Advertisement

ಗುರು ಪೌರ್ಣಮಿಗೆ ಮೊಳಗಿದ ಗುರುನಾಮ ಸ್ಮರಣೆ

09:24 PM Jul 16, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ್ಯ ಅಷಾಢ ಮಾಸದ ಗುರು ಪೌರ್ಣಮಿ ಪ್ರಯುಕ್ತ ಮಂಗಳವಾರ ಶಿರಡಿ ಸಾಯಿಬಾಬಾ ದೇವಾಲಯಗಳಿಗೆ ಬೆಳಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪೂಜಾ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸುವ ಮೂಲಕ ಗುರುಗಳ ಕೃಪೆಗೆ ಪಾತ್ರರಾದರು.

Advertisement

ಜಿಲ್ಲಾ ಕೇಂದ್ರದಲ್ಲಿ ಗುರು ಪೌರ್ಣಮಿ ಸಡಗರ ಕಳೆಗಟ್ಟಿತ್ತು. ನಗರದ ಸರ್‌ ಎಂ.ವಿ. ಜಿಲ್ಲಾ ಕ್ರೀಡಾಂಗಣದ ರಸ್ತೆಯಲ್ಲಿರುವ ಸುಬ್ರಹ್ಮಣ್ಯೇಶ್ವರ, ಶನೇಶ್ವರ ಹಾಗೂ ಶಿರಡಿ ಸಾಯಿಬಾಬ ದೇವಾಲಯದಲ್ಲಿ 21 ನೇ ವರ್ಷದ ಗುರು ಪೌರ್ಣಮಿಯನ್ನು ಭಕ್ತರು ಆಚರಿಸಿದರು.

ಬೆಳಗ್ಗೆಯಿಂದ ವಿಶೇಷ ಪೂಜೆ, ಅಭಿಷೇಕ, ದತ್ತಾತ್ರೇಯ ಹೋಮ, ಶಿರಡಿ ಸಾಯಿಬಾಬಾ ಹೋಮ, ಹವನ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು.

ಎಪಿಎಂಸಿ ಲೇಔಟ್‌ನಲ್ಲಿ ಸಂಭ್ರಮ: ನಗರದ ಗೌರಿಬಿದನೂರು ರಸ್ತೆಯ ಎಪಿಎಂಸಿ ಲೇಔಟ್‌ನಲ್ಲಿರುವ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಕೂಡ 6 ನೇ ವರ್ಷದ ಗುರು ಪೌರ್ಣಮಿಯನ್ನು ಭಕ್ತರು ಆಚರಿಸಿದರು. ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಂಜೆ ನಡೆದ ಶ್ರೀನಿವಾಸ ಕಲ್ಯಾನೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

ದೇವಾಲಯಗಳಲ್ಲಿ ಜನ ಸಾಗರ: ಸಾಯಿಬಾಬಾ ದೇವಾಲಯಗಳು ಮಾತ್ರವಲ್ಲದೇ ನಗರದ ಹೊರ ವಲಯದ ಇತಿಹಾಸ ಪ್ರಸಿದ್ಧ ನಂದಿ ಬೋಗನಂದೀಶ್ವರ, ನಂದಿಗಿರಿಧಾಮದ ಯೋಗನಂದೀಶ್ವರ, ನಗರದ ಗಂಗಮ್ಮ ಗುಡಿ ರಸ್ತೆಯಲ್ಲಿರುವ ಜಾಲಾರಿ ಗಂಗಮ್ಮದೇವಿ, ಮಹಾಕಾಳಿ ದೇವಾಲಯಕ್ಕೆ ಭಕ್ತರು ಭೇಟಿ ನೀಡಿ ಭಕ್ತರು ಪೂಜೆ ಸಲ್ಲಿಸಿದರು.

Advertisement

ಹಾರೋಬಂಡೆ ಸಾಯಿ ಮಂದಿರ: ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ಹಾರೋಬಂಡೆ ಸಮೀಪ ನಿರ್ಮಿಸಲಾಗಿರುವ ಶಿರಡಿ ಸಾಯಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು. ದೇವಾಲಯದ ಧರ್ಮದರ್ಶಿ ಜಿ.ಎಚ್‌.ನಾಗರಾಜ್‌ ಉಪಸ್ಥಿತರಿದ್ದರು.

ದೇಗುಲಗಳಿಗೆ ದೀಪಾಲಂಕಾರ: ಜಿಲ್ಲೆಯ ಸಾಯಿಬಾಬಾ ಮಂದಿರಗಳು ವಿದ್ಯುತ್‌ ದೀಪಾಲಂಕಾರಗಳೊಂದಿಗೆ ಕಂಗೊಳಿಸಿದವು. ನಗರದ ಸರ್‌ ಎಂ.ವಿ. ಕ್ರೀಡಾಂಗಣ, ಎಂಜಿ ರಸ್ತೆ, ಮಹಾಕಾಳಿ ರಸ್ತೆ ಮತ್ತಿತರ ಕಡೆಗಳಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು.

ಪಲ್ಲಕ್ಕಿ ಉತ್ಸವ, ಸಾಂಸ್ಕೃತಿಕ ಕಲರವ: ನಗರದಲ್ಲಿ ಇಳಿಸಂಜೆಯ ಹೊತ್ತಿನಲ್ಲಿ ಸಾಯಿಬಾಬಾ ಭಾವಚಿತ್ರಗಳ ಸಮೇತ ನಗರದ ಮುಖ್ಯ ಬೀದಿಗಳಲ್ಲಿ ನಡೆದ ಆಕರ್ಷಕ ಹೂವಿನ ಪಲ್ಲಕ್ಕಿ ರಥೋತ್ಸವ ಜನಾಕರ್ಷಣಿಯವಾಗಿತ್ತು. ದೇವಾಲಯಗಳಲ್ಲಿ ಗುರು ಪೌರ್ಣಿಮೆ ಪ್ರಯುಕ್ತ ವೀರಗಾಸೆ, ಡೊಳ್ಳು ಕುಣಿತ, ಸಂಗೀತ ಕಚೇರಿ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ತಲೆತೂಗುವಂತೆ ಮಾಡಿದವು.

Advertisement

Udayavani is now on Telegram. Click here to join our channel and stay updated with the latest news.

Next