ಮಂಗಳೂರು: ಮಧ್ಯಪ್ರದೇಶದ ಗ್ವಾಲಿಯರ್‌ನ ರಾಜಮನೆತನದ ರಾಜಮಾತೆ ಎಂದೇ ಕರೆಯಲ್ಪಡುವ ದಿ|ವಿಜಯರಾಜೇ ಸಿಂಧಿಯಾ ಅವರ ಪ್ರತಿಮೆಯ ಅನಾವರಣದಲ್ಲಿ ಕರಾವಳಿಯ ಪುರೋಹಿತ ವರ್ಗದವರು ಪಾಲ್ಗೊಂಡು ಗಮನ ಸೆಳೆದಿದ್ದಾರೆ.
ಶ್ರೀಹರಿ ಉಪಾಧ್ಯಾಯ ವಾಮಂಜೂರು ಅವರ ನೇತೃತ್ವದಲ್ಲಿ ಮಂಗಳಾದೇವಿ ದೇವಸ್ಥಾನದ ಚಂದ್ರಶೇಖರ ಐತಾಳ, ಅದ್ಯಪಾಡಿ ಉಮೇಶ್ ಭಟ್, ಮಂಜೇಶ್ವರದ ಟಿ.ಕೆ.ಸತ್ಯನಾರಾಯಣ ಭಟ್ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾದವರು.
ಗ್ವಾಲಿಯರ್‌ನ ಶಿವಪುರಿಯಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ರಾಜಮಾತೆ ವಿಜಯ ರಾಜೇ ಸಿಂಧಿಯಾ ಅವರ ಪ್ರತಿಮೆಯ ಪೂರ್ವಭಾವಿ ಪ್ರಾರ್ಥನೆ, ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟ ರೀತಿಗೆ ಮಧ್ಯಪ್ರದೇಶದ ಕ್ರೀಡಾ ಸಚಿವೆ, ಸ್ವತಃ ವಿಜಯ ರಾಜೇ ಸಿಂಧಿಯಾ ಅವರ ಮಗಳು ಯಶೋದರಾ ರಾಜೇ ಸಿಂಧಿಯಾ ಅವರು ಖುಷಿಪಟ್ಟಿದ್ದಾರೆ. ಅದರ ಬಳಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಉಮೇಶ ಭಟ್ ಅವರ ಮಾತಿನಿಂದ ಪ್ರಭಾವಿತರಾಗಿದ್ದಾರೆ.
ತಮ್ಮ ತಾಯಿಯ ಪ್ರತಿಮೆಯ ಅನಾವರಣ ಕಾರ್ಯಕ್ರಮ ತಮ್ಮ ಪಾಲಿಗೆ ಅವಿಸ್ಮರಣೀಯ ಕ್ಷಣಗಳು. ಅದರೊಂದಿಗೆ ಮಂಗಳೂರು ಭಾಗದ ಪುರೋಹಿತರು ಬಂದು ಇಲ್ಲಿ ಉಪಸ್ಥಿತರಿದ್ದು, ಎಲ್ಲವನ್ನು ನಿರ್ವಹಿಸಿಕೊಟ್ಟಿರುವುದು, ಅವರ ಪ್ರಾರ್ಥನೆ, ವಿಧಿವಿಧಾನಗಳು, ಪಿತೃಪಕ್ಷದ ಬಗ್ಗೆ ಹೇಳಿದ್ದು, ರಾಜಕುಟುಂಬದ ಬಗ್ಗೆ ಹೇಳಿದ್ದು ಎಲ್ಲವನ್ನು ಕೇಳಿ ತುಂಬಾ ಖುಷಿಯಾಯಿತು. ತಾವು ಚುನಾವಣಾ ರಾಜಕೀಯದಲ್ಲಿ ಇನ್ನು ಮುಂದೆ ಸಕ್ರಿಯವಾಗಿ ಇರಲ್ಲ ಎಂದು ಅಂದುಕೊಂಡಿದ್ದೆ. ಆ ನಿರ್ಧಾರ ಇವತ್ತು ಇನ್ನಷ್ಟು ಗಟ್ಟಿಗೊಂಡಿದೆ. ಹೊಸ ಪೀಳಿಗೆಗೆ ಅವಕಾಶ ನೀಡಬೇಕಿದೆ. ನನ್ನ ನಿರ್ಧಾರದೊಂದಿಗೆ ನೀವೆಲ್ಲ ಇರುತ್ತೀರಿ ಎಂದು ನಂಬಿದ್ದೇನೆ ಎಂದು ಹೇಳಿದರು.
2022ರಲ್ಲಿ ಪ್ರಧಾನಿ ಮೋದಿಯವರ ಕಾರ್ಯಕ್ರಮದಲ್ಲಿ ದೆಹಲಿಯಲ್ಲಿ ವಾಮಂಜೂರಿನ ಹರಿ ಉಪಾಧ್ಯಾಯ ಅವರು ಪಾಲ್ಗೊಂಡ ಹಿನ್ನೆಲೆಯಲ್ಲಿ ಈ ಶಿವಪುರಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿತ್ತು.