ಯವನ್ನು ಇನ್ನೊಂದು ತಾಸಿನವರೆಗೆ (1 ಗಂಟೆಯವರೆಗೆ) ವಿಸ್ತರಿಸಲಾಯಿತು. ಆದರೂ, ಸರ್ವೆ ಕಾರ್ಯ ಅಪೂರ್ಣಗೊಂಡಿತು. ಹಾಗಾಗಿ, ಸೋಮವಾರದಂದು ಕೆಲಸ ಮುಂದುವರಿಸುವುದಾಗಿ ಕೋರ್ಟ್ ಕಮೀಷನ್ ತಿಳಿಸಿದೆ ಎಂದು ಕೌಶಲ್ ಹೇಳಿದ್ದಾರೆ.
ಸುಪ್ರೀಂನಲ್ಲಿ ಮತ್ತೊಂದು ಅರ್ಜಿ
ಜ್ಞಾನವಾಪಿ ಮಸೀದಿಯಲ್ಲಿ ಸರ್ವೆ ನಡೆಸಲು ಸೂಚಿಸಿರುವ ಅಲಹಾಬಾದ್ ನ್ಯಾಯಾಲಯದ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ ಮಸೀದಿಯ ಆಡಳಿತ ಮಂಡಳಿಯಾದ “ಅಂಜುಮನ್ ಇಂತೆಝಾಮಿಯಾ’ ಭಾನುವಾರದಂದು ಸುಪ್ರೀಂ ಕೋರ್ಟ್‌ನಲ್ಲಿ ರಜಾಕಾಲದ ಮೇಲ್ಮನವಿಯೊಂದನ್ನು ಸಲ್ಲಿಸಿ, ಸರ್ವೇಯನ್ನು ಈ ಕೂಡಲೇ ನಿಲ್ಲಿಸಬೇಕು. ಸರ್ವೆ ಮಾಡುವುದು ಶಾಂತಿ ಕದಡುವ ಪ್ರಯತ್ನವಾಗಿದೆ ಎಂದು ಅರ್ಜಿಯಲ್ಲಿ ಆಡಳಿತ ಮಂಡಳಿ ಆರೋಪಿಸಿದೆ.
ಶುಕ್ರವಾರದಂದು ಇದೇ ರೀತಿಯ ಅರ್ಜಿಯನ್ನು ಇತ್ತೀಚೆಗೆ ಮಂಡಳಿಯು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿ, ಕೂಡಲೇ ಜಾರಿಗೆ ಬರುವಂತೆ ಸರ್ವೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿತ್ತು. ಆದರೆ, ಆ ಅರ್ಜಿಯನ್ನು ತಿರಸ್ಕರಿಸಿದ್ದ ಸುಪ್ರೀಂ ಕೋರ್ಟ್, ತಕ್ಷಣಕ್ಕೆ ಇಂಥ ಆದೇಶ ಕೊಡಲಾಗುವುದಿಲ್ಲ. ಸೂಕ್ತ ವಿಚಾರಣೆಯಾಗಬೇಕೆಂದು ಹೇಳಿ ಮೊದಲು ಅರ್ಜಿಯ ವಿಚಾರಣೆಗೆ ಮುಂದಾಗಿತ್ತು.