Advertisement

ಗುತ್ತಿಗಾರು ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ 122 ವರ್ಷ

10:29 PM Nov 10, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಗುತ್ತಿಗಾರು: ಗ್ರಾಮೀಣ ಜನರು ದ್ವೀಪವಾಸಿಗಳಂತೆ ಬದುಕುತ್ತಿದ್ದ ಕಾಲದಲ್ಲಿ “ಬಾಲಶಿಕ್ಷಾ’ ಎನ್ನುವ ಪಠ್ಯಕ್ರಮದೊಂದಿಗೆ ಆರಂಭಗೊಂಡ ಗುತ್ತಿಗಾರಿನ ಮಾದರಿ ಹಿರಿಯ ಪ್ರಾಥಮಿಕ ಶಾಲೆ 122 ವರ್ಷಗಳಿಂದ ನಿರಂತರ ಜ್ಞಾನಜ್ಯೋತಿ ಬೆಳಗುತ್ತಿದೆ.

1897ರಲ್ಲಿ ಮೊಗ್ರ ಮೇಲೆಮನೆ ತಿಮ್ಮಪ್ಪ ಗೌಡರ ಸ್ಥಾಪಕ ಅಧ್ಯಾಪಕತನದೊಂದಿಗೆ ಆರಂಭದಲ್ಲಿ 1ರಿಂದ 4ನೇ ತರಗತಿಯವರೆಗೆ ತರಗತಿಗಳು ನಡೆಯುತ್ತಿದ್ದವು. 1905ರಲ್ಲಿ ಮದ್ರಾಸು ಸಂಸ್ಥಾನದ ಉಪ್ಪಿನಂಗಡಿ ಬೋರ್ಡ್‌ ತರಗತಿಗಳ ಸಂಖ್ಯೆಯನ್ನು 5ರ ವರೆಗೆ ಏರಿಸಿ ಬಳಿಕ 1934ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಉನ್ನತಿಗೊಂಡಿತು. ಆರಂಭದಲ್ಲಿ ಏಕೋಪಾಧ್ಯಾಯ ಶಾಲೆಯಾಗಿದ್ದ ಇಲ್ಲಿ ಸದ್ಯ 12 ಶಿಕ್ಷಕರು 274 ವಿದ್ಯಾರ್ಥಿಗಳು ಬೋಧನೆ ಮಾಡುತ್ತಿದ್ದಾರೆ..

ದಾನಿಗಳ ಕೊಡುಗೆ
ಮುಳಿಹುಲ್ಲಿನ ಛಾವಣಿಯ ಹಂಗಾಮಿ ಕಟ್ಟಡದಲ್ಲಿ ಆರಂಭಗೊಂಡ ಶಾಲೆಗೆ ಸ್ಥಳೀಯರಾದ ಗುತ್ತಿಗಾರು ಬೀರಣ್ಣ ಗೌಡ ಅವರು ತಮ್ಮ ಸ್ವಂತ ನಿವೇಶನ ಹಸ್ತಾಂತರಿಸಿದರು. ಪ್ರಸ್ತುತ ಶಾಲೆಯು 6.20 ಎಕ್ರೆ ಜಮೀನು ಹಾಗೂ ಸದೃಢ ಆರ್‌.ಸಿ.ಸಿ. ಕಟ್ಟಡವನ್ನು ಹೊಂದಿದೆ.

ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು
ಇಲ್ಲಿನ ಹಳೆ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರನ್ನು ಗಳಿಸಿದ್ದಾರೆ. ಹೊಸದಿಲ್ಲಿಯ ಜವಾಹರ್‌ಲಾಲ್‌ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗ ಮುಖ್ಯಸ್ಥ ಡಾ| ಪುರುಷೋತ್ತಮ ಬಿಳಿಮಲೆ, ಮಂಗಳೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಧರ್ಮಪ್ರಕಾಶ್‌ ಸಂಪ್ಯಾಡಿ, ಹೈಕೋರ್ಟ್‌ ಹಿರಿಯ ಶ್ರೇಣಿ ನ್ಯಾಯಾಧೀಶರಾಗಿರುವ ಕಮಲಾಕ್ಷ ಕೆಂಬಾರೆ, ಕಾರ್ಮಿಕ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿರುವ ಬಾಲಕೃಷ ಛತ್ರಪ್ಪಾಡಿ, ಛತ್ತೀಸ್‌ಗಢದಲ್ಲಿ ಡಿಎಫ್ಒ ಆಗಿರುವ ರಾಜೇಶ್‌ ಕಲ್ಲಾಜೆ, 2017ರಲ್ಲಿ ರಾಜ್ಯ ಮಟ್ಟದಲ್ಲಿ 10ನೇ ತರಗತಿಯಲ್ಲಿ ತೃತೀಯ ರ್‍ಯಾಂಕ್‌ ಗಳಿಸಿದ ಆದಿತ್ಯ ಕಾಮತ್‌ ಇದೇ ಶಾಲೆಯಲ್ಲಿ ಕಲಿತವರು. ಎರಡು ಬಾರಿ “ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲೆ’ ಪ್ರಶಸ್ತಿಯೂ ಲಭಿಸಿದೆ. ಈ ಬಾರಿ ಇಲ್ಲಿನ ಬಾಲಕಿಯರ ತಂಡ ರಾಷ್ಟ್ರಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2016ರಲ್ಲಿ ಸ್ವತ್ಛತಾ ಪ್ರಶಸ್ತಿಯೂ ಶಾಲೆಗೆ ಲಭಿಸಿದೆ. 1992ರಲ್ಲಿ ಪ್ರಥಮ ಮುಖ್ಯೋಪಾಧ್ಯಾಯಿನಿಯಾಗಿ ಕೆ. ಜಯಲಕ್ಷಿ ¾à ಅವರು ಅಧಿಕಾರ ವಹಿಸಿಕೊಂಡಿದ್ದದರು.

Advertisement

ಆಂಗ್ಲ ಮಾಧ್ಯಮ ಶಿಕ್ಷಣವೂ ಆರಂಭ
ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಜತೆಗೆ ಶೈಕ್ಷಣಿಕವಾಗಿ ಉತ್ತಮ ಹೆಸರನ್ನು ಗಳಿಸಿರುವ ಗುತ್ತಿಗಾರಿನ ಮಾದರಿ ಹಿ.ಪ್ರಾ. ಶಾಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಿಂದ ಎಲ್‌.ಕೆ.ಜಿ. ಹಾಗೂ ಯು.ಕೆ.ಜಿ. ತರಗತಿಗಳು ನಡೆಯುತ್ತಿವೆ. ಈ ವರ್ಷದಿಂದ ಆಂಗ್ಲಮಾಧ್ಯಮ ತರಗತಿಯೂ ಪ್ರಾರಂಭವಾಗಿದೆ. ನರ್ಸರಿ ಮಕ್ಕಳಿಗೆ ಬೋಧಿಸಲು ಇಬ್ಬರು ಶಿಕ್ಷಕಿಯರು ಹಾಗೂ ಒಬ್ಬರು ಆಯಾ ಇದ್ದಾರೆ. ಅವರಿಗೆ ವಿದ್ಯಾರ್ಥಿಗಳ ಪೋಷಕರೇ ವೇತನ ಭರಿಸುತ್ತಿದ್ದಾರೆ.

