Advertisement

ʼಬಸವಣ್ಣನ ಕಲ್ಯಾಣ ನಗರಕ್ಕೆ ಬಂದಷ್ಟು ಖುಷಿಯಾಗಿದೆ’

03:15 PM Aug 21, 2022 | Team Udayavani |

ಬಂಕಾಪುರ: ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರು, ಶಿಸ್ತು ಬದ್ಧವಾಗಿ ಹಳೆ ಬೇರು ಹೊಸ ಚಿಗುರಿನಂತೆ ಪರಿಶುದ್ಧವಾದ ಎಳನೀರು ನೀಡಿ, ಬೈಕ್‌ ರ್ಯಾಲಿ ಮೂಲಕ ನಮ್ಮನ್ನು ಪುರಪ್ರವೇಶ ಮಾಡಿಕೊಂಡಿರುವ ರೀತಿ ಎಲ್ಲಿಲ್ಲದ ಸಂತಸ ತಂದಿದೆ. ಅಣ್ಣ ಬಸವಣ್ಣನವರ ಕಲ್ಯಾಣ ನಗರಕ್ಕೆ ಬಂದಷ್ಟು ಖುಷಿಯಾಗಿದೆ ಎಂದು ಶ್ರೀ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಮಹಾಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಶ್ರೀ ಫಕೀರೇಶ್ವರ ಮಠದಲ್ಲಿ ನಡೆದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪುರ ಪ್ರವೇಶದ ನಂತರ ನಡೆದ ಗುರುವಂದನೆ, ಸತ್ಸಂಗ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಮನುಷ್ಯನಿಗೆ ಆಸ್ತಿ, ಅಂತಸ್ತು, ಐಶ್ವರ್ಯ, ಅಧಿಕಾರ ಮುಖ್ಯವಲ್ಲ. ನಯ, ವಿನಯ, ಸಂಸ್ಕೃತಿ, ಸಂಸ್ಕಾರಗಳು ಮುಖ್ಯವಾಗಿವೆ. ಶ್ರೀ ಫಕೀರೇಶ್ವರ ಮಠ ಭಾವೈಕ್ಯತೆಯ ಮಠವಾಗಿದ್ದು, ಹಿಂದೂ, ಮುಸಲ್ಮಾನ ಬಾಂಧವರ ಸಾಮರಸ್ಯದ ಸಂಕೇತವಾಗಿದೆ. ಭಕ್ತರ ಆಶೋತ್ತರಗಳನ್ನು ಈಡೇರಿಸುವ ಶಕ್ತಿ ಶಿರಹಟ್ಟಿ ಫಕೀರೇಶ್ವರ ಕರ್ತೃ ಗದ್ದುಗೆಗೆ ಇದೆ. ಹಿಂದೂಗಳಿಗೆ ಶಿವನಾಗಿ, ಮುಸಲ್ಮಾನರಿಗೆ ಅಲ್ಲಾನಾಗಿ ಈ ಕಲಿಯುಗದಲ್ಲೂ ಪ್ರತ್ಯಕ್ಷ ದೈವವಾಗಿ ಅನೇಕ ಪವಾಡಗಳನ್ನು ಮಾಡುವ ಮೂಲಕ ಭಕ್ತರ ಕಷ್ಟಕಾರ್ಪಣ್ಯಗಳನ್ನು ದೂರ ಮಾಡುವ ಶಕ್ತಿ ಪಡೆದವರಾಗಿದ್ದಾರೆ. ಅಂತಹ ಪವಿತ್ರ ಭಾವೈಕ್ಯತೆ ಸಾರುವ ಮಠಕ್ಕೆ ಶ್ರೀ ಜ| ಫಕೀರ ಸಿದ್ಧರಾಮ ಸ್ವಾಮೀಜಿಗಳು ನನ್ನನ್ನು ಉತ್ತರಾಧಿಕಾರಿಗಳನ್ನಾಗಿ ಮಾಡಿರುವುದು ನನಗೆ ಜವಾಬ್ದಾರಿ ಹೆಚ್ಚಿಸಿದಂತಾಗಿದೆ ಎಂದರು.

ಜಗದ್ಗುರುಗಳು ನನ್ನ ಮೇಲಿರಿಸಿದ ವಿಶ್ವಾಸಕ್ಕೆ, ಅವರ ಮನಸ್ಸಿಗೆ ನೋವಾಗದಂತೆ, ಭಕ್ತರ ನಿರೀಕ್ಷೆ ಹುಸಿಯಾಗದಂತೆ ನನ್ನನ್ನು ನಡೆಸಿಕೋ ಎಂದು ಆ ಫಕೀರ ಕತೃì ಜಗದ್ಗುರುಗಳವರಲ್ಲಿ ಬೇಡಿಕೊಳ್ಳುವುದಾಗಿ ಹೇಳಿದರು.

ಸವಣೂರ ಕಲ್ಮಠದ ಶ್ರೀ ಮಹಾಂತಸ್ವಾಮಿಗಳು ಮಾತನಾಡಿ, ಶ್ರೀ ಫಕೀರೇಶ್ವರ ಮಠದ ಪರಂಪರೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ದ್ವೇಷ ಬಿಡು ಪ್ರೀತಿ ಮಾಡು ಎಂಬ ಅವರ ವೇದವಾಕ್ಯ ಮಾನವ ಸಂಕುಲನದ ಹಿರಿಮೆ ಹೆಚ್ಚಿಸಿದಂತಾಗಿದೆ. ಶ್ರೀ ಫಕೀರ ಸಿದ್ಧರಾಮ ಜಗದ್ಗುರುಗಳವರು ಉತ್ತರಾಧಿಕಾರಿಗಳನ್ನಾಗಿ ಶ್ರೀ ದಿಂಗಾಲೇಶ್ವರ ಸ್ವಾಮಿಗಳವರನ್ನು ಆಯ್ಕೆ ಮಾಡಿಕೊಂಡಿರುವುದು ಶ್ರೀ ಮಠದ ಹಿರಿಮೆ ಹೆಚ್ಚಿಸಿದಂತಾಗಿದೆ ಎಂದು ಹೇಳಿದರು.

Advertisement

ಶ್ರೀ ಜ|ಫಕೀರೇಶ್ವರ ವಿಶ್ವಸ್ಥ ಸಮಿತಿ ಅಧ್ಯಕ್ಷ ಮೇಘರಾಜ ಕೂಲಿ ಮಾತನಾಡಿದರು. ಅರಳೆಲೆ ಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಅಧ್ಯಕತೆ ವಹಿಸಿದ್ದರು.

ಸದಾಶಿವಪೇಟೆ ಶ್ರೀ ಗದಿಗೇಶ್ವರ ಸ್ವಾಮೀಜಿ, ಶ್ರೀ ಶಿವದೇವ ಶರಣರು, ಕೆಂಡದಮಠದ ಶ್ರೀ ಸಿದ್ದಯ್ಯಸ್ವಾಮೀಜಿ, ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ, ಸೇವಾರ್ಥಿಗಳಾದ ದೇವರಾಜ ರಾಮಣ್ಣವರ, ಈರಣ್ಣ ಕೂಲಿ, ವಿರೂಪಾಕ್ಷಿ ಕೆರಿಗೌಡ್ರ, ಬಸವರಾಜ ಕೂಲಿ, ಸಿದ್ದಪ್ಪ ಬಾರಿಗಿಡದ, ಫಕ್ಕೀರೇಶ ಬೆಂಚಳ್ಳಿ, ಫಕ್ಕೀರಯ್ಯ ಕಟಗಿಮಠ, ಶಿವಣ್ಣ ಸೊಲಬಣ್ಣವರ, ವಿನಾಯಕ ಕೂಲಿ, ಜಯಾ ವನಹಳ್ಳಿ, ಫಕ್ಕೀರೇಶ ಹಿರೇಮಠ, ಮಣಿಕಂಠ ಕಟಗಿಮಠ, ಈರಣ್ಣ ಕರಿಮಾಳಮಠ, ಗಂಗಾಧರ ಮಾ.ಪ.ಶೆಟ್ಟರ, ಮುಖೇಶ ಜೈನ್‌ ಇತರರಿದ್ದರು.

ಶ್ರೀ ಜ|ಫಕೀರ ಸಿದ್ಧರಾಮ ಸ್ವಾಮೀಜಿಗೆ 2023ಕ್ಕೆ 75 ವಸಂತಗಳು ತುಂಬಲಿವೆ. ಅವರ ಅಮೃತ ಮಹೋತ್ಸವದ ಸವಿನೆನಪಿಗಾಗಿ ಸುವರ್ಣ ತುಲಾಭಾರ ಸೇವೆ ಮಾಡಲು ತೀರ್ಮಾನಿಸಲಾಗಿದೆ. ಅದರಿಂದ ಬರುವ ಆದಾಯವನ್ನು ಬಡ ಮಕ್ಕಳ ಉಚಿತ ಶಿಕ್ಷಣಕ್ಕೆ ಬಳಸಲಾಗುವುದು. –ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next