ವಾರಾಣಸಿ/ಹೈದರಾಬಾದ್: ಜ್ಞಾನವಾಪಿ ಮಸೀದಿ ವಿವಾದ ಮತ್ತಷ್ಟು ಜಟಿಲವಾಗಿದ್ದು, ಶನಿವಾರವೂ ಸ್ಥಳೀಯರು ಕೋರ್ಟ್ ಕಮಿಷನರ್‌ಗಳಿಗೆ ಸಮೀಕ್ಷೆ ನಡೆಸಲು ಅವಕಾಶ ನೀಡಿಲ್ಲ. ಸ್ಥಳೀಯ ಕೋರ್ಟ್ ಆದೇಶದಂತೆ ಮೇ 6 ಮತ್ತು 7ರಂದು ಈ ಮಸೀದಿಯಲ್ಲಿ ವೀಡಿಯೋ ಸಮೀಕ್ಷೆ ನಡೆಸಬೇಕಾಗಿತ್ತು. ಆದರೆ ಸ್ಥಳೀಯರ ವಿರೋಧದಿಂದಾಗಿ ಎರಡೂ ದಿನ ಸರ್ವೇಕಾರ್ಯ ನಡೆಯಲಿಲ್ಲ.
ದಿನದಾರಂಭದಲ್ಲೇ ವಾರಾಣಸಿ ಕೋರ್ಟ್, ಶನಿವಾರವೇ ವೀಡಿಯೋಗ್ರಫಿ ಮತ್ತು ಸಮೀಕ್ಷೆ ಮುಗಿಸಿ ಎಂದು ವಕೀಲರಿಗೆ ಸೂಚನೆ ನೀಡಿತ್ತು. ಇದರಿಂದಾಗಿ ಭಾರೀ ಬಿಗಿ ಬಂದೋಬಸ್ತ್ನಲ್ಲಿ ವಕೀಲರ ತಂಡ ಮಸೀದಿ ಬಳಿಗೆ ತೆರಳಿ ಸಮೀಕ್ಷೆಗೆ ಮುಂದಾಗಿತ್ತು. ಆದರೆ, ಸ್ಥಳೀಯರು ತೀವ್ರ ಪ್ರತಿರೋಧ ಉಂಟು ಮಾಡಿದ್ದರಿಂದ ಸಮೀಕ್ಷೆ ನಡೆಸಲು ಆಗಲಿಲ್ಲ.
ಜ್ಞಾನವಾಪಿ ಮಸೀದಿಯು ಹಿಂದೆ ಹಿಂದೂ ದೇಗುಲವಾಗಿದ್ದು, ಇಲ್ಲಿ ಶೃಂಗಾರ ಗೌರಿ ಪೂಜೆಗೆ ಅವಕಾಶ ನೀಡಬೇಕು ಎಂದು ವಾರಾಣಸಿ ಕೋರ್ಟ್‌ನಲ್ಲಿ ಅರ್ಜಿ ದಾಖಲಾಗಿದೆ. 1998ರಲ್ಲಿಯೇ ಈ ಬಗ್ಗೆ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ವಿವಾದ ಮುಂದುವರಿದೇ ಇತ್ತು. ಇತ್ತೀಚೆಗಷ್ಟೇ ವಾರಾಣಸಿ ದೇಗುಲ ಸಂಕೀರ್ಣ ನಿರ್ಮಾಣವಾಗಿದ್ದು, ಈ ವೇಳೆ ಮಸೀದಿಯ ಹಿಂಬದಿ ಎಲ್ಲರ ಕಣ್ಣಿಗೆ ಬಿದ್ದಿತ್ತು. ಮಸೀದಿಯ ಹಿಂದಿನ ಗೋಡೆ ದೇಗುಲದಂತೆಯೇ ಇದ್ದು, ಹೀಗಾಗಿ, ಇಲ್ಲಿ ಶೃಂಗಾರ ಗೌರಿ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ಅರ್ಜಿ ಸಲ್ಲಿಕೆ ಮಾಡಲಾಗಿದೆ. ಅಷ್ಟೇ ಅಲ್ಲ, ಈ ಮಸೀದಿಯು ವಾರಾಣಸಿ ದೇಗುಲ ಸಂಕೀರ್ಣಕ್ಕೆ ಹೊಂದಿಕೊಂಡಂತೆಯೇ ಇದೆ.
ಸಂಸದ ಓವೈಸಿ ಆಕ್ಷೇಪ: ಎಐಎಂಐಎಂನ ನಾಯಕ ಅಸಾದುದ್ದೀನ್ ಓವೈಸಿ ಅವರು, ದೇಗುಲದ ವಿಡಿಯೋಗ್ರಫಿ ಮತ್ತು ಸಮೀಕ್ಷೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೋರ್ಟ್ ಆದೇಶವು 1991ರ ಪೂಜಾ ಸ್ಥಳ ಕಾಯ್ದೆಯ ಸಂಪೂರ್ಣ ಉಲ್ಲಂಘನೆ. ಸಂವಿಧಾನವೇ ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿದಿದ್ದು, ಅಯೋಧ್ಯೆ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಕೂಡ ಇದನ್ನೇ ಹೇಳಿದೆ. ಹೀಗಾಗಿ ವಾರಾಣಸಿಕೋರ್ಟ್‌ನ ಆದೇಶ 1980-90ರಲ್ಲಿ ದೇಶದಲ್ಲಿ ಸಂಭವಿಸಿದ ರಕ್ತಪಾತಕ್ಕೆ ಅವಕಾಶ ಮಾಡಿಕೊಟ್ಟಂತಿದೆ ಎಂದಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಮನೋಜ್ ತಿವಾರಿ, ಓವೈಸಿ ಅವರು ಈಗಾಗಲೇ ಹಲವಾರು ಸಂವಿಧಾನವನ್ನು ಉಲ್ಲಂಘಿಸಿದ್ದಾರೆ. ಈಗ ಅವರೇ ಸಂವಿಧಾನದಲ್ಲಿರುವ ಅಂಶಗಳನ್ನು ಪಾಲಿಸಬೇಕು ಎಂದು ಹೇಳುತ್ತಿದ್ದಾರೆ. ಇವರು ದ್ವಂದ್ವ ನಡೆ ಎಂದು ವ್ಯಂಗ್ಯವಾಡಿದ್ದಾರೆ.