ಗ್ರಾಮೀಣ ಜನತೆಯ ಆಶಾಕಿರಣ
ಶಿಕ್ಷಣಕ್ಕಾಗಿ ಸುಳ್ಯ, ಉಪ್ಪಿನಂಗಡಿ, ಕಡಬ ಸಹಿತ ದೂರದೂರಿಗೆ ತೆರಳಬೇಕಿದ್ದ ಕುಗ್ರಾಮ ನಿವಾಸಿಗಳ ಆಶಾಕಿರಣವಾಗಿ ಹೊರಹೊಮ್ಮಿದ್ದು ಗುತ್ತಿಗಾರು ಶಾಲೆ. ಮಡಪ್ಪಾಡಿ, ಕೊಲ್ಲಮೊಗ್ರು, ಕಲ್ಮಕಾರು, ದೇವಚಳ್ಳ, ಗುತ್ತಿಗಾರು, ನಾಲ್ಕೂರು ಗ್ರಾಮಗಳ ಮಕ್ಕಳಿಗೆ ಆಗಿನ ಕಾಲದ ಏಕಮಾತ್ರ ಶಾಲೆ ಇದಾಗಿತ್ತು.

ಊರವರ ನೆರವು ಹಾಗೂ ಪ್ರೋತ್ಸಾಹದಿಂದ ಶಾಲೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ. ಮಕ್ಕಳ ಸಂಖ್ಯೆಯ ವೃದ್ಧಿಗಾಗಿ ಆಂಗ್ಲಮಾಧ್ಯಮ ಹಾಗೂ ಕೆ.ಜಿ. ತರಗತಿಗಳನ್ನು ನಡೆಸುತ್ತಿದ್ದು, ಶಿಕ್ಷಕರ ಕೊರತೆಯ ನಡುವೆಯೂ ಮೌಲ್ಯಯುತ ಶಿಕ್ಷಣ ವಿದ್ಯಾರ್ಥಿಗಳಿಗೆ ಲಭಿಸುತ್ತಿದೆ. ದಾನಿಗಳಿಂದ ರಂಗಮಂದಿರ ಹಾಗೂ ಸ್ಥಳೀಯಾಡಳಿತದ ಸಹಾಯದಿಂದ ಶಾಲೆಯ ಅಭಿವೃದ್ಧಿ ನಡೆದಿದೆ.
-ಕಮಲಾಕ್ಷಿ ಪಿ.,
ಮುಖ್ಯೋಪಾಧ್ಯಾಯಿನಿ

ನಾವು ಕಲಿಯುತ್ತಿರುವ ಕಾಲದಲ್ಲಿ ಮಕ್ಕಳು ಹಾಗೂ ಶಿಕ್ಷಕರು ನಡೆದು ಬರುತ್ತಿದ್ದರೂ ಸಮಯಕ್ಕೆ ಸರಿಯಾಗಿ ಪಾಠ ಪ್ರವಚನಗಳು ನಡೆಯುತ್ತಿದ್ದವು. ಆಗಿನ ಶಿಕ್ಷಕರಾದ ಸಂಪ್ಯಾಡಿ ಮೇದಪ್ಪ ಮಾಸ್ತರ್‌, ಮೊಗ್ರ ರಾಮಣ್ಣ ಮಾಸ್ತರ್‌ ಮೊದಲಾದವರು ತುಂಬಾ ಶಿಸ್ತಿಗೆ ಹೆಸರಾದವರು. ಹಿಂದಿನಿಂದಲೇ ಗುಣಮಟ್ಟದ ಶಿಕ್ಷಣ ನೀಡುತ್ತಾ ಬರುತ್ತಿರುವ ಗುತ್ತಿಗಾರು ಶಾಲೆ ಇತ್ತೀಚಿನ ವರ್ಷಗಳಲ್ಲಿ ಮತ್ತಷ್ಟು ಬೆಳವಣಿಗೆ ಸಾಧಿಸಿ, ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದ ಶಿಕ್ಷಣ ನೀಡುತ್ತಿದೆ.
-ದೇವರಾಜ್‌ ಮುತ್ಲಾಜೆ,
ಯುವಜನ ಕ್ರೀಡಾಧಿಕಾರಿ (ಶಾಲೆಯ ಹಳೆ ವಿದ್ಯಾರ್ಥಿ)

 -ಕೃಷ್ಣಪ್ರಸಾದ್‌ ಕೋಲ್ಚಾರ್‌

Advertisement

Udayavani is now on Telegram. Click here to join our channel and stay updated with the latest news.

Next