ಬೆಳ್ತಂಗಡಿ : ಸುಮಾರು 26 ವರ್ಷಗಳ ಕಾಲ ಅಗ್ನಿಶಾಮಕ ದಳದಲ್ಲಿ, ಬೆಳ್ತಂಗಡಿ ಅಗ್ನಿ ಶಾಮಕ ಠಾಣೆ ಆರಂಭವಾದಾಗಿನಿಂದ ಸುಮಾರು 20 ವರ್ಷಗಳ ಕಾಲ ತಾಲೂಕಿನಲ್ಲಿ ಶ್ಯಾಮ್ ಭೀಮ್ ಹೊಸಮನಿ ಅವರು ಸುದೀರ್ಘ ಸೇವೆ ಸಲ್ಲಿಸಿರುವುದು ಸ್ಮರಣೀಯ. ಇದೀಗ ನಿವೃತ್ತಿ ಹೊಂದುತ್ತಿದ್ದು, ಮುಂದಿನ ಜೀವನದಲ್ಲಿ ಅಭಿವೃದ್ಧಿ ಹೊಂದುವಂತಾಗಬೇಕು ಎಂದು ಬೆಳ್ತಂಗಡಿ ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ ಕ್ಷೇವಿಯಸ್ ಡಿ’ಸೋಜಾ
ಅವರು ಹೇಳಿದರು.
ಅವರು ಗುರುವಾಯನಕೆರೆ ಅಗ್ನಿಶಾಮಕ ಠಾಣೆಯ ಪ್ರಮುಖ ಅಗ್ನಿಶಾಮಕ ಶ್ಯಾಮ್ ಬಿ. ಹೊಸಮನಿ ವಯೋ ನಿವೃತ್ತಿ ಹೊಂದಿದ ಪ್ರಯುಕ್ತ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ನಿವೃತ್ತರಾದ ಪ್ರಮುಖ ಅಗ್ನಿಶಾಮಕ ಶ್ಯಾಮ್ ಬಿ. ಹೊಸಮನಿ ಮಾತನಾಡಿ, ಠಾಣೆಯ ಸಿಬಂದಿ ಸಮಾಜಕ್ಕಾಗಿ ಸೇವೆ ಮಾಡುತ್ತಿದ್ದೇವೆ. ಇನ್ನೊಬ್ಬರ ಜೀವ ಉಳಿಸುವ ಅಮೂಲ್ಯವಾದ ಕಾರ್ಯವನ್ನು ನಿರ್ವಹಿಸುತ್ತಿದ್ದು, ಈ ವೇಳೆ ತಂಡವಾಗಿ ರಕ್ಷಣಾ ಕಾರ್ಯ ಕೈಗೊಳ್ಳುವುದು ಅಗತ್ಯ. ಈಗಾಗಲೇ ಹಲವಾರು ಕಾರ್ಯಾಚರಣೆಗಳಲ್ಲಿ ಜತೆಯಾಗಿ ಕಾರ್ಯ ನಿರ್ವಹಿಸಿದ್ದು ಸ್ಮರಣೀಯ. ಪ್ರತಿಯೊಬ್ಬರೂ ಉತ್ತಮ ಸಹಕಾರ ನೀಡಿದ್ದಾರೆ. ದೂರದೂರಿನಿಂದ ಆಗಮಿಸಿದರೂ ತಾಲೂಕಿನಲ್ಲಿ ಎಲ್ಲವನ್ನೂ ಗಳಿಸಿದ್ದೇನೆ. ಎಲ್ಲರ ಸಹಕಾರ ಮರೆಯುವಂತಿಲ್ಲ ಎಂದರು.
ನಿವೃತ್ತರಾದ ಪ್ರಮುಖ ಅಗ್ನಿಶಾಮಕ ಶ್ಯಾಮ್ ಅವರನ್ನು ಠಾಣೆಯ ಸಿಬಂದಿ ಸ್ಮರಣಿಕೆ ನೀಡಿ ಗೌರವಿಸಿದರು. ಅಗ್ನಿಶಾಮಕ ವಾಹನ ಚಾಲಕ ಶಂಕರ್, ಶ್ಯಾಮ್ ಅವರ ಪತ್ನಿ ಶಾಂತಾ, ಪುತ್ರಿ ಪದ್ಮಿನಿ ಹಾಗೂ ಠಾಣೆಯ ಸಿಬಂದಿ ಉಪಸ್ಥಿತರಿದ್ದರು.