ಬಾಳೆಹೊನ್ನೂರು: ಆಧ್ಯಾತ್ಮ ಲೋಕದಲ್ಲಿ ಗುರುವಿಗೆ ಮೊದಲ ಸ್ಥಾನವಿದೆ. ಶಿಷ್ಯನ ಅಜ್ಞಾನ ಕಳೆದು ಬದುಕಿಗೆ ಬೆಳಕು ನೀಡುವುದು ಗುರುವಿನ ಧರ್ಮ. ಗುರು ಪೂರ್ಣಿಮೆಯ ದಿನ ಗುರುವಿಗೆ ಕೃತಜ್ಞತೆ ಸಲ್ಲಿಸುವುದೇ ಮೂಲ ಉದ್ದೇಶವಾಗಿದೆ ಎಂದು ಶ್ರೀ ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಭಾನುವಾರ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದಲ್ಲಿ ಗುರುಪೂರ್ಣಿಮೆ ಅಂಗವಾಗಿ ಶ್ರೀ ರಂಭಾಪುರಿ ಗುರು ಭವನದಲ್ಲಿ ಜರುಗಿದ ಪಾದಪೂಜೆ – ಧರ್ಮ ಸಂದೇಶ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮಾನವ ಜೀವನದಲ್ಲಿ ಗುರು ಮತ್ತು ಗುರಿ ಮುಖ್ಯ. ಗುರಿ ಸಾಧನೆಗೆ ಆತ್ಮವಿಕಾಸಕ್ಕೆ ಗುರು ಬೋಧಾಮೃತ ಮೂಲ. ಅಂಗ ಅವಗುಣಗಳನ್ನು ದೂರ ಮಾಡಿ ಲಿಂಗಗುಣ ಸಂಪನ್ನತೆ ಉಂಟು ಮಾಡುವ ಮಹತ್ಕಾರ್ಯ ಗುರುವಿನಿಂದ ಸಾಧ್ಯ ಹೊರತು ಬೇರಾರಿಂದಲ್ಲ ಎಂದರು.
ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಮಳಲಿಮಠದ ಡಾ| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಚಳಗೇರಿ ಹಿರೇಮಠದ ಸಿದ್ಧವೀರ ಶಿವಾಚಾರ್ಯ ಸ್ವಾಮಿಗಳು ಶ್ರೀ ಜಗದ್ಗುರುಗಳವರ ಪಾದಪೂಜೆ ನೆರವೇರಿಸಿದರು. ನಂತರ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಬ್ರಹ್ಮಾಂಡ ಗುರೂಜಿ ಅವರು ಶ್ರೀ ಪೀಠಕ್ಕೆ ಭೇಟಿ ನೀಡಿ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ, ಶಕ್ತಿಮಾತೆ ಶ್ರೀ ಚೌಡೇಶ್ವರಿ ಅಮ್ಮನವರು, ಲಿಂಗೈಕ್ಯ ಶ್ರಿ ಜಗದ್ಗುರುಗಳ ಗದ್ದುಗೆ ಸಾಲು, ಶ್ರೀ ರೇಣುಕಾಚಾರ್ಯ ಮೂರ್ತಿ, ಶ್ರೀ ಸೋಮೇಶ್ವರ ದೇವಾಲಯಗಳಿಗೆ ಪೂಜೆ ಸಲ್ಲಿಸಿ ನಂತರ ಪಾದ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಇದೇ ಸಂದರ್ಭದಲ್ಲಿ ಸಿದ್ಧರಬೆಟ್ಟ ಶ್ರೀಗಳು ಮತ್ತು ಶಿಕ್ಷಣ ತಜ್ಞ ಮೈಲಾರಪ್ಪ ಪಾಲ್ಗೊಂಡು ಗುರುಗಳ ಮಹತ್ವದ ಕುರಿತು ಮಾತನಾಡಿದರು.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪುತ್ರ ಚಿದಾನಂದ, ಆಪ್ತ ಸಹಾಯಕ ಡಾ| ಜಯಶಂಕರ, ಬೆಂಗಳೂರಿನ ಪ್ರಸನ್ನ ಕುಮಾರ್, ಕಲಬುರ್ಗಿ ಶಿವಶರಣಪ್ಪ ಸೀರಿ ಮತ್ತಿತರ ಗಣ್ಯರು ಇದ್ದರು. ವೇ.ದಾರುಕ ಶಾಸ್ತ್ರಿಗಳಿಂದ ವೇದಘೋಷ ಪ್ರಾರ್ಥನೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.