ಉಡುಪಿ : ಇಂಗ್ಲಂಡ್‌ನ ಬರ್ಮಿಂಗ್ ಹ್ಯಾಂನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ಜಿಲ್ಲೆಗೆ ಆಗಮಿಸಿದ ಕುಂದಾಪುರದ ಗುರುರಾಜ ಪೂಜಾರಿ ಅವರನ್ನು ಜಿಲ್ಲಾಡಳಿತದ ವತಿಯಿಂದ ಅಜ್ಜರಕಾಡು ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ನೇತೃತ್ವದಲ್ಲಿ ಅದ್ದೂರಿ ಯಾಗಿ ಸ್ವಾಗತಿಸಲಾಯಿತು.
ಬಳಿಕ ನಡೆದ ಅಭಿನಂದನ ಕಾರ್ಯಕ್ರಮ ದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎಡಿಸಿ ವೀಣಾ ಬಿ.ಎನ್., ಪೌರಾಯುಕ್ತ ಡಾ| ಉದಯ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ ಸಮ್ಮಾನಿಸಿದರು.
ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅವಧಿಯಲ್ಲಿ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಪದಕ ಪಡೆಯುವ ಮೂಲಕ ಗುರುರಾಜ ಅವರು ಉಡುಪಿ ಜಿಲ್ಲೆಯ ಸಂಭ್ರಮವನ್ನು ಹೆಚ್ಚಿಸಿದ್ದು, ದೇಶದಲ್ಲಿ ಜಿಲ್ಲೆಯ ಹೆಸರನ್ನು ಪ್ರಖ್ಯಾತಗೊಳಿಸಿದ್ದಾರೆ. ಗ್ರಾಮೀಣ ಪ್ರದೇಶದ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಹ ಉನ್ನತ ಸಾಧನೆಗಳನ್ನು ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿರುವ ಇವರ ಸಾಧನೆ ಜಿಲ್ಲೆಯ ಯುವಜನತೆಗೆ ಹಾಗೂ ಕ್ರೀಡಾಪಟುಗಳಿಗೆ ಸದಾ ಸ್ಫೂರ್ತಿಯಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಸರಕಾರದ ಪ್ರೋತ್ಸಾಹ ಸಾಲದು
ರಾಜ್ಯ ಸರಕಾರ ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ನೀಡಬೇಕು. ಹರಿಯಾಣ, ಪಂಜಾಬ್ ಸರಕಾರಗಳು ಕಂಚು ವಿಜೇತರಾದವರಿಗೂ 40-50 ಲ.ರೂ.ಗಳನ್ನು ಘೋಷಣೆ ಮಾಡಿವೆ. ಆದರೆ ಕರ್ನಾಟಕ ಸರಕಾರ ನನಗೆ 8 ಲ.ರೂ. ಮಾತ್ರ ಘೋಷಿಸಿದೆ. ಇದರ ತರಬೇತಿ ಬಹಳ ದುಬಾರಿಯಾಗಿದ್ದು, ತಿಂಗಳಿಗೆ 30ರಿಂದ 40 ಸಾವಿರ ರೂ. ಬೇಕಾಗುತ್ತದೆ. ಪ್ರಸ್ತುತ ಚಂಡೀಗಢದಲ್ಲಿ ಏರ್‌ಫೋರ್ಸ್ ನಲ್ಲಿ ಉದ್ಯೋಗದಲ್ಲಿದ್ದು, ನಮ್ಮ ರಾಜ್ಯದಲ್ಲಿ ಉದ್ಯೋಗಾವಕಾಶ ಕಲ್ಪಿಸಿದರೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಗುರುರಾಜ್ ಹೇಳಿದರು. ಪ್ರಶಸ್ತಿಯನ್ನು ಪತ್ನಿಗೆ ಅರ್ಪಿಸಿದ ಅವರು ಕ್ರೀಡಾಪಟುಗಳು ನಿರ್ದಿಷ್ಟ ಗುರಿ ಯೊಂದಿಗೆ ಕಠಿನ ಪರಿಶ್ರಮ ಪಟ್ಟರೆ ಉನ್ನತ ಸಾಧನೆ ಮಾಡಲು ಸಾಧ್ಯ ಎಂದರು.
ಗುರುರಾಜರ ತಂದೆ, ಪತ್ನಿ, ಅಜ್ಜರಕಾಡು ಕ್ರೀಡಾ ವಸತಿ ಶಾಲೆಯ ಕ್ರೀಡಾಪಟುಗಳು, ನೇಶನ್ ಫಸ್ಟ್ ತಂಡದ ಸದಸ್ಯರು ಇದ್ದರು.