ವಾರಾಣಸಿ: ಉತ್ತರಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದ ವಿಡಿಯೋ ಸಮೀಕ್ಷೆ ನಡೆಸುವಂತೆ ಆದೇಶ ನೀಡಿದ್ದ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರಿಗೆ ಜೀವ ಬೆದರಿಕೆಯೊಡ್ಡಿರುವ ಕೈಬರಹದ ಪತ್ರ ಬಂದಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕಾಂಗ್ರೆಸ್‌ನವರ ಚಡ್ಡಿ ಬಿಚ್ಚಿ ಕಳಿಸಿದ್ದಾರೆ, ಮುಂದೆ ಕರ್ನಾಟಕದಲ್ಲಿ ಲಂಗೋಟಿ ಸರದಿ : ಆರಗ
ಗೃಹ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕ ಮತ್ತು ವಾರಾಣಸಿ ಪೊಲೀಸ್ ಕಮಿಷನರ್ ಗೆ ಬರೆದ ಪತ್ರದಲ್ಲಿ, ತನಗೆ ಇಸ್ಲಾಮಿಕ್ ಅಗಾಝ್ ಚಳವಳಿಯ ಪರವಾಗಿ ಕಾಶಿಫ್ ಅಹ್ಮದ್ ಸಿದ್ಧಿಖಿ ಎಂಬಾತ ಬೆದರಿಕೆ ಪತ್ರ ಬರೆದಿದ್ದು, ಅದನ್ನು ರಿಜಿಸ್ಟರ್ಡ್ ಅಂಚೆ ಮೂಲಕ ಕಳುಹಿಸಿರುವುದಾಗಿ ವಿವರಿಸಿದ್ದಾರೆ. ಈ ಬಗ್ಗೆ ವಾರಾಣಸಿ ಪೊಲೀಸ್ ಕಮಿಷನರ್ ಸತೀಶ್ ಗಣೇಶ್ ಖಚಿತಪಡಿಸಿದ್ದಾರೆ ಎಂದು ವರದಿ ಹೇಳಿದೆ.
ಡೆಪ್ಯುಟಿ ಕಮಿಷನರ್ ವರುಣಾ ಅವರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಬೆದರಿಕೆ ಹಿನ್ನೆಲೆಯಲ್ಲಿ ನ್ಯಾಯಾಧೀಶರಿಗೆ ಒಟ್ಟು ಒಂಬತ್ತು ಪೊಲೀಸ್ ಸಿಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಸತೀಶ್ ಗಣೇಶ್ ತಿಳಿಸಿದ್ದಾರೆ.
ಜಡ್ಜ್ ಗೆ ಬರೆದ ಪತ್ರದಲ್ಲಿ, ಜ್ಞಾನವಾಪಿ ಮಸೀದಿ ಸಂಕೀರ್ಣವನ್ನು ಪರಿಶೀಲಿಸುವುದು ಸಾಮಾನ್ಯ ಪ್ರಕ್ರಿಯೆ ಎಂದು ನೀವು ಹೇಳಿಕೆ ನೀಡಿದ್ದೀರಿ. ನೀವು ವಿಗ್ರಹ ಆರಾಧಕರು, ನೀವು ಮಸೀದಿಯನ್ನು ಮಂದಿರ ಎಂದು ಘೋಷಿಸುತ್ತೀರಿ. ಕಾಫಿರ್..ಮೂರ್ತಿ ಪೂಜಕ ಹಿಂದೂ ನ್ಯಾಯಾಧೀಶರಿಂದ ಸೂಕ್ತ ನ್ಯಾಯವನ್ನು ಯಾವೊಬ್ಬ ಮುಸಲ್ಮಾನರೂ ನಿರೀಕ್ಷಿಸುವುದಿಲ್ಲ..ಇದಕ್ಕೆ ತಕ್ಕ ಬೆಲೆ ತೆರಬೇಕಾಗಲಿದೆ ಎಂದು” ಉಲ್ಲೇಖಿಸಲಾಗಿದೆ